ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: 1.91 ಲಕ್ಷ ಬೀದಿಬದಿ ವ್ಯಾಪಾರಿಗಳ ಖಾತೆಗೆ ಹಣ- ಸಿಎಂ ಬಿಎಸ್‌ವೈ

1.91 ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆ
Last Updated 8 ಜೂನ್ 2021, 21:41 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಂಕ್‌ ಖಾತೆಯ ಜೊತೆ ಆಧಾರ ಜೋಡಣೆಯಾಗಿರುವ 1,91,684 ಬೀದಿಬದಿ ವ್ಯಾಪಾರಿಗಳ ಖಾತೆಗೆ ತಲಾ ₹ 2 ಸಾವಿರದಂತೆ ಒಟ್ಟು ₹ 38.33 ಕೋಟಿ ವರ್ಗಾವಣೆ ಮಾಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಂಗಳವಾರ ಚಾಲನೆ ನೀಡಿದರು.

ಕೋವಿಡ್ ಎರಡನೇ ಅಲೆಯ ಆರ್ಥಿಕ ಪ್ಯಾಕೇಜ್‍ನಡಿ ಬೀದಿಬದಿ ವ್ಯಾಪಾರಿಗಳಿಗೆ ಸಹಾಯಧನ ಘೋಷಿಸಲಾಗಿದ್ದು, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ನೋಂದಾಯಿಸಿರುವ ಬೀದಿಬದಿ ವ್ಯಾಪಾರಿಗಳಿಗೆ ಈ ನೆರವು ಸಿಗಲಿದೆ.

ಬಳಿಕ ಮಾತನಾಡಿದ ಮುಖ್ಯಮಂತ್ರಿ, ‘ನಗರ ಸ್ಥಳೀಯಸಂಸ್ಥೆಗಳಿಂದ ನಡೆಸಿದ ಸಮೀಕ್ಷೆಯಲ್ಲಿ 2,16,439 ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ. ಅವರಿಗೆ ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣಪತ್ರ ವಿತರಿಸಿ, ವ್ಯಾಪಾರದ ಮೂಲಸೌಕರ್ಯ ಕಲ್ಪಿಸಲಾಗಿದೆ. ಅಲ್ಲದೆ, ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯವನ್ನು ಪಡೆಯಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈ ಫಲಾನುಭವಿಗಳ ಪೈಕಿ ಆಧಾರ ಜೋಡಣೆಯಾಗಿರುವ 1,91,684 ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ತಲಾ ₹ 2 ಸಾವಿರದಂತೆ ಒಟ್ಟು ₹ 38.33 ಕೋಟಿ ವರ್ಗಾಯಿಸಲಾಗುತ್ತಿದೆ’ ಎಂದರು.

‘ಬ್ಯಾಂಕ್ ಖಾತೆಗೆ ಆಧಾರ ಜೋಡಿಸದ ಫಲಾನುಭವಿಗಳಿಗೆ ಆಧಾರ್ ಜೋಡಣೆ ಮಾಡಿದ ನಂತರ ಸಹಾಯಧನ ಬಿಡುಗಡೆ ಮಾಡಲಾಗುವುದು. ಈಗಾಗಲೇ ನೋಂದಾಯಿಸಿರುವ ಬೀದಿಬದಿ ವ್ಯಾಪಾರಿಗಳು ಈ ಸಹಾಯಧನ ಪಡೆಯಲು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಈ ಪ್ಯಾಕೇಜ್‍ನಡಿ ಬಿಡುಗಡೆ ಮಾಡಿರುವ ಸಹಾಯಧನವನ್ನು ಬೀದಿಬದಿ ವ್ಯಾಪಾರಿಗಳ ಯಾವುದೇ ಸಾಲಕ್ಕೆ ಸರಿದೂಗಿಸಬಾರದೆಂದು ಸಂಬಂಧಿಸಿದ ಬ್ಯಾಂಕಿನವರಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಪ್ರಧಾನಮಂತ್ರಿ ಬೀದಿ ವ್ಯಾಪಾರಗಳ ಆತ್ಮನಿರ್ಭರ್ ನಿಧಿ ಯೋಜನೆಯಡಿ ತಲಾ ₹ 10 ಸಾವಿರ ವರೆಗೆ ಬ್ಯಾಂಕ್ ಮೂಲಕ ಕಿರುಸಾಲ ಸೌಲಭ್ಯ ನೀಡಲಾಗಿದೆ. ಈವರಗೆ ಈ ಯೋಜನೆಯಡಿ ₹ 107.92 ಕೋಟಿ ಸಾಲ ವಿತರಿಸಲಾಗಿದೆ’ ಎಂದೂ ಮುಖ್ಯಮಂತ್ರಿ ತಿಳಿಸಿದರು.

‘ಕೋವಿಡ್‌ ಎರಡನೇ ಅಲೆ ತೀವ್ರವಾಗಿ ಬಾಧಿಸಿದೆ. ಇಂಥ ಕಠಿಣ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ವಿವಿಧ ವಲಯಗಳ ಕಾರ್ಮಿಕರು, ರೈತರು, ಶಿಕ್ಷಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಅರ್ಚಕರು ಮತ್ತಿತರರಿಗೆ ಎರಡು ಹಂತದಲ್ಲಿ ಸರ್ಕಾರ ₹ 1,700 ಕೋಟಿಗೂ ಹೆಚ್ಚಿನ ಧನ ಸಹಾಯ ಘೋಷಿಸಿದ್ದು, ಈಗಾಗಲೇ ವಿವಿಧ ವರ್ಗದ ಕಾರ್ಮಿಕರಿಗೆ ನೇರ ನಗದು ವರ್ಗಾವಣೆ ಮೂಲಕ ಸಹಾಯಧನ ಮಾಡಲಾಗಿದೆ’ ಎಂದರು.

‘ಬೀದಿಬದಿ ವ್ಯಾಪಾರಿಗಳು ಕೋವಿಡ್ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ, ಅವರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಲು ಕ್ರಮ ವಹಿಸುವಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಬೆಂಗಳೂರು ನಗರದಲ್ಲಿ ಈ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ’ ಎಂದರು.

ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಮಾತನಾಡಿ, ‘ಬೀದಿಬದಿ ವ್ಯಾಪಾರಿಗಳಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. 2.14 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಅರ್ಜಿ ಪಡೆಯದೇ ನೇರವಾಗಿ ಸಹಾಯಧನ ವಿತರಿಸಲಾಗುತ್ತಿದೆ’ ಎಂದು ವಿವರಿಸಿದರು.

‘ಫಲಾನುಭವಿಗಳಾದ ನಂಜಪ್ಪ ಹಾಗೂ ಲಕ್ಷ್ಮಮ್ಮ ಅವರು ಪಿ.ಎಂ. ಸ್ವನಿಧಿ ಅಡಿ ₹ 10 ಸಾವಿರ ಸಾಲ ಸೌಲಭ್ಯ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ನೀಡುತ್ತಿರುವ ₹ 2 ಸಾವಿರ ನೆರವಿನಿಂದ ಅನುಕೂಲವಾಗಿದೆ’ ಎಂದೂ ತಿಳಿಸಿದರು.

ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣರೆಡ್ಡಿ, ಇ-ಆಡಳಿತ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಜೀವ್ ಚಾವ್ಲಾ, ಮುಖ್ಯಮಂತ್ರಿಯ ಕಾರ್ಯದರ್ಶಿ ಸೆಲ್ವಕುಮಾರ್, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ನಿರ್ದೇಶಕಿ ಎನ್. ಮಂಜುಶ್ರೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT