ಶನಿವಾರ, ಮಾರ್ಚ್ 25, 2023
28 °C
2.06 ಲಕ್ಷ ಜನರಿಗೆ ನೆರವು ಕೊಡಲು ₹103 ಕೋಟಿ

ಅನುದಾನರಹಿತ ಶಾಲಾ ಶಿಕ್ಷಕರಿಗೆ ₹5 ಸಾವಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದಾಗಿ ವೇತನ ಇಲ್ಲದೇ ಸಂಕಷ್ಟದಲ್ಲಿರುವ ಅನುದಾನರಹಿತ ಶಾಲಾ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್‌ ಅಡಿ ತಲಾ ₹ 5,000 ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕಷ್ಟದಲ್ಲಿರುವ ಶಿಕ್ಷಕರು ಮತ್ತು ಬೋಧಕೇತರರ ನೆರವಿಗೆ ಸರ್ಕಾರ ನಿಲ್ಲಬೇಕು ಎಂದು ವರ್ಷದಿಂದಲೂ ಬೇಡಿಕೆ ಇತ್ತು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಅವರು ನಡೆಸಿದ ಹಲವು ಸಭೆಗಳಲ್ಲಿ ಈ ಬೇಡಿಕೆ ಮಂಡನೆಯಾಗಿತ್ತು. ಖಾಸಗಿ ಶಿಕ್ಷಣ ಸಂಸ್ಥೆಗಳು, ಶಿಕ್ಷಕ ಪ್ರತಿನಿಧಿಗಳ ಮನವಿಯನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಗಮನಕ್ಕೆ ತರಲಾಗಿತ್ತು. ಈ ಕುರಿತು ಪ್ರಸ್ತಾವನೆ ಸಿದ್ಧಪಡಿಸಿದ್ದ ಇಲಾಖೆ ಅದನ್ನು ಆರ್ಥಿಕ ಇಲಾಖೆಗೆ ಕಳಿಸಿತ್ತು. ಅದಕ್ಕೆ ಈಗ ಒಪ್ಪಿಗೆ ಸಿಕ್ಕಿದೆ.

ರಾಜ್ಯದ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,72,945 ಶಿಕ್ಷಕರು ಮತ್ತು 34,000 ಬೋಧಕೇತರ ಸಿಬ್ಬಂದಿ ಒಳಗೊಂಡಂತೆ ಒಟ್ಟು 2,06,945 ಸಿಬ್ಬಂದಿಗೆ ಪರಿಹಾರ ಸಿಗಲಿದೆ. ಈ ಉದ್ದೇಶಕ್ಕೆ ₹103.47 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಲು ಶುಕ್ರವಾರ ಹೊರಡಿಸಿದ ಆದೇಶದಲ್ಲಿ ಸೂಚಿಸಲಾಗಿದೆ.

ಆರ್‌ಟಿಇ ಅಡಿ ಖಾಸಗಿ ಶಾಲೆಗಳ ಶುಲ್ಕ ಮರುಪಾವತಿ ಕಾರ್ಯಕ್ರಮದಡಿ ಒದಗಿಸಲಾದ ಅನುದಾನದಿಂದ ಈ ಮೊತ್ತವನ್ನು ಭರಿಸಲಾಗುವುದು. ಪರಿಹಾರದ ಮೊತ್ತವನ್ನು ಅರ್ಹ ಫಲಾನುಭವಿಗಳ ಖಾತೆಗೇ ಜಮೆ ಮಾಡಲಾಗುವುದು. ಅದಕ್ಕೂ ಮೊದಲು ಅವರು ಬ್ಯಾಂಕ್‌ ಖಾತೆಯನ್ನು ಆಧಾರ್‌ಗೆ ಜೋಡಣೆ ಮಾಡಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವೇತನ ಇಲ್ಲದೆ ಸಂಕಷ್ಟ
ಖಾಸಗಿ ಅನುದಾನರಹಿತ ಬಹುತೇಕ ಶಾಲೆಗಳಲ್ಲಿ ವೇತನ ನೀಡುತ್ತಿಲ್ಲ, ಕೆಲವು ಕಡೆಗಳಲ್ಲಿ ಅರ್ಧದಷ್ಟು ವೇತನ ನೀಡುತ್ತಿದ್ದಾರೆ. ಇವರಲ್ಲಿ ಬಹುತೇಕರು ಜೀವನೋಪಾಯಕ್ಕಾಗಿ ಹಣ್ಣು–ತರಕಾರಿ ಮಾರುವುದೂ ಸೇರಿದಂತೆ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಮಧ್ಯೆ, ಸಚಿವ ಎಸ್‌.ಸುರೇಶ್‌ಕುಮಾರ್ ಅವರು ಸರ್ಕಾರಿ ಶಿಕ್ಷಕರು ತಮ್ಮ ವೇತನದಲ್ಲಿ ಒಂದು ಅಥವಾ ಎರಡು ದಿನಗಳ ವೇತನವನ್ನು ಪರಿಹಾರಕ್ಕಾಗಿ ನೀಡಲು ಸಾಧ್ಯವೇ ಎಂದು ಮನವಿ ಮಾಡಿದ್ದರು. ಅದನ್ನು ಶಿಕ್ಷಕರ ಸಂಘ ಒಪ್ಪಿಕೊಂಡಿರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು