ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ ಪೂರೈಕೆಗೆ ತಿಂಗಳುಗಳೇ ಬೇಕಾಗಬಹುದು: ಮುಖ್ಯ ಕಾರ್ಯದರ್ಶಿ ರವಿಕುಮಾರ್

Last Updated 12 ಮೇ 2021, 20:58 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಕ್ಕೆ ಕೋವಿಡ್ ಲಸಿಕೆ ಪೂರೈಕೆಯಾಗಲು ದಿನಗಳಲ್ಲ, ತಿಂಗಳುಗಳೇ ಬೇಕಾಗಬಹುದು ಎಂದು ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಹೇಳಿದ್ದಾರೆ.

ರಾಜ್ಯ ಸರ್ಕಾರವು 3 ಕೋಟಿ ಡೋಸ್ ಲಸಿಕೆಗಾಗಿ ಬೇಡಿಕೆ ಇಟ್ಟಿದೆ. ಇದು ಯಾವಾಗ ಪೂರೈಕೆ ಆಗಬಹುದು ಎಂದು ಕೇಳಲಾದ ಪ್ರಶ್ನೆಗೆ ರವಿಕುಮಾರ್ ಅವರು ಮೇಲಿನಂತೆ ಉತ್ತರಿಸಿದ್ದಾರೆ. ನಾವು ಕೂಡ ಲಸಿಕೆಗಾಗಿ ಕಾಯುತ್ತಿದ್ದೇವೆ. ಎಷ್ಟು ದಿನಗಳಲ್ಲಿ ಪೂರೈಕೆ ಆಗಬಹುದು ಎಂದು ಹೇಳಲಾಗದು. ತಿಂಗಳುಗಳೇ ಬೇಕಾಗಬಹುದು ಎಂದು ಅವರು ಹೇಳಿದ್ದಾರೆ.

ರಾಜ್ಯವು ಎರಡು ಕೋಟಿ ಕೋವಿಶೀಲ್ಡ್ ಮತ್ತು ಒಂದು ಕೋಟಿ ಕೋವ್ಯಾಕ್ಸಿನ್‌ ಲಸಿಕೆಯ ಡೋಸ್‌ಗಳಿಗೆ ಬೇಡಿಕೆ ಇಟ್ಟಿದೆ. ಈ ಪೈಕಿ ಒಂದು ಲಕ್ಷ ಡೋಸ್‌ಗಳು ದೊರೆತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಲಸಿಕೆ ಕೊರತೆ ಇರುವುದರಿಂದ ಈಗಾಗಲೇ ಮೊದಲ ಡೋಸ್ ಪಡೆದಿರುವ 45 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ಮೇರೆಗೆ ಎರಡನೇ ಡೋಸ್ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

45 ವರ್ಷ ಮೇಲ್ಪಟ್ಟವರಿಗೆ ಈ ತಿಂಗಳ ಆರಂಭದ 15 ದಿನಗಳಲ್ಲಿ 13 ಲಕ್ಷ ಕೋವಿಶೀಲ್ಡ್ ಮತ್ತು 1 ಲಕ್ಷ ಕೋವ್ಯಾಕ್ಸಿನ್ ನೀಡಲು ಉದ್ದೇಶಿಸಲಾಗಿತ್ತು. ಆದರೆ 7ಲಕ್ಷ ಕೋವಿಶೀಲ್ಡ್ ಮತ್ತು 80 ಸಾವಿರ ಕೋವ್ಯಾಕ್ಸಿನ್ ಮಾತ್ರ ಪೂರೈಕೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈಗ ಪೂರೈಕೆಯಾಗುತ್ತಿರುವ ಡೋಸ್‌ಗಳನ್ನು ಎರಡನೇ ಡೋಸ್ ಪಡೆಯುವವರಿಗೆ ನೀಡಲಾಗುವುದು ಎಂದು ರವಿಕುಮಾರ್ ಹೇಳಿದ್ದಾರೆ.

–ರವಿಕುಮಾರ್
–ರವಿಕುಮಾರ್


ರಾಜ್ಯದಲ್ಲಿ ಜನವರಿ 16ರಂದು ಲಸಿಕೆ ನೀಡಿಕೆ ಆರಂಭಗೊಂಡಿತ್ತು. ನಾಲ್ಕು ತಿಂಗಳುಗಳಲ್ಲಿ ಒಂದು ಕೋಟಿ ಡೋಸ್ ನಮಗೆ ಲಭ್ಯವಾಗಿದೆ. ರಾಜ್ಯಕ್ಕೆ ಒಟ್ಟು ಆರೂವರೆ ಕೋಟಿ ಡೋಸ್ ಅವಶ್ಯಕತೆ ಇದೆ. ಇವುಗಳ ಲಭ್ಯತೆಯು ಉತ್ಪಾದಕರು, ಅವರ ಉತ್ಪಾದನಾ ಸಾಮರ್ಥ್ಯ ಮತ್ತು ವಿತರಣೆಯ ಮೇಲೆ ಅವಲಂಬಿತವಾಗಿದೆ ಎಂದು ರವಿ ಕುಮಾರ್ ಹೇಳಿದ್ದಾರೆ.

‘ನಮ್ಮ ಬಳಿ ಲಸಿಕೆ ಇರುತ್ತಿದ್ದರೆ ಹಾಕುತ್ತಿದ್ದೆವು. ಏಪ್ರಿಲ್ 2ನೇ ವಾರದಲ್ಲಿ ಲಸಿಕೆಗೆ ಆರ್ಡರ್ ನೀಡಿದ್ದು, ಮೇ 1ರಿಂದ ನಮಗೆ ಕಂಪನಿಗಳು ಪೂರೈಕೆ ಮಾಡುತ್ತಿವೆ. ಸದ್ಯ ಬೇರೆ ದೇಶಗಳಲ್ಲಿ ಉತ್ಪಾದಿಸುವ ಲಸಿಕೆ ಆಮದಿಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಲಸಿಕೆ ಉತ್ಪಾದನೆಗೆ ಯಾವುದೇ ಕಂಪನಿ ಮುಂದೆ ಬಂದಿಲ್ಲ. ಯಾವುದಾದರೂ ಕಂಪನಿ ಮುಂದೆ ಬಂದರೆ ಅಂಥ ಕಂಪನಿಗಳಿಗೆ ಸಹಾಯ ಮಾಡುತ್ತೇವೆ’ ಎಂದೂ ಅವರು ಹೇಳಿದರು.

‘ಸ್ಫುಟ್ನಿಕ್ ಲಸಿಕೆಗೂ ಪ್ರಯತ್ನ’
‘ಸ್ಫುಟ್ನಿಕ್ ಲಸಿಕೆಗೆ ಅನುಮತಿ ಕೊಟ್ಟಿರುವ ಬಗ್ಗೆ ಕೇಂದ್ರ ಸರ್ಕಾರ ಏನೂ ಹೇಳಿಲ್ಲ. ಟ್ರಯಲ್‌ ಹಂತದಲ್ಲಿದೆ ಎಂದೂ ಹೇಳುತ್ತಿದೆ. ಆದರೆ, ಇಲ್ಲಿಯೇ ಸ್ಥಳೀಯವಾಗಿ ರೆಡ್ಡಿ ಲ್ಯಾಬ್ಸ್‌ ಪರವಾನಗಿ ಪಡೆದು ಸ್ಫುಟ್ನಿಕ್ ಲಸಿಕೆ ಉತ್ಪಾದನೆ ಮಾಡುತ್ತಿದೆ ಎಂಬ ಸುದ್ದಿ ಬಂದಿದೆ. ಅವರಿಂದ ಲಸಿಕೆ ಪಡೆಯಬಹುದೇ ಎಂದು ನಾವು ಕೇಂದ್ರ ಸರ್ಕಾರವನ್ನು ಕೇಳಿದ್ದೇವೆ’ ಎಂದು ರವಿಕುಮಾರ್‌ ಹೇಳಿದರು.

‘ಲಸಿಕೆಗಾಗಿ ನಾವು ಜಾಗತಿಕ ಟೆಂಡರ್‌ ಕರೆದಿದ್ದೇವೆ. ನಮ್ಮಂತೆ ಬೇರೆ ರಾಜ್ಯಗಳು ಕೂಡಾ ಜಾಗತಿಕ ಟೆಂಡರ್‌ ಕರೆದಿವೆ. ಟೆಂಡರ್‌ ಪಡೆದು ಪೂರೈಸಲು 15 ದಿನ ಕೊಟ್ಟಿದ್ದೇವೆ. ಆದರೆ, ಪೂರೈಸುವ ಕಂಪನಿಗೆ ಉತ್ಪಾದನೆ ಸಾಮರ್ಥ್ಯ ಬೇಕಲ್ಲ. ಅಲ್ಲದೆ, ಎಲ್ಲ ದೇಶಗಳು ಲಸಿಕೆ ರಫ್ತು ಮಾಡಲು ಅವಕಾಶ ಕೊಡುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT