ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ.ಡಿ. ಕಚೇರಿಯತ್ತ ಹೊರಟ ಕಾಂಗ್ರೆಸ್‌ ರ್‍ಯಾಲಿ ಅರ್ಧದಲ್ಲೇ ತಡೆದ ಪೊಲೀಸರು

Last Updated 13 ಜೂನ್ 2022, 9:24 IST
ಅಕ್ಷರ ಗಾತ್ರ

ಬೆಂಗಳೂರು: ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಯತ್ತ ಹೊರಟ ಕಾಂಗ್ರೆಸ್ ಪ್ರತಿಭಟನಾ ರ‍್ಯಾಲಿಯನ್ನು ಅರ್ಧದಲ್ಲಿಯೇ ತಡೆದು, ಪ್ರತಿಭಟನಕಾರರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.

ಲಾಲ್ ಬಾಗ್ ಮುಖ್ಯ ದ್ವಾರದಿಂದ ಇಡಿ ಕಚೇರಿಯತ್ತ ‘ಕೈ’ ಮುಖಂಡರು, ಕಾರ್ಯಕರ್ತರು ಹೆಜ್ಜೆ ಹಾಕಿದರು. ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಮುಂಚೂಣಿಯಲ್ಲಿ ಇದ್ದರು. ಸ್ವಲ್ಪ ದೂರ ಸಾಗುತ್ತಿದ್ದಂತೆ ಪೊಲೀಸರು ತಡೆದರು. ಆಗ ಬ್ಯಾರಿಕೇಡ್ ಮೇಲೇರಿದ ಕಾಂಗ್ರೆಸ್ ನಾಯಕರು, ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಶಾಸಕರಾದ ಪ್ರಿಯಾಂಕ್ ಖರ್ಗೆ, ಅಂಜಲಿ ನಿಂಬಾಳ್ಕರ್ ಸೇರಿದಂತೆ ಹಲವರು ಬ್ಯಾರಿಕೇಡ್ ಮೇಲೆ ನಿಂತು ಘೋಷಣೆ ಕೂಗಿದರು. ಬಳಿಕ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಪ್ರತಿಭಟನೆಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ‘ಇದೊಂದು ಐತಿಹಾಸಿಕ ಹೋರಾಟ. ನಮ್ಮದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಜನರ ಧ್ವನಿಯಾಗಿ ಕೆಲಸ ಮಾಡುತ್ತಿತ್ತು. ಸೋನಿಯಾಗಾಂಧಿಗೆ ಪ್ರಧಾನಿ ಸ್ಥಾನ ಒಲಿದು ಬಂದಿತ್ತು. ಆದರೆ, ಅದನ್ನು ಅವರು ನಿರಾಕರಿಸಿದ್ದರು. ದೇಶದ ಆರ್ಥಿಕ ತಜ್ಞ ಮನಮೋಹನ್ ಸಿಂಗ್‌ಗೆ ತ್ಯಾಗ ಮಾಡಿದ್ದರು. ರಾಹುಲ್ ಗಾಂಧಿ ದೇಶದ ಪ್ರಧಾನಿ ಆಗಬಹುದಾಗಿತ್ತು. ಅವರು ಎಂದೂ ಅಧಿಕಾರಕ್ಕಾಗಿ ಹಿಂದೆ ಬೀಳಲಿಲ್ಲ. ಇಂದಿರಾಗಾಂಧಿ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಕಿರುಕುಳ ಕೊಡಲು ಹೊರಟಿದ್ದಾರೆ. ಇದು ಎಂದಿಗೂ ಸಾಧ್ಯವಿಲ್ಲ’ ಎಂದರು.

‘ಪ್ರತಿಭಟನೆ ಮಾಡುವ ಹಾಗಿಲ್ಲ ಎಂದು ಪೊಲೀಸ್‌ನವರು ಪತ್ರ ಬರೆದಿದ್ದರು. ಪ್ರತಿಭಟನೆ ಮಾಡುವುದು ನಮ್ಮ ಮೂಲಭೂತ ಹಕ್ಕು. ಬಿಜೆಪಿ ವಿರುದ್ಧ ಯಾರೂ ಧ್ವನಿ ಎತ್ತುವ ಹಾಗಿಲ್ಲ. ನಮ್ಮ ವಶಕ್ಕೆ ಪಡೆದ ಪೊಲೀಸರು, ಪರಪ್ಪನ ಅಗ್ರಹಾರಕ್ಕಾದರೂ ಕರೆದುಕೊಂಡು ಹೋಗಲಿ. ಏನು ಬೇಕಾದರೂ ಮಾಡಲಿ. ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದರು.

ಶಾಸಕ ಜಿ. ಪರಮೇಶ್ವರ ಮಾತನಾಡಿ, ‘ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿಚಾರದಲ್ಲಿ ರಾಹುಲ್ ಗಾಂಧಿಯನ್ನು ವಿಚಾರಣೆ ನಡೆಸುವಂಥದ್ದು ಏನಿದೆ. ರಾಜ್ಯಸಭಾ ವಿರೋಧ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಆಸ್ಕರ್ ಫರ್ನಾಂಡಿಸ್ ಬಳಿಕ ಖರ್ಗೆ ಅವರನ್ನು ಟ್ರಸ್ಟ್ ಗೆ ಸದಸ್ಯರನ್ನಾಗಿ ಮಾಡಲಾಗಿದೆ. ಖರ್ಗೆ ಅವರನ್ನು 6 ಗಂಟೆ ಕಾಲ ಇಡಿ ವಿಚಾರಣೆ ನಡೆಸಿದೆ. ಆರು ಗಂಟೆಗಳ ಕಾಲ ವಿಚಾರಣೆ ನಡೆಸುವಂಥದ್ದು ಏನಿದೆ. ಪ್ರಕರಣದಲ್ಲಿ ಏನೂ ಇಲ್ಲವೆಂದು ಬಿಜೆಪಿ ಸರ್ಕಾರ ಇದ್ದಾಗಲೇ ಕೇಸ್ ಮುಕ್ತಾಯ ಮಾಡಲಾಗಿತ್ತು. ಈಗ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಹೆದರುವುದಿಲ್ಲ’ ಎಂದರು.

ವಾಹನ ದಟ್ಟಣೆ: ಪ್ರತಿಭಟನೆಯಿಂದಾಗಿ ಶಾಂತಿನಗರ, ಲಾಲ್ ಬಾಗ್ ಸುತ್ತಮುತ್ತ ಭಾರಿ ಸಂಚಾರ ದಟ್ಟಣೆ ಉಂಟಾಯಿತು. ಸಂಚಾರ ದಟ್ಟಣೆ ತಪ್ಪಿಸಲು ಪೋಲಿಸರ‌ ಹರಸಾಹಸಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT