ಭಾನುವಾರ, ಮೇ 22, 2022
25 °C

ಕ್ಷೇತ್ರದ ಅನುದಾನ ಗುತ್ತಿಗೆದಾರರಿಗೆ ಮಾರಾಟ: ಶಾಸಕ ಎಚ್‌.‍ಪಿ.ಮಂಜುನಾಥ್‌ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಗುತ್ತಿಗೆದಾರರಿಂದ ಶೇ 40 ಅಲ್ಲ, 50ರಷ್ಟು ಲಂಚ ವಸೂಲಿ ಮಾಡಲಾಗುತ್ತಿದೆ. ಶಾಸಕರಿಗೂ ಗೊತ್ತಿಲ್ಲದಂತೆ ಗುತ್ತಿಗೆದಾರರೇ ಹೋಗಿ ಕಮಿಷನ್‌ ನೀಡಿ ರಾಜ್ಯ ಸರ್ಕಾರದಿಂದ ಕಾಮಗಾರಿಗೆ ಅನುಮತಿ ಪಡೆದುಕೊಂಡು ಬರುತ್ತಿದ್ದಾರೆ’ ಎಂದು ಹುಣಸೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಚ್‌.‍ಪಿ.ಮಂಜುನಾಥ್‌ ಗಂಭೀರ ಆರೋಪ ಮಾಡಿದರು.

'ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ನೀಡುವ ವಿಚಾರದಲ್ಲಿ ಬಿಜೆಪಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಕೆಲವರ ಕ್ಷೇತ್ರಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಬೇರೆ ಕ್ಷೇತ್ರಗಳಿಗೆ ವರ್ಗಾಯಿಸಿದೆ. ನಮ್ಮ ಕ್ಷೇತ್ರದ ಅನುದಾನವನ್ನು ಗುತ್ತಿಗೆದಾರರಿಗೆ ಮಾರಾಟ ಮಾಡಿದ್ದಾರೆ. ಆ ಬಗ್ಗೆ ತನಿಖೆ ನಡೆಯಲಿ’ ಎಂದು ಶನಿವಾರ ಇಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಸಚಿವ ಎಸ್.ಟಿ.ಸೋಮಶೇಖರ್‌ ಅವರಿಗೆ ಗೊತ್ತಿಲ್ಲದೇ ಈ ಕೆಲಸ ಹೇಗೆ ನಡೆಯುತ್ತದೆ? ಆ ಬಗ್ಗೆ ಕೇಳಿದರೆ ‘ನೀವು ತಿಂದಿಲ್ಲವೇ’ ಎಂದು ಕೇಳುತ್ತಾರೆ. ನಾವು ಒಣಗೊಬ್ಬರ ತಿಂದರೆ ನೀವು ಹಸಿಗೊಬ್ಬರವನ್ನೇ ತಿನ್ನುತ್ತಿದ್ದೀರಿ ಎನ್ನಬೇಕಾದ ಪರಿಸ್ಥಿತಿ ಬಂದಿದೆ’‌ ಎಂದು ಹರಿಹಾಯ್ದರು.

ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ‘ಕಮಿಷನ್‌ ನೀಡದೆ ಯಾವ ಕೆಲಸವೂ ನಡೆಯಲ್ಲ. ಲೋಕೋಪಯೋಗಿ ಇಲಾಖೆಯಿಂದ ಜಿಲ್ಲೆಯ ಐದು ತಾಲ್ಲೂಕುಗಳ ಹೊಸ ಕಾಮಗಾರಿಗೆ ಹಂಚಿಕೆಯಾದ ₹ 6.5 ಕೋಟಿ ಅನುದಾನವನ್ನು ಪಿರಿಯಾ ಪಟ್ಟಣ ಒಂದೇ ಕ್ಷೇತ್ರಕ್ಕೆ ಹಂಚಲಾಗಿದೆ. ಇಲಾಖೆಯ ಎಸ್‌ಡಿಪಿ–ಸಾಮಾನ್ಯ ಅನುದಾನದಲ್ಲಿ ಅನುಮೋದನೆಗೊಂಡ ಕಾಮಗಾರಿಗಳನ್ನು ರದ್ದುಪಡಿಸಿ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಅನ್ಯಾಯ ಮಾಡಲಾಗಿದೆ’ ಎಂದರು.

ಎಚ್‌.ಡಿ.ಕೋಟೆ ಶಾಸಕ ಅನಿಲ್‌ ಕುಮಾರ್‌, ‘ಹಿಂದುಳಿದ ತಾಲ್ಲೂಕುಗಳಿಗೆ ಮಂಜೂರಾದ ಅನುದಾನದಲ್ಲೂ ತಾರತಮ್ಯ ಎಸಗುತ್ತಿದ್ದಾರೆ. ಬೇಕಾದ ಕ್ಷೇತ್ರಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ’ ಎಂದು ದೂರಿದರು.

‘ಶಿಷ್ಟಾಚಾರ ಉಲ್ಲಂಘಿಸಿ ಅವಮಾನ’

ಮೈಸೂರು: ‘ನಗರದಲ್ಲಿ ನಡೆದ ಜಲಮಂಡಳಿ ಕಟ್ಟಡ ಉದ್ಘಾಟನೆಗೆ ಗ್ರಾಮಾಂತರ ಕ್ಷೇತ್ರಗಳ ಶಾಸಕರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಿ ಅವಮಾನ ಮಾಡಲಾಗಿದೆ. ಅಗೌರವ ತೋರಿರುವ ಅಧಿಕಾರಿಗಳನ್ನು ಅಮಾನತುಗೊಳಿಸದಿದ್ದರೆ ಸಚಿವ ಎಸ್‌.ಟಿ.ಸೋಮಶೇಖರ್‌ ಅವರಿಗೆ ಕಪ್ಪು ಬಾವುಟ ತೋರಿಸಿ ಅಸಹಕಾರ ಚಳವಳಿ ನಡೆಸಲಾಗುವುದು’ ಎಂದು ಕಾಂಗ್ರೆಸ್‌ ಶಾಸಕರು ಎಚ್ಚರಿಕೆ ನೀಡಿದರು.

‘ಇದೇನು ಸಚಿವರ ಮನೆಯ ಗೃಹ ಪ್ರವೇಶವೇ, ಮದುವೆ ಕಾರ್ಯಕ್ರಮವೇ? ಅಥವಾ ಬಿಜೆಪಿ ಕಾರ್ಯಕ್ರಮವೇ‌’ ಎಂದು ಶನಿವಾರ ಇಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಚ್‌.ಪಿ.ಮಂಜುನಾಥ್‌, ಡಾ.ಯತೀಂದ್ರ ಸಿದ್ದರಾಮಯ್ಯ, ಸಿ.ಅನಿಲ್‌ ಕುಮಾರ್‌ ಪ್ರಶ್ನಿಸಿದರು. ‘ಇದು ಕ್ಷೇತ್ರದ ಜನರಿಗೆ ಮಾಡಿದ ಅವಮಾನ. ಈ ಬಗ್ಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ದೂರು ಸಲ್ಲಿಸಲಿದ್ದೇವೆ. ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು