ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ರಿಂದ ಅವಕಾಶ, ಬೇರೆಯವರು ಅವಕಾಶವಾದಿಗಳು; ₹8 ಕೋಟಿ ವಂಚಿಸಿಲ್ಲ ಎಂದ ರಮ್ಯಾ

ಅಕ್ಷರ ಗಾತ್ರ

ಬೆಂಗಳೂರು: ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬೆಂಬಲಿಗರ ನಡುವಿನ ಟ್ವೀಟ್‌ ಸಮರ ತಾರಕಕ್ಕೇರಿದೆ.

ರಮ್ಯಾ ಅವರಿಗೆ ಕಾಂಗ್ರೆಸ್‌ ಸದಸ್ಯತ್ವ ನೀಡಿದ್ದು, ಕಾಂಗ್ರೆಸ್‌ನಿಂದ ಸಂಸದೆಯನ್ನಾಗಿ ಮಾಡಿದ್ದು ಡಿಕೆಶಿ ಎಂದು ಅವರ ಬೆಂಬಲಿಗರು ಟ್ವೀಟಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಮ್ಯಾ, ನನಗೆ ಅವಕಾಶ ನೀಡಿದ್ದು, ನನ್ನ ಪರ ನಿಂತಿದ್ದು ಕೇವಲ ರಾಹುಲ್‌ ಗಾಂಧಿ ಎಂದು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ನನಗೆ ಅವಕಾಶ ಕೊಟ್ಟವರು ಮತ್ತು ನನ್ನ ಪರವಾಗಿ ನಿಂತವರು ಯಾರಾದರೂ ಇದ್ದರೆ ಅದು ರಾಹುಲ್‌ ಗಾಂಧಿ’ ಎಂದು ಹೇಳಿದ್ದಾರೆ.

‘ನನಗೆ ಅವಕಾಶಗಳನ್ನು ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಯಾರಾದರೂ ಇದ್ದರೆ ಅವರು ಅವಕಾಶವಾದಿಗಳು. ಈ ಅವಕಾಶವಾದಿಗಳು ನನ್ನನ್ನು ಹಿಮ್ಮೆಟ್ಟಿಸಲು ಹಾಗೂ ಹತ್ತಿಕ್ಕಲು ಯತ್ನಿಸುತ್ತಿದ್ದಾರೆ. ನೀವು ಟಿವಿಯಲ್ಲಿ ನೋಡುತ್ತಿರುವುದೆಲ್ಲವೂ ಅವರ ವಂಚಕ ಮನಸ್ಸನ್ನು ಮರೆಮಾಚಲು ನಡೆಸುತ್ತಿರುವ ಪ್ರಹಸನವಾಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ನಾನು ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮಗಳ ಉಸ್ತುವಾರಿಯನ್ನು ತ್ಯಜಿಸಿದೆ. ಆ ನಂತರ, ‌₹8 ಕೋಟಿ ವಂಚಿಸಿ ಓಡಿಹೋಗಿದ್ದಾಳೆ ಎಂಬ ವರದಿಗಳನ್ನು ಕನ್ನಡ ಸುದ್ದಿವಾಹಿನಿಗಳು ಮಾಡಿದವು. ನನ್ನ ವಿಶ್ವಾಸಾರ್ಹತೆಯನ್ನು ನಾಶಮಾಡುವ ಪ್ರಯತ್ನಗಳು ನಡೆದವು. ನಾನು ಎಲ್ಲಿಯೂ ಓಡಿಹೋಗಿರಲಿಲ್ಲ. ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದೆ. ನಾನು ಪಕ್ಷಕ್ಕೆ ₹8 ಕೋಟಿ ವಂಚನೆ ಮಾಡಿಲ್ಲ. ಈ ಕುರಿತು ನಾನು ಮೌನವಾಗಿ ಉಳಿದುಬಿಟ್ಟೆ. ಇದು ನನ್ನ ತಪ್ಪು’ ಎಂದು ರಮ್ಯಾ ಹೇಳಿದ್ದಾರೆ.

ಈ ವಿಚಾರದ ಕುರಿತು ಮಾತನಾಡುವಂತೆ ಕಾಂಗ್ರೆಸ್‌ ಮುಖಂಡ ಕೆ.ಸಿ.ವೇಣುಗೋಪಾಲ್‌ರನ್ನು ಒತ್ತಾಯಿಸಿರುವ ರಮ್ಯಾ, ‘ನೀವು ಮುಂದೆ ಕರ್ನಾಟಕಕ್ಕೆ ಬಂದಾಗ ದಯವಿಟ್ಟು ಮಾಧ್ಯಮಗಳಿಗೆ ಸ್ಪಷ್ಟಪಡಿಸಬೇಕು. ಇದು ನೀವು ನನಗಾಗಿ ಮಾಡಬಹುದಾದ ಸಣ್ಣ ಕೆಲಸ. ಇದರಿಂದ ನಾನು ನನ್ನ ಜೀವನದುದ್ದಕ್ಕೂ ಈ ನಿಂದನೆ ಮತ್ತು ಟ್ರೋಲ್‌ಗಳೊಂದಿಗೆ ಬದುಕುವುದು ತಪ್ಪಲಿದೆ’ ಎಂದು ತಿಳಿಸಿದ್ದಾರೆ.

'ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಹಾಗೂ ಸಚಿವ ಅಶ್ವತ್ಥ್ ನಾರಾಯಣ್ ಅವರು ಗೌಪ್ಯವಾಗಿ ಭೇಟಿಯಾಗಿದ್ದರು' ಎಂದು ಡಿಕೆಶಿ ಹೇಳಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ರಮ್ಯಾ, ‘ಬೇರೆ ಬೇರೆ ಪಕ್ಷಗಳ ನಾಯಕರು ಭೇಟಿಯಾಗುವುದು ಸಹಜ, ಪರಸ್ಪರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಬೇರೆ ಬೇರೆ ಪಕ್ಷಗಳ ನಾಯಕರ ಕುಟುಂಬಗಳ ನಡುವೆ ಮದುವೆ ಸಂಬಂಧಗಳು ಏರ್ಪಟ್ಟಿವೆ. ಹಾಗಿರುವಾಗ, ಕಾಂಗ್ರೆಸ್‌ನ ಹಿರಿಯ ನಾಯಕ ಎಂ.ಬಿ. ಪಾಟೀಲ್ ಮತ್ತು ಅಶ್ವತ್ಥ ನಾರಾಯಣ ಅವರ ಭೇಟಿ ಬಗ್ಗೆ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿರುವುದು ಅಚ್ಚರಿ ಎನಿಸುತ್ತಿದೆ. ಇವುಗಳನ್ನೆಲ್ಲ ಬಿಟ್ಟು ಕಾಂಗ್ರೆಸ್ ಪಕ್ಷದ ನಾಯಕರು ಒಗ್ಗಟ್ಟಾಗಿ ಚುನಾವಣೆ ಎದುರಿಸಬಾರದೇ?’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT