ಸೋಮವಾರ, ಮೇ 23, 2022
21 °C
ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರ ಆಕ್ರೋಶ, ಧರಣಿ l ವಯಸ್ಸಾದ ಜಾನುವಾರಗಳ ರಕ್ಷಣೆಗೆ ಸರ್ಕಾರ ಸಿದ್ಧ: ಸಚಿವ

ಗೋಹತ್ಯೆ ನಿಷೇಧ ಮಸೂದೆ: ಮೇಲ್ಮನೆ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಗೋಹತ್ಯೆ ಮಾಡಿದವರಿಗೆ 7 ವರ್ಷದವರೆಗೆ ಜೈಲು ಮತ್ತು ಗರಿಷ್ಠ ₹10 ಲಕ್ಷದವರೆಗೆ ದಂಡ ವಿಧಿಸುವ ‘ಕರ್ನಾಟಕ ಜಾನುವಾರು ವಧೆ, ಪ್ರತಿಬಂಧಕ ಮತ್ತು ಸಂರಕ್ಷಣಾ ಮಸೂದೆ’ ವಿಧಾನಪರಿಷತ್ತಿನಲ್ಲಿ ವಿರೋಧ ಪಕ್ಷಗಳ ಆಕ್ರೋಶ ಮತ್ತು ಧರಣಿಯ ಮಧ್ಯೆ ಒಪ್ಪಿಗೆ ಪಡೆಯಿತು.

ವಿಧಾನಸಭೆಯಲ್ಲಿ ಕಳೆದ ಅಧಿವೇಶನದಲ್ಲಿ ವಿರೋಧಪಕ್ಷಗಳ ವಿರೋಧದ ಮಧ್ಯೆ ಅಂಗೀಕಾರಗೊಂಡಿತ್ತು. ಮಸೂದೆಯ ಮೇಲೆ ಚರ್ಚೆ ನಡೆದಿರಲಿಲ್ಲ. ವಿಧಾನಪರಿಷತ್ತಿನಲ್ಲಿ ಅಂಗೀಕಾರಗೊಳ್ಳದ ಕಾರಣ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು.

ಮಸೂದೆಯ ಕುರಿತು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಕಟುವಾಗಿ ಟೀಕಿಸಿದರು. ಮಸೂದೆಯ ಬಗ್ಗೆ ಎಲ್ಲರಿಗೂ ಚರ್ಚೆಗೆ ಅವಕಾಶ ನೀಡದೇ ಇರುವುದನ್ನು ಪ್ರತಿಭಟಿಸಿ ಸಭಾಪತಿ ಪೀಠದ ಮುಂದೆ ಆಕ್ರೋಶ ವ್ಯಕ್ತಪಡಿಸಿ, ಮಸೂದೆಯ ಪ್ರತಿಗಳನ್ನು ಹರಿದು ಪೀಠದತ್ತ ಎಸೆದರು.

ಪಶುಗಳಿಗೂ ನ್ಯಾಯ: ಮಸೂದೆಯನ್ನು ಸಮರ್ಥಿಸಿಕೊಂಡು ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ, ‘ಈ ಕಾಯ್ದೆ ಜಾರಿಗೆ ಬಂದ ಮೇಲೆ ಎಲ್ಲ ಜಾನುವಾರುಗಳ ರಕ್ಷಣೆಗೆ ಅಗತ್ಯ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಪ್ರಕಟಿಸಿ, ವಿಶೇಷ ಅನುದಾನ ನೀಡಲಾಗುವುದು. ವಯಸ್ಸಾದ ಜಾನುವಾರುಗಳ ಸಂರಕ್ಷಣೆಗೆ ಸರ್ಕಾರ ಸಿದ್ಧವಿದೆ. ಅದಕ್ಕೆ ಅಗತ್ಯ ವ್ಯವಸ್ಥೆಯನ್ನು ಮಾಡಲಾಗುವುದು‘ ಎಂದರು. 

ಮಸೂದೆಯನ್ನು ವಿರೋಧಿಸಿ ಮಾತನಾಡಿದ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್‌, ’ಪ್ರಧಾನಿ ನರೇಂದ್ರ ಮೋದಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡುವುದನ್ನು ಬಿಟ್ಟು, ದನ ಕಾಯುವ ಉದ್ಯೋಗ ಕೊಡುತ್ತಿದ್ದಾರೆ. ಇದು ದನ ಕಾಯುವ ಸರ್ಕಾರ, ಯುವಕರನ್ನೂ ದನ ಕಾಯಲು ಕಳಿಸುತ್ತಿದ್ದಾರೆ‘ ಎಂದು ಲೇವಡಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಹೌದು ನಾವು ಗೋರಕ್ಷಣೆಯನ್ನೂ ಮಾಡುತ್ತೇವೆ. ಹೆಮ್ಮೆಯಿಂದ ದನವನ್ನೂ ಕಾಯುತ್ತೇವೆ. ನೀವು ದನ ಕೊಲ್ಲುವವರ ಪರ ಇದ್ದೀರಿ. ನಾವು ದನ ಕಾಯುವವರ ಪರ ಇದ್ದೇವೆ’ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್‌ನ ನಜೀರ್ ಅಹಮದ್‌, ‘ಶೇ 70 ರಷ್ಟು ಜನರು ಪ್ರೋಟಿನ್‌ ಅಂಶ ಹೆಚ್ಚಿರುವ ಈ ಮಾಂಸವನ್ನು ತಿನ್ನುತ್ತಾರೆ. ಹಿಂದುಳಿದವರು, ದಲಿತರ ಈ ಮಾಂಸ ಸೇವಿಸುತ್ತಾರೆ. ಸರ್ಕಾರ ಇದರಲ್ಲಿ ಕೈಹಾಕುವುದು ಖಂಡನೀಯ’ ಎಂದರು.

ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಅವರು ಕಲಾಪ ಬಹಳ ಹೊತ್ತು ಆಗಿರುವುದರಿಂದ ಮಸೂದೆಯ ಬಗ್ಗೆ ಮಂಗಳವಾರ ಚರ್ಚೆಗೆ ಅವಕಾಶ ನೀಡಬೇಕು ಎಂದರು. ಮರಿತಿಬ್ಬೇಗೌಡ ಅವರೂ ಇದನ್ನು ಅನುಮೋದಿಸಿದರು. ಆದರೆ, ಸರ್ಕಾರ ಸೋಮವಾರವೇ ಮಸೂದೆ ಅಂಗೀಕರಿಸಬೇಕು ಎಂದು ಪಟ್ಟು ಹಿಡಿಯಿತು. ಉಪಸಭಾಪತಿ ಎಂ.ಕೆ.ಪ್ರಾಣೇಶ್‌ ಅವರು ಮಸೂದೆ ಅಂಗೀಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಇದನ್ನು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ವಿರೋಧಿಸಿ ಧರಣಿ ನಡೆಸಿದರು. ಮಸೂದೆ ಅಂಗೀಕಾರವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಜೈಕಾರ ಹಾಕಿದರೆ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಹಾಕಿದರು.

ಮೃಗಾಲಯಗಳಿಗೆ ಕೋಣದ ಮಾಂಸ

ಮೃಗಾಲಯಗಳಲ್ಲಿರುವ ಹುಲಿ, ಸಿಂಹ ಇತ್ಯಾದಿ ಮಾಂಸಾಹಾರಿ ಪ್ರಾಣಿಗಳಿಗೆ 13 ವರ್ಷಕ್ಕೆ ಮೇಲ್ಪಟ್ಟ ಕೋಣ, ಎತ್ತುಗಳ ಮಾಂಸ ಸರಬರಾಜು ಮಾಡಬಹುದು. ಅದಕ್ಕೆ ನಿರ್ಬಂಧವಿಲ್ಲ. ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಸಚಿವ ಬಸವರಾಜಬೊಮ್ಮಾಯಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು