ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಆಸರೆ ಕಸಿದ ಕೊರೊನಾ | ಅಮ್ಮ ಯಾವಾಗ ಬರ್ತಾಳೆ?

ಕೋವಿಡ್‌ ಸೋಂಕಿನಿಂದ ತಾಯಿ ಕಳೆದುಕೊಂಡ ಸ್ನೇಹಾಳ ಮುಗ್ಧ ಪ್ರಶ್ನೆ
Last Updated 22 ಜೂನ್ 2021, 22:39 IST
ಅಕ್ಷರ ಗಾತ್ರ

ಶಿಡ್ಲಘಟ್ಟ (ಚಿಕ್ಕಬಳ್ಳಾಪುರ): ‘ಅಮ್ಮ ವಾಪಸ್ ಬರುತ್ತಾಳಾ?’ ಇದು ತಾಲ್ಲೂಕಿನ ವೀರಾಪುರ ಗ್ರಾಮದ ಒಂಬತ್ತು ವರ್ಷದ ಸ್ನೇಹಾ ತನ್ನ ಚಿಕ್ಕಮ್ಮ ನಂದಿನಿ ಅವರಿಗೆ ಪದೇ ಪದೇ ಕೇಳುವ ಪ್ರಶ್ನೆ.

ಸ್ನೇಹಾ ಒಂದೂವರೆ ವರ್ಷದವಳಿದ್ದಾಗ ತಂದೆ ಮೃತಪಟ್ಟಿದ್ದರು. ಈಗ ಕೊರೊನಾ ಸೋಂಕಿನಿಂದ ತಾಯಿಯೂ ಸಾವನ್ನಪ್ಪಿದ್ದಾರೆ. ತಬ್ಬಲಿಯಾಗಿರುವ ಸ್ನೇಹಾ ಈಗ ಅಜ್ಜಿ ಮನೆಯಲ್ಲಿ ಚಿಕ್ಕಮ್ಮನ ಆರೈಕೆಯಲ್ಲಿ ಇದ್ದಾಳೆ. ತಾಯಿಯ ಬಗ್ಗೆ ಸ್ನೇಹಾ ಕೇಳುವ ಪ್ರಶ್ನೆಗಳಿಗೆ ಹೇಗೆ ಉತ್ತರಿಸಲಿ ಎನ್ನುವ ನೋವು ನಂದಿನಿ ಅವರಿಗೆ ಇದೆ.

ಅಮ್ಮ ವಾಪಸ್ ಬರುತ್ತಾಳಾ? ನಾನು ಶಾಲೆಗೆ ಹೇಗೆ ಹೋಗುವುದು? ಊಟ ಮಾಡಿಸುವವರು ಯಾರು? ಬಟ್ಟೆ ಯಾರು ಕೊಡಿಸುವರು?–ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಸ್ನೇಹಾ ನಿತ್ಯ ಕೇಳುತ್ತಾಳೆ. ಮಗುವನ್ನು ನೋಡಿದಾಗ ಅಕ್ಕ ನೆನಪಾಗುತ್ತಾಳೆ. ಕರುಳು ಕಿವುಚಿದಂತಾಗುತ್ತದೆ ಎಂದು ನಂದಿನಿ ಕಣ್ಣೀರಾದರು.

‘ಅಕ್ಕ ರಜಿನಿಯನ್ನು ಮೇಲೂರಿಗೆ ವಿವಾಹ ಮಾಡಿಕೊಟ್ಟಿದ್ದೆವು. ಸ್ನೇಹಾ ಹುಟ್ಟಿ ಒಂದೂವರೆ ವರ್ಷವಾಗಿತ್ತು. ಭಾವ ಶಂಕರ್ ನಿಧನರಾದರು. ಆ ಕಷ್ಟದಲ್ಲಿಯೂ ನನ್ನಕ್ಕ ಗಂಡನ ಮನೆಯವರ ನೆರವಿನೊಂದಿಗೆ ಪ್ರತ್ಯೇಕವಾಗಿ ಮನೆ ಮಾಡಿಕೊಂಡು ಗಾರ್ಮೆಂಟ್‌ ಕೆಲಸಕ್ಕೆ ಹೋಗಿ ಮಗಳನ್ನು ಸಾಕುತ್ತಿದ್ದಳು’ ಎಂದು ಕಣ್ಣು ಒರೆಸಿಕೊಂಡರು.

ಲಾಕ್‌ಡೌನ್ ಘೋಷಣೆಯಾದ ನಂತರ ಕೆಲಸ ಹೋಯಿತು. ತವರು ಮನೆ ವೀರಾಪುರಕ್ಕೆ ಬಂದಳು. ಕೆಲವು ದಿನಗಳ ಹಿಂದೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದೆ ಎಂದು ಹೊಸಕೋಟೆಯಲ್ಲಿ ಆಸ್ಪತ್ರೆಗೆ ದಾಖಲಿಸಿದೆವು. ವೈದ್ಯರು ನೀರು ತುಂಬಿಕೊಂಡಿದೆ ಎಂದರು. ಜತೆಗೆ ಕೊರೊನಾ ಸೋಂಕು ಸಹ ಇದೆ ಎಂದರು. ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆಯಾಯಿತು. ಐಸಿಯುಗೆ ದಾಖಲಿಸಿದರು. ಆದರೆ ಅಕ್ಕ ಉಳಿಯಲಿಲ್ಲ.

’ಸ್ನೇಹಾ ಮೂರನೇ ತರಗತಿಯಲ್ಲಿ ಓದುತ್ತಿದ್ದಾಳೆ. ನನ್ನ ತಂದೆ ಮುನಿಯಪ್ಪ ಮತ್ತು ತಾಯಿ ನಾರಾಯಣಮ್ಮ ಕಷ್ಟದಲ್ಲಿ ಕೈತೊಳೆಯುತ್ತಿದ್ದಾರೆ. ಅಕ್ಕನ ಸಾವಿನ ಆಘಾತದಿಂದ ನಾವು ಯಾರೂ ಇನ್ನೂ ಹೊರಬಂದಿಲ್ಲ. ಇನ್ನು ಈ ಮಗುವಿನ ಮನಸ್ಸಿಗೆ ಆದ ಗಾಯವನ್ನು ಊಹಿಸಿಕೊಳ್ಳಲು ಆಗುತ್ತಿಲ್ಲ. ಹೊಸಕೋಟೆ ಬಳಿ ನಾನು ಗಂಡನ ಜತೆ ಮನೆ ಮಾಡಿಕೊಂಡಿದ್ದೇನೆ. ಅಲ್ಲಿಗೆ ಸ್ನೇಹಾಳನ್ನು ಕರೆದುಕೊಂಡು ಹೋಗಬೇಕು ಎಂದಿದ್ದೇನೆ‘ ಎನ್ನುತ್ತಾರೆ ಮಗುವಿನ ಚಿಕ್ಕಮ್ಮ ನಂದಿನಿ.

‘ಕೋವಿಡ್‌ನಿಂದ ಅನಾಥರಾದ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಉದ್ದೇಶದಿಂದ ಮಗುವಿನ ಮನೆಗೆ ಖುದ್ದು ಭೇಟಿ ನೀಡಿದ್ದೇವೆ. ಮಗುವಿನ ಭವಿಷ್ಯ ನಿರ್ಮಾಣಕ್ಕೆ ನೆರವಾಗುತ್ತೇವೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುನಾಥ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT