ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ನೀಡಿದ ಕಾರ್ಯದರ್ಶಿ: ಸ್ಪಷ್ಟನೆ ಕೇಳಿದ ಸಭಾಪತಿ

Last Updated 23 ಡಿಸೆಂಬರ್ 2020, 19:37 IST
ಅಕ್ಷರ ಗಾತ್ರ

ಬೆಂಗಳೂರು: ಡಿಸೆಂಬರ್‌ 15ರಂದು ನಡೆದ ವಿಧಾನ ಪರಿಷತ್‌ ಅಧಿವೇಶನದಲ್ಲಿ ನಿಯಮ ಮೀರಿ ವರ್ತಿಸಿದ ಮತ್ತು ಕರ್ತವ್ಯಲೋಪ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಸಭಾಪತಿ ನೀಡಿದ್ದ ನೋಟಿಸ್‌ಗೆ ಪರಿಷತ್‌ ಕಾರ್ಯದರ್ಶಿ ಮಂಗಳವಾರ ಉತ್ತರ ನೀಡಿದ್ದಾರೆ. ಆದರೆ, ಉತ್ತರ ಅಸಮರ್ಪಕವಾಗಿದೆ ಎಂಬ ಕಾರಣ ನೀಡಿ ಸಭಾಪತಿ ಸ್ಪಷ್ಟನೆ ಕೇಳಿದ್ದಾರೆ.

ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಡಿ.16ರಂದು ಪರಿಷತ್‌ ಕಾರ್ಯದರ್ಶಿ ಕೆ.ಆರ್‌. ಮಹಾಲಕ್ಷ್ಮಿ ಅವರಿಗೆ ಶೋಕಾಸ್‌ ನೋಟಿಸ್‌ ನೀಡಿದ್ದರು. 48 ಗಂಟೆಗಳೊಳಗೆ ಉತ್ತರ ಸಲ್ಲಿಸುವಂತೆ ಸೂಚಿಸಿದ್ದರು. ಉತ್ತರ ನೀಡಲು ಎರಡು ದಿನಗಳ ಕಾಲಾವಕಾಶ ಪಡೆದಿದ್ದ ಕಾರ್ಯದರ್ಶಿ, ಮಂಗಳವಾರ ಮೂರು ಪುಟಗಳ ಉತ್ತರವನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾವು ಯಾವುದೇ ರೀತಿಯಲ್ಲೂ ಕರ್ತವ್ಯಲೋಪ ಎಸಗಿಲ್ಲ. ಅಧಿಕಾರದ ವ್ಯಾಪ್ತಿಯನ್ನೂ ಮೀರಿ ವರ್ತಿಸಿಲ್ಲ. ಸಭಾಪತಿಯವರ ಪೀಠದಲ್ಲಿದ್ದ ಉಪ ಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಅವರಿಗೆ ತಾವು ಕಡತ ನೀಡಿಲ್ಲ. ಬೇರೊಬ್ಬ ಅಧಿಕಾರಿ ಕಡತ ನೀಡಿದ್ದಾರೆ. ಸದನದ ನಿಯಾಮವಳಿಯ ಝೆರಾಕ್ಸ್‌ ಪ್ರತಿಯನ್ನು ತಮ್ಮ ಬಳಿ ಇರಿಸಿಕೊಂಡಿದ್ದು, ಅದನ್ನು ಮಾತ್ರ ಉಪ ಸಭಾಪತಿಗೆ ನೀಡಲಾಗಿತ್ತು ಎಂದು ಕಾರ್ಯದರ್ಶಿ ಉತ್ತರದಲ್ಲಿ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಕಾರ್ಯದರ್ಶಿ ಸಲ್ಲಿಸಿರುವ ಉತ್ತರದಲ್ಲಿ ಸದನದ ಮಾರ್ಷಲ್‌ ಹೇಳಿಕೆ ಇಲ್ಲ. ಅವರು ಉಲ್ಲೇಖಿಸಿರುವವರ ಪೈಕಿ ಕೆಲವು ಅಧಿಕಾರಿಗಳು ಡಿ.15ರಂದು ಘಟನೆ ನಡೆದ ಸಂದರ್ಭದಲ್ಲಿ ಸಭಾಪತಿ ಪೀಠದ ಬಳಿ ಇರಲಿಲ್ಲ. ಬೇರೆಯವರು ಹಾಜರಿರುವುದು ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಈ ಎಲ್ಲವನ್ನೂ ಪರಿಶೀಲಿಸಿ ಸ್ಪಷ್ಟ ಉತ್ತರ ನೀಡುವಂತೆ ಸಭಾಪತಿ ಬುಧವಾರ ಸಂಜೆ ಕಾರ್ಯದರ್ಶಿಗೆ ನೆನಪೋಲೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ವರದಿ ಸಲ್ಲಿಸಲು ಸೂಚನೆ: ಡಿ.15ರಂದು ತಾವು ಸದನಕ್ಕೆ ಬರುವವರೆಗೆ ತಮ್ಮ ಅನುಪಸ್ಥಿತಿಯಲ್ಲಿ ಮತ್ತು ತಾವು ಸದನದ ಕಲಾಪವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಿ ತೆರಳಿದ ಬಳಿಕ ನಡೆದಿರುವ ಘಟನಾವಳಿಗಳ ಕುರಿತು ವಿಸ್ತೃತ ವರದಿಯನ್ನೂ ಸಲ್ಲಿಸುವಂತೆ ನೋಟಿಸ್‌ನಲ್ಲಿ ಸಭಾಪತಿ ಸೂಚಿಸಿದ್ದರು. ಆದರೆ, ಕಾರ್ಯದರ್ಶಿ ವರದಿ ಸಲ್ಲಿಸಿಲ್ಲ. ತಕ್ಷಣವೇ ವರದಿ ನೀಡುವಂತೆಯೂ ಬುಧವಾರ ಸೂಚನೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT