ಮಂಗಳವಾರ, ಮಾರ್ಚ್ 21, 2023
23 °C
'ಸ್ಯಾಂಟ್ರೊ ರವಿ ಬಂಧನಕ್ಕೂ ಮುನ್ನ ಗೃಹ ಸಚಿವರು ಗುಜರಾತ್‌ಗೆ ಹೋಗಿದ್ದೇಕೆ'

ಎಲ್ಲ ವಂಚಕರಿಗೂ ಗುಜರಾತ್ ನಂಟು ಇರೋದು 'ಗುಜರಾತ್ ಮಾಡೆಲ್' ಪ್ರಭಾವವೇ?: ಕಾಂಗ್ರೆಸ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪರಿಶಿಷ್ಟ ಸಮುದಾಯದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿದ್ದ ಪ್ರಕರಣದ ಆರೋಪಿ ಕೆ.ಎಸ್‌.ಮಂಜುನಾಥ್ ಅಲಿಯಾಸ್‌ ಸ್ಯಾಂಟ್ರೊ ರವಿಯನ್ನು ಗುಜರಾತ್‌ನಲ್ಲಿ ಶುಕ್ರವಾರ ಬಂಧಿಸಲಾಗಿದೆ. ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, 'ದೇಶದ ಈಗಿನ ಎಲ್ಲಾ ವಂಚಕರಿಗೂ ಗುಜರಾತ್ ನಂಟು ಇರುವುದು ಏಕೆ? ಇವೆಲ್ಲವೂ ಗುಜರಾತ್‌ ಮಾಡೆಲ್‌ನ ಪ್ರಭಾವವೇ?' ಎಂದು ಪ್ರಶ್ನಿಸಿದೆ.

ರವಿ ಬಂಧನದ ಕುರಿತು ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್, 'ಸರ್ವ ಸಾಕ್ಷಿಗಳನ್ನೂ ನಾಶಪಡಿಸಿದ ನಂತರ ಸರ್ಕಾರದ ಚೀಫ್ ಬ್ರೋಕರ್, ಬಿಜೆಪಿ ಮುಖಂಡ ಸ್ಯಾಂಟ್ರೊ ರವಿಯ ಬಂಧನದ ನಾಟಕ ನಡೆಯುತ್ತಿದೆ. ಸ್ಯಾಂಟ್ರೊ ರವಿಯನ್ನು ಗುಜರಾತಿನಲ್ಲಿ ಬಂಧಿಸಿದ್ದಾರಂತೆ! ಆತ ಗುಜರಾತಿಗೆ ಹೋಗಿದ್ದೇಕೆ? ಎಲ್ಲಾ ಬಗೆಯ ದಂಧೆಕೋರರಿಗೂ ಗುಜರಾತ್ ಪ್ರಿಯವಾಗುವುದೇಕೆ? ಇದು ಗುಜರಾತ್ ಮಾಡೆಲ್ ಪ್ರಭಾವವೇ? ಎಂದು ಕೇಳಿದೆ.

ಇದನ್ನೂ ಓದಿ: 

'ಸ್ಯಾಂಟ್ರೊ ರವಿಯ ವಿರುದ್ಧ ವರ್ಗಾವಣೆ ದಂಧೆಯ ವಿಚಾರವಾಗಿ ಸರ್ಕಾರ ಇನ್ನೂ ಪ್ರಕರಣ ದಾಖಲಿಸಲಿಲ್ಲ. ಆತನ ಬಂಧನವಾಗಿದ್ದು ಪತ್ನಿಯ ದೂರಿನ ಆಧಾರದಲ್ಲಿ ಹೊರತು ಸರ್ಕಾರದ ದೂರಿನಲ್ಲಿ ಅಲ್ಲ. ಆತನ ಎಲ್ಲಾ ವ್ಯವಹಾರಗಳನ್ನು, ಸರ್ಕಾರ, ಸಚಿವರ ಸಹಬಾಗಿತ್ವವನ್ನು ಲೋಕಾಯುಕ್ತ ಅಥವಾ ನ್ಯಾಯಾಂಗ ತನಿಖೆಗೆ ವಹಿಸಿದಲ್ಲಿ ಮಾತ್ರ ಸತ್ಯ ಹೊರಬರಲು ಸಾಧ್ಯ' ಎಂದು ಮತ್ತೊಂದು ಟ್ವೀಟ್‌ನಲ್ಲಿ ಒತ್ತಿ ಹೇಳಿದೆ.

ಸ್ಯಾಂಟ್ರೊ ರವಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪರಸ್ಪರ ಸಂಬಂಧ ಹೊಂದಿದ್ದಾರೆ ಎಂದೂ ಕಾಂಗ್ರೆಸ್‌ ಅನುಮಾನ ವ್ಯಕ್ತಪಡಿಸಿದೆ.

'ನಿನ್ನೆ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಗುಜರಾತಿನ ಅಹಮದಾಬಾದ್‌ಗೆ ತೆರಳಿದ್ದರು. ಇಂದು ಅದೇ ಗುಜರಾತಿನ ಅಹಮದಾಬಾದ್‌ನಲ್ಲಿ ಸ್ಯಾಂಟ್ರೊ ರವಿಯ ಬಂಧನವಾಗಿದೆ. ಇದು ಖಂಡಿತಾ ಕಾಕತಾಳೀಯವಲ್ಲ' ಎಂದು ಹೇಳಿದೆ.

ಇದನ್ನೂ ಓದಿ: 

ಮುಂದುವರಿದು, 'ಸ್ಯಾಂಟ್ರೊ ರವಿಯ ಆಪ್ತರಾದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನಿನ್ನೆ ಗುಜರಾತಿಗೆ ಹೋಗಿರುತ್ತಾರೆ. ಸ್ಯಾಂಟ್ರೊ ರವಿಯೂ ಗುಜರಾತಿಗೆ ಹೋಗಿರುತ್ತಾನೆ. ಬಂಧನವೂ ಗುಜರಾತಿನಲ್ಲಿಯೇ ಆಗುತ್ತದೆ. ರವಿ ಗೃಹಸಚಿವರೊಂದಿಗೆ ಅಲ್ಲಿಗೆ ಹೋಗಿದ್ದನೇ? ಅಲ್ಲಿ ಅವರಿಬ್ಬರ ನಡುವೆ ಒಪ್ಪಂದ ನಡೆದಿರಬಹುದೇ? ಸಚಿವರು ತಮ್ಮ ವಿರುದ್ದದ ಸಾಕ್ಷ್ಯ ನಾಶಕ್ಕಾಗಿ ಗುಜರಾತಿಗೆ ಹೋಗಿದ್ದರೇ?' ಎಂಬ ಹಲವು ಪ್ರಶ್ನೆಗಳನ್ನು ಕಾಂಗ್ರೆಸ್‌ ಎತ್ತಿದೆ.

'ಆರಗ ಜ್ಞಾನೇಂದ್ರ ಅವರೇ, ಗುಜರಾತಿನಲ್ಲಿ ಸ್ಯಾಂಟ್ರೊ ರವಿ ನಿಮ್ಮ ಮಧ್ಯೆ ನಡೆದ ಡೀಲಿಂಗ್ ಏನು? ವರ್ಗಾವಣೆ ದಂಧೆಯ ಸಾಕ್ಷ್ಯಗಳನ್ನು ಮುಚ್ಚಿಡಲು ಒಪ್ಪಂದ ಮಾಡಿಕೊಂಡಿರಾ? ಆತನ ಬಳಿ ಇದ್ದ ಹಲವು ಸಚಿವರ ಸಿಡಿಗಳನ್ನ ವಶಪಡಿಸಿಕೊಳ್ಳಲು ಹೋಗಿದ್ರಾ? ಅಥವಾ ಹೈಕಮಾಂಡ್‌ಗೆ ಭೇಟಿ ಮಾಡಿಸಿ ಆತನಿಗೆ ಉನ್ನತ ಹುದ್ದೆ ಕೊಡಿಸಲು ಹೋಗಿದ್ರಾ?' ಎಂದು ಟೀಕಾಪ್ರಹಾರ ನಡೆಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು