ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ಇಂದು ನಿಲುವಳಿ ಸೂಚನೆ

ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಮೂಲಕ ಕೇಂದ್ರದಿಂದ ಮೋಸ: ಸಿದ್ದರಾಮಯ್ಯ
Last Updated 13 ಸೆಪ್ಟೆಂಬರ್ 2021, 19:28 IST
ಅಕ್ಷರ ಗಾತ್ರ

ಬೆಂಗಳೂರು: ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿದ್ದು, ಈ ಬಗ್ಗೆ ಮಂಗಳವಾರ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿ ಅವರು, ರಾಜ್ಯದ ಜನರ ಕಾಳಜಿಯಿಂದ ಈ ವಿಷಯ ಪ್ರಸ್ತಾಪಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಕೇಂದ್ರ, ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ಬಿಜೆಪಿಯವರಯ ಗಮನಿಸುವುದು ಒಳ್ಳೆಯದು ಎಂದರು.

ಕೇಂದ್ರ ಸರ್ಕಾರದಿಂದ ಮೋಸ: ಕಚ್ಛಾ ತೈಲ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ ಆಗಿದೆ ಎಂಬ ನೆಪ ಹೇಳಿ ಪೆಟ್ರೋಲ್‌, ಡೀಸೆಲ್ ದರ ಏರಿಸುವ ಮೂಲಕ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಮೋಸ ಮಾಡುತ್ತಿದೆ ಎಂದು ಸಿದ್ದರಾಮಯ್ಯ ದೂರಿದರು.

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರ ಕಡಿತಗೊಳಿಸಬೇಕು. ಈ ತೆರಿಗೆ ಪ್ರಮಾಣವು ಮನಮೋಹನ್‌ಸಿಂಗ್‌ ಪ್ರಧಾನಿ ಆಗಿದ್ದಾಗ ಮತ್ತು ಈಗ ಎಷ್ಟು ಇದೆ ಎಂಬುದನ್ನು ಮಾಧ್ಯಮಗಳೇ ಪರಿಶೀಲಿಸಲಿ. ಮುಖ್ಯಮಂತ್ರಿ ಬೊಮ್ಮಾಯಿ ಅವರಾದರೂ ಜನರಿಗೆ ನಿಜಾಂಶ ವಿವರಿಸಲಿ ಎಂದರು.

ವಾಜಪೇಯಿ ಅವರು 1973ರಲ್ಲಿ ಬೆಲೆ ಏರಿಕೆ ವಿರೋಧಿಸಿ ಎತ್ತಿನ ಗಾಡಿಯಲ್ಲಿ ಸಂಸತ್ತಿಗೆ ಬಂದಿರಲಿಲ್ಲವೇ? ಕಾಂಗ್ರೆಸ್‌ ಪ್ರತಿಭಟನೆಯನ್ನು ವಿರೋಧಿಸುವ ಮುಖ್ಯಮಂತ್ರಿ ಹಾಗೂ ಬಿಜೆಪಿಯವರು ಇತಿಹಾಸ ಓದಲಿ. ಆಗ ವಾಜಪೇಯಿಯವರು ಏಕೆ ಪ್ರತಿಭಟಿಸಿದರು? ಜನ ಬೀದಿಗೆ ಇಳಿದಿದ್ದರೆ? ಯುಪಿಎ ಸರ್ಕಾರದ ಅವಧಿಯಲ್ಲಿ ಸ್ವಲ್ಪ ಬೆಲೆ ಏರಿಕೆಯಾದಾಗ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಸಿಲಿಂಡರ್‌ ತಲೆ ಮೇಲೆ ಹೊತ್ತು ಧರಣಿ ಮಾಡಿರಲಿಲ್ಲವೇ ಎಂದು ಪ್ರಶ್ನಿಸಿದರು.

ಮನಮೋಹನ್‌ ಸಿಂಗ್‌ ಅವರು ಪ್ರಧಾನಿ ಆಗಿದ್ದಾಗ ಡೀಸೆಲ್‌ ಮೇಲಿನ ತೆರಿಗೆ ₹3.45 ಇತ್ತು. ಈಗ ₹31.74 ಆಗಿದೆ. ಅದೇ ರೀತಿ ಪೆಟ್ರೋಲ್‌ ಮಾರಾಟದ ಮೇಲಿನ ತೆರಿಗೆ ₹9.21 ಇತ್ತು. ಅದು ₹32.98 ಕ್ಕೆ ಏರಿಕೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT