ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ: ಪ್ರತಿಕಾಯದ ಬಗ್ಗೆ ಅಧ್ಯಯನ

ಜಯದೇವ ಹೃದ್ರೋಗ ಸಂಸ್ಥೆಯಿಂದ ಶೀಘ್ರದಲ್ಲೇ ಪ್ರಾರಂಭ
Last Updated 9 ಜುಲೈ 2021, 17:04 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಲಸಿಕೆ ಮೊದಲ ಡೋಸ್ ಪಡೆದ 60 ದಿನಗಳ ಬಳಿಕ ವ್ಯಕ್ತಿಯ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ಪ್ರತಿಕಾಯ (ಆ್ಯಂಟಿಬಾಡಿ) ವೃದ್ಧಿಯಾಗಿರುತ್ತದೆ ಎನ್ನುವುದರ ಬಗ್ಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಅಧ್ಯಯನ ನಡೆಸಲು ಮುಂದಾಗಿದೆ.

ಕೋವಿಡ್ ಲಸಿಕೆಯು ಎಷ್ಟು ದಿನಗಳವರೆಗೆವ್ಯಕ್ತಿಯನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ ಎನ್ನುವುದರ ಬಗ್ಗೆ ಖಚಿತತೆ ಇಲ್ಲ. ಅದೇ ರೀತಿ, ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ಪ್ರತಿಕಾಯಗಳು ವೃದ್ಧಿಯಾಗಿರುತ್ತವೆ ಎನ್ನುವುದರ ಬಗ್ಗೆ ಲಸಿಕೆ ತಯಾರಿಕಾ ಕಂಪನಿಗಳು ನಿಖರವಾಗಿ ಹೇಳಿಲ್ಲ. ಹಾಗಾಗಿ, ಜಯದೇವ ಹೃದ್ರೋಗ ಸಂಸ್ಥೆಯು ಈ ಬಗ್ಗೆ ಅಧ್ಯಯನ ನಡೆಸಲು ಯೋಜನೆ ರೂಪಿಸಿದೆ.

ಸಂಸ್ಥೆಯು ಕಳೆದ ಮೇ ತಿಂಗಳಲ್ಲಿ ಎರಡೂ ಡೋಸ್ ಲಸಿಕೆ ಪಡೆದ ವೈದ್ಯಕೀಯ ಸಿಬ್ಬಂದಿಯನ್ನು ಅಧ್ಯಯನಕ್ಕೆ ಒಳಪಡಿಸಿತ್ತು. ಆಗ ಶೇ 77ರಷ್ಟು ಸಿಬ್ಬಂದಿಯಲ್ಲಿ ಉತ್ತಮವಾಗಿ ಪ್ರತಿಕಾಯ ವೃದ್ಧಿಯಾಗಿರುವುದು ತಿಳಿದುಬಂದಿತ್ತು. ಈ ಅಧ್ಯಯನಕ್ಕೆ ಒಳಪಟ್ಟ 140 ಸಿಬ್ಬಂದಿ ನಾಲ್ಕುವಾರಗಳ ಅಂತರದಲ್ಲಿ ಎರಡು ಡೋಸ್ ‘ಕೋವಿಶೀಲ್ಡ್’ ಲಸಿಕೆ ಪಡೆದುಕೊಂಡಿದ್ದರು. ಇವರಲ್ಲಿ 71 ಮಂದಿ ಪುರುಷರು ಮತ್ತು 69 ಮಂದಿ ಮಹಿಳೆಯರಾಗಿದ್ದರು. ವೈದ್ಯರು ಕೂಡ ಈ ಅಧ್ಯಯನಕ್ಕೆ ಒಳಪಟ್ಟಿದ್ದರು.

ಈಗ ‘ಕೋವಿಶೀಲ್ಡ್‌’ ಲಸಿಕೆಯ ಎರಡು ಡೋಸ್ ನಡುವಿನ ಅಂತರವನ್ನು 12ರಿಂದ 16 ವಾರಗಳಿಗೆ ನಿಗದಿಪಡಿಸಲಾಗಿದೆ. ಈ ಅಂತರದಲ್ಲಿ ಉತ್ತಮವಾಗಿ ಪ್ರತಿಕಾಯ ವೃದ್ಧಿಯಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹೀಗಾಗಿ, ಜಯದೇವ ಹೃದ್ರೋಗ ಸಂಸ್ಥೆಯು ವಿವಿಧ ವಯೋಮಾನದವರನ್ನು ಮೊದಲ ಡೋಸ್ ಪಡೆದ 60 ದಿನಗಳ ಬಳಿಕ ಅಧ್ಯಯನಕ್ಕೆ ಒಳಪಡಿಸುತ್ತಿದೆ.

‘ಮೊದಲ ಡೋಸ್ ಲಸಿಕೆ ಪಡೆದವರಲ್ಲಿ ಪ್ರತಿಕಾಯ ಯಾವ ಪ್ರಮಾಣದಲ್ಲಿ ಅಭಿವೃದ್ಧಿಯಾಗಲಿದೆ ಎನ್ನುವುದರ ಬಗ್ಗೆ ಅಧ್ಯಯನ ನಡೆಸಲಾಗುವುದು. ಈಗಾಗಲೇ ಲಸಿಕೆ ಪಡೆದ 18ರಿಂದ 44 ವರ್ಷದ ವಯೋಮಾನದವರು ಮೊದಲ ಡೋಸ್ ಪಡೆದು 60 ದಿನಗಳು ಆಗದ ಕಾರಣ ಅಧ್ಯಯನ ಪ್ರಾರಂಭಿಸಿಲ್ಲ. ಈ ವಯೋಮಾನದವರನ್ನು ಕೂಡ ಅಧ್ಯಯನಕ್ಕೆ ಒಳಪಡಿಸಬೇಕಾದ್ದರಿಂದ ಇನ್ನಷ್ಟು ದಿನ ಕಾದು, 60 ದಿನಗಳಾದ ಬಳಿಕ ಅಧ್ಯಯನ ನಡೆಸಲಾಗುತ್ತದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ದೀರ್ಘಾವಧಿ ಪರಿಣಾಮ: ಅಧ್ಯಯನ
‘ಕೋವಿಡ್ ಲಸಿಕೆಯ ದೀರ್ಘಾವಧಿ ಪರಿಣಾಮದ ಬಗ್ಗೆ ಕೂಡ ಮುಂದಿನ ದಿನಗಳಲ್ಲಿ ಅಧ್ಯಯನ ನಡೆಸಲಾಗುತ್ತದೆ. ಎರಡೂ ಡೋಸ್ ಲಸಿಕೆ ಪಡೆದ ಬಳಿಕ ವ್ಯಕ್ತಿಯಲ್ಲಿ ಯಾವ ಪ್ರಮಾಣದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗಿರುತ್ತದೆ ಎಂದು ತಿಳಿಯುವುದು ಈ ಅಧ್ಯಯನದ ಉದ್ದೇಶವಾಗಿದೆ. ಎರಡೂ ಡೋಸ್ ಲಸಿಕೆ ಪಡೆದ ಬಳಿಕ ಮೂರನೇ ಡೋಸ್ ಲಸಿಕೆ ಪಡೆಯಬೇಕಾಗುತ್ತದೆಯೇ ಅಥವಾ ಎರಡನೇ ಡೋಸ್ ಲಸಿಕೆಯು ದೀರ್ಘಾವಧಿ ಕೆಲಸ ಮಾಡಲಿದೆಯೇ ಎನ್ನುವುದನ್ನು ತಿಳಿಯಬೇಕಿದೆ. ಹೀಗಾಗಿ, ಎರಡೂ ಡೋಸ್ ಪಡೆದವರನ್ನು ಒಂಬತ್ತು ತಿಂಗಳ ಬಳಿಕ ಅಧ್ಯಯನಕ್ಕೆ ಒಳಪಡಿಸುತ್ತೇವೆ’ ಎಂದು ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT