ಶನಿವಾರ, ಸೆಪ್ಟೆಂಬರ್ 18, 2021
30 °C

ರಾಜ್ಯಮಟ್ಟದ ನಾಯಕರ ಬದಲು ‘ಉಸ್ತುವಾರಿ’ಯ ನೇತೃತ್ವದಲ್ಲಿ ಕಾಂಗ್ರೆಸ್‌ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ವಿಚಾರದಲ್ಲಿ ಸೃಷ್ಟಿಯಾಗಿರುವ ‘ಬಣ ರಾಜಕೀಯ’ ನಿಯಂತ್ರಿಸಿ, ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿರುವ ಕಾಂಗ್ರೆಸ್‌ ಹೈಕಮಾಂಡ್‌, ರಾಜ್ಯಮಟ್ಟದ ನಾಯಕರ ಬದಲು, ಪಕ್ಷದ ‘ಉಸ್ತುವಾರಿ’ಯ ನೇತೃತ್ವದಲ್ಲಿ ವಲಯಮಟ್ಟದಲ್ಲಿ ಸಭೆಗಳನ್ನು ನಡೆಸುತ್ತಿದೆ.

ಕೆಪಿಸಿಸಿಗೆ ಶೀಘ್ರದಲ್ಲಿ ನೂತನ ಪದಾಧಿಕಾರಿಗಳ ನೇಮಕ ನಡೆಯಲಿದೆ. ಪಟ್ಟಿ ಹೊರಬೀಳುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಬಲಿಗರ ಮಧ್ಯೆ ಸಂಘರ್ಷ ಉಂಟಾಗಬಾರದೆಂಬ ಕಾರಣಕ್ಕೆ, ಬ್ಲಾಕ್‌ಮಟ್ಟದಿಂದಲೇ ಎಚ್ಚರಿಕೆ ವಹಿಸಲು ವರಿಷ್ಠರು ಮುಂದಾಗಿದ್ದಾರೆ.

ಶಾಸಕ ಜಮೀರ್‌ ಅಹ್ಮದ್‌ ಖಾನ್‌ ನೀಡಿದ್ದ ‘ಭಾವಿ ಮುಖ್ಯಮಂತ್ರಿ’ ಹೇಳಿಕೆ ಇತ್ತೀಚೆಗೆ ಕಾಂಗ್ರೆಸ್‌ನಲ್ಲಿ ತೀವ್ರ ತಿಕ್ಕಾಟಕ್ಕೆ ಕಾರಣವಾಗಿತ್ತು. ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಮತ್ತು ತಟಸ್ಥ ನಾಯಕರ ಬಣಗಳು ರಂಗಕ್ಕಿಳಿದಾಗ ಅದಕ್ಕೆ ಕಡಿವಾಣ ಹಾಕಲು ಹೈಕಮಾಂಡ್ ಅನಿವಾರ್ಯವಾಗಿ ಮಧ್ಯಪ್ರವೇಶಿಸಿತ್ತು.

‘ರಾಹುಲ್‌ ಗಾಂಧಿ ಅವರ ಸೂಚನೆಯಂತೆ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಡಿ.ಕೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರನ್ನು ಅಕ್ಕಪಕ್ಕದಲ್ಲಿ ಕುಳ್ಳಿರಿಸಿಕೊಂಡು ವಲಯವಾರು ಸಭೆಗಳನ್ನು ನಡೆಸುತ್ತಿದ್ದಾರೆ. ಅಲ್ಲದೆ, ಸ್ಥಳೀಯ ನಾಯಕರಲ್ಲಿ ಪರಸ್ಪರ ಭಿನ್ನಾಭಿಪ್ರಾಯ ಮೂಡದಂತೆ ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದಾರೆ. ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಶೀಘ್ರ ಹೊರಬೀಳಲಿದೆ. ಹೀಗಾಗಿ, ಒಗ್ಗಟ್ಟು ಅನಿವಾರ್ಯವಾಗಿದೆ’ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದರು.

‘ಈ ಹಿಂದೆ ರಾಜ್ಯ ನಾಯಕರ ನೇತೃತ್ವದಲ್ಲಿ ವಲಯಮಟ್ಟದ ಸಭೆ ನಡೆಯುತ್ತಿತ್ತು. ಮೊದಲ ಬಾರಿಗೆ ಉಸ್ತುವಾರಿಯ ಉಪಸ್ಥಿತಿಯಲ್ಲಿ ನಡೆಯುತ್ತಿದೆ. ಹುಬ್ಬಳ್ಳಿ, ತುಮಕೂರು, ಮಂಗಳೂರು, ಮೈಸೂರು ವಲಯಗಳಲ್ಲಿ 18ಕ್ಕೂ ಹೆಚ್ಚು ಜಿಲ್ಲೆಗಳ ಮುಖಂಡರ ಜೊತೆ ಸುರ್ಜೇವಾಲ ಮುಖಾಮುಖಿ ಸಭೆ ನಡೆಸಿದ್ದಾರೆ. ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಅವರನ್ನು ಜೊತೆಯಲ್ಲೇ ಕರೆದುಕೊಂಡು ಸರಣಿ ಸಭೆ ನಡೆಸುತ್ತಿದ್ದಾರೆ. ಆ ಮೂಲಕ, ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಚರ್ಚೆ ನಡೆಸುತ್ತಿದ್ದಾರೆ. ಜಿಲ್ಲಾ ಮುಖಂಡರ ನಡುವಿನ ಗೊಂದಲಗಳನ್ನು ಎಲ್ಲರ ಸಮ್ಮುಖದಲ್ಲೇ ಸುರ್ಜೇವಾಲಾ ಬಗೆಹರಿಸುತ್ತಿದ್ದಾರೆ. ಆ ಮೂಲಕ, ಬಣಗಳ ಮೇಲಾಟಕ್ಕೆ ಕಡಿವಾಣ ಹಾಕುವುದು ಅವರ ಉದ್ದೇಶ’ ಎಂದೂ ಕಾಂಗ್ರೆಸ್‌ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು