ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19: ರಾಜ್ಯದಲ್ಲಿ ಸೋಂಕು ದೃಢ ಪ್ರಮಾಣ ಏರಿಕೆ

ಪರೀಕ್ಷೆ ಹೆಚ್ಚಾದರೆ ಸೋಂಕಿತರ ಸಂಖ್ಯೆಯೂ ಏರಿಕೆ l ವೈದ್ಯಕೀಯ ಕ್ಷೇತ್ರದ ತಜ್ಞರ ಕಳವಳ
Last Updated 18 ಮೇ 2021, 20:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ದೃಢ ಪ್ರಮಾಣವು ನಿರಂತರ ಏರುಗತಿಯಲ್ಲಿ ಸಾಗುತ್ತಿರುವ ಹೊತ್ತಿನಲ್ಲಿ ಪರೀಕ್ಷೆಗಳ ಸಂಖ್ಯೆಯನ್ನು ಇಳಿಕೆ ಮಾಡುವ ಮೂಲಕ ಕೋವಿಡ್ ನಿಯಂತ್ರಣದಲ್ಲಿದೆ ಎಂದು ಬಿಂಬಿಸಲು ಸರ್ಕಾರ ಹೊರಟಿದೆಯೇ ಎಂಬ ಅನುಮಾನ ಮೂಡಿದೆ.

ಕರ್ನಾಟಕದ 17 ಜಿಲ್ಲೆಗಳಲ್ಲಿ ಸೋಂಕು ದೃಢ ಪ್ರಮಾಣವು ರಾಜ್ಯದ ಒಟ್ಟು ಸರಾಸರಿಗಿಂತ (ಕಳೆದ ಒಂದು ವಾರದ ಸರಾಸರಿ ಶೇ 27.52) ಅಧಿಕವಾಗಿದೆ.

ಸದ್ಯ ರಾಜ್ಯದಲ್ಲಿ 68 ಸರ್ಕಾರಿ ಹಾಗೂ 128 ಖಾಸಗಿ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಇವು ದಿನವೊಂದಕ್ಕೆ 2 ಲಕ್ಷಕ್ಕೂ ಅಧಿಕ ಮಾದರಿಗಳನ್ನು ಆರ್‌ಟಿ–ಪಿಸಿಆರ್ ವಿಧಾನದ ಮೂಲಕ ಪರೀಕ್ಷೆ ಮಾಡುವ ಸಾಮರ್ಥ್ಯ ಹೊಂದಿವೆ. ಈಗ ಇವುಗಳ ಶೇ 50ರಷ್ಟು ಸಾಮರ್ಥ್ಯವನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದ್ದು, ಪರೀಕ್ಷೆಗಳ ಸಂಖ್ಯೆಯನ್ನು ಲಕ್ಷದ ಗಡಿಯ ಆಸುಪಾಸಿಗೆ ಇಳಿಕೆ ಮಾಡಲಾಗಿದೆ.

ಕೋವಿಡ್ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಪರಿಣಾಮಕಾರಿಯಾಗಿ ಪರೀಕ್ಷೆ ಮತ್ತು ಸಂಪರ್ಕ ಪತ್ತೆ ನಡೆಸಬೇಕೆಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಸರ್ಕಾರಕ್ಕೆ ಸೂಚಿಸಿತ್ತು. ಅದೇ ರೀತಿ, ನಿತ್ಯ ಸರಾಸರಿ 1.50 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲು ಸಮಿತಿಯ ತಜ್ಞರು ಶಿಫಾರಸು ಮಾಡಿದ್ದರು.

ಪರೀಕ್ಷಾ ಪ್ರಮಾಣವನ್ನು ಅದೇ ಗತಿಯಲ್ಲಿ ಮುಂದುವರಿಸಿದ್ದರೆ (ಸೋಂಕು ದೃಢಪಡುವ ಈಗಿನ ಪ್ರಮಾಣದ ಲೆಕ್ಕಾಚಾರದ ಪ್ರಕಾರ) ಪ್ರತಿದಿನ 60 ಸಾವಿರದಿಂದ 70 ಸಾವಿರ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇತ್ತು.

ಆದರೆ, ಪರೀಕ್ಷೆಗಳ ಸಂಖ್ಯೆಯನ್ನು ಮೇ ಎರಡನೇ ವಾರದಿಂದ ಇಳಿಕೆ ಮಾಡಲಾಗಿದೆ. ಪರಿಣಾಮ ಪ್ರಕರಣಗಳ ಸಂಖ್ಯೆ ಕೂಡ 30 ಸಾವಿರದಿಂದ 35 ಸಾವಿರದಷ್ಟಕ್ಕೆ ಇಳಿದಿದೆ.

ಶೇ 10ಕ್ಕೆ ಬಂದಲ್ಲಿ ನಿಯಂತ್ರಣ: ರಾಜ್ಯದಲ್ಲಿ ವಾರದಲ್ಲಿ ವರದಿಯಾದ ಪ್ರಕರಣಗಳಿಗೆ ಹೋಲಿಸಿದಲ್ಲಿ ಸೋಂಕು ದೃಢ ಪ್ರಮಾಣವು ಶೇ 30ರ ಆಸುಪಾಸಿನಲ್ಲಿದೆ. ಬಳ್ಳಾರಿ, ಉತ್ತರ ಕನ್ನಡ, ಬೆಳಗಾವಿ, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸೋಂಕು ದೃಢ ಪ್ರಮಾಣವು ಏರುಗತಿ ಪಡೆದಿದೆ. ಬೀದರ್ (ಶೇ 9.12), ಹಾವೇರಿ (ಶೇ 14.26) ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮಾತ್ರ ಈ ಪ್ರಮಾಣವು ಕಡಿಮೆಯಿದೆ. ಸೋಂಕು ದೃಢ ಪ್ರಮಾಣ ಶೇ 10ಕ್ಕಿಂತ ಕೆಳಗಡೆ ಬಂದಲ್ಲಿ ಮಾತ್ರ ಕೋವಿಡ್ ನಿಯಂತ್ರಣಕ್ಕೆ ಬಂದಿದೆ ಎಂದರ್ಥ ಎನ್ನುತ್ತಾರೆ ತಜ್ಞರು.

‘ಪ್ರಾಥಮಿಕ ಸಂಪರ್ಕ ಇರುವವರಿಗೆ ಮಾತ್ರ ಸದ್ಯ ಪರೀಕ್ಷೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ರ್‍ಯಾಂಡಮ್‌
ಪರೀಕ್ಷೆ ಕೂಡ ನಡೆಸಬೇಕಿದೆ. ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಈ ಮೊದಲು ಬಸ್‌ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಮಾದರಿಗಳನ್ನು ಸಂಗ್ರಹಿಸಲಾಗುತ್ತಿತ್ತು. ಈಗ ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ, ಸೋಂಕು ದೃಢ ಪ್ರಮಾಣ ದರ ಕಡಿಮೆಯಾಗಿಲ್ಲ’ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

ಏಪ್ರಿಲ್ ಕೊನೆಯ ವಾರದಲ್ಲಿ ‍ನಿತ್ಯ ಸರಾಸರಿ 1.70 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿತ್ತು. ದಿನವೊಂದಕ್ಕೆ ನಡೆಸಲಾದ ಪರೀಕ್ಷೆಗಳ ಸಂಖ್ಯೆ 1.89 ಲಕ್ಷ ದಾಟಿತ್ತು. ಇದರಿಂದಾಗಿ ಹೊಸ ಪ್ರಕರಣಗಳ ಸಂಖ್ಯೆ ಕೂಡ 50 ಸಾವಿರದ ಗಡಿಯಲ್ಲಿತ್ತು.

ಕೋವಿಡ್ ಫಲಿತಾಂಶದಲ್ಲಿ ಗೊಂದಲ

ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಕೆಲ ಪ್ರಕರಣಗಳಲ್ಲಿ ಆರ್‌ಟಿ–ಪಿಸಿಆರ್ ಪರೀಕ್ಷೆಯಲ್ಲಿ ಕೂಡ ಸೋಂಕು ದೃಢಪಡುತ್ತಿಲ್ಲ. ಹೀಗಾಗಿ, ಲಕ್ಷಣಗಳಿರುವವರಿಗೆ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಲ್ಲಿ ಸಿ.ಟಿ ಸ್ಕ್ಯಾನ್‌ಗೆ ಶಿಫಾರಸು ಮಾಡಲಾಗುತ್ತಿದೆ. ಇದರಿಂದಾಗಿ ಕೆಲ ಪ್ರಕರಣಗಳಲ್ಲಿ ಒಬ್ಬನೇ ವ್ಯಕ್ತಿ ಎರಡು ಬಾರಿ ಪರೀಕ್ಷೆಗೆ ಒಳಪಡುತ್ತಿದ್ದಾರೆ. ಸದ್ಯ ಲಕ್ಷಣಗಳು ಇರುವವರಿಗೆ ಮಾತ್ರ ಕೋವಿಡ್ ‍ಪರೀಕ್ಷೆ ಮಾಡುತ್ತಿರುವ ಕಾರಣ ಸೋಂಕು ದೃಢ ಪ್ರಮಾಣ ಶೇ 50ಕ್ಕೂ ಅಧಿಕ ಪ್ರಮಾಣದಲ್ಲಿ ಇರಬೇಕಿತ್ತು ಎಂದು ವೈದ್ಯರು ಪ್ರತಿಪಾದಿಸಿದ್ದಾರೆ.

‘ಜ್ವರ, ನೆಗಡಿ, ಕೆಮ್ಮು ಸೇರಿದಂತೆ ವಿವಿಧ ಲಕ್ಷಣ ಇರುವವರಿಗೆ ಪರೀಕ್ಷೆ ಮಾಡಲಾಗುತ್ತಿದೆ. ಮನೆಯಲ್ಲಿ ಒಬ್ಬರಿಗೆ ಸೋಂಕು ತಗುಲಿದರೆ ಎಲ್ಲರಿಗೂ ಅದು ಹರಡುತ್ತದೆ. ಈ ಸೋಂಕು ದೃಢ ಪ್ರಮಾಣಕ್ಕೆ ಅರ್ಥವಿಲ್ಲ. ಈಗ ಮಾಡುತ್ತಿರುವ ಪರೀಕ್ಷೆಗಳ ಪ್ರಕಾರ ಸೋಂಕು ದೃಢ ಪ್ರಮಾಣ ಶೇ 80ರಷ್ಟು ಕಾಣಿಸಿಕೊಳ್ಳಬೇಕಿತ್ತು. ನೆಗಡಿ, ಕೆಮ್ಮು ಇರುವವರಿಗೆ ಶೇ 90ರಷ್ಟು ಮಂದಿಗೆ ಸೋಂಕು ದೃಢಪಡುತ್ತದೆ. ಈ ವಾರ ಸೋಂಕು ಉತ್ತುಂಗದಲ್ಲಿಯೇ ಇರುತ್ತದೆ. ಆಮೇಲೆ ಇಳಿಕೆ ಆಗಲಿದೆ’ ಎಂದು ಬಳ್ಳಾರಿಯ ವೈದ್ಯ ಡಾ. ಯೋಗಾನಂದ ರೆಡ್ಡಿ ತಿಳಿಸಿದರು.

***

ಸೋಂಕು ಲಕ್ಷಣ ಇದ್ದವರಿಗೆ ಮಾತ್ರ ಈಗ ಪರೀಕ್ಷೆ ಮಾಡಲಾಗುತ್ತಿದೆ. ದ್ವಿತೀಯ ಸಂಪರ್ಕ ಇರುವವರಿಗೆ ಕೂಡ ಪರೀಕ್ಷೆ ಅಗತ್ಯ. ದಿನಕ್ಕೆ ಸರಾಸರಿ 1.50 ಲಕ್ಷ ಪರೀಕ್ಷೆ ನಡೆಸಬೇಕು.

-ಡಾ.ಸಿ.ಎನ್. ಮಂಜುನಾಥ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ

ಮಂಗಳವಾರ 58,395 ಜನ ಗುಣಮುಖರಾಗಿದ್ದು, ಒಂದೇ ದಿನದಲ್ಲಿ ಚೇತರಿಸಿಕೊಂಡವರ ಅತೀ ಹೆಚ್ಚು ಸಂಖ್ಯೆ ಇದಾಗಿದೆ. 30,309 ಹೊಸ ಪ್ರಕರಣಗಳು ಪತ್ತೆಯಾಗಿವೆ.

- ಡಾ.ಕೆ ಸುಧಾಕರ್‌, ಆರೋಗ್ಯ ಸಚಿವ

ಪಾಸಿಟಿವಿಟಿ ದರ ಶೇ 5 ಕ್ಕಿಂತ ಇಳಿಕೆಯಾದರೆ ಸೋಂಕು ಕಡಿಮೆಯಾಗಿದೆ ಎಂದರ್ಥ. ಪಾಸಿಟಿವಿಟಿ ದರ ಶೇ 20 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳು ಒಂದೆರಡಷ್ಟೇ ಇವೆ.

- ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT