ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಎರಡನೇ ಅಲೆ: ಆತಂಕ ಬೇಕಿಲ್ಲ, ಎಚ್ಚರ ತಪ್ಪಂಗಿಲ್ಲ

ಪ್ರಜಾವಾಣಿ ಸಂವಾದ
Last Updated 22 ಮಾರ್ಚ್ 2021, 18:42 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಎರಡನೇ ಅಲೆ ಪ್ರಾರಂಭವಾಗಿದೆ. ಆದರೆ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿದರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್‌ ಅಭಯ ನೀಡಿದರೆ, ಸೋಂಕು ವ್ಯಾಪಕವಾಗಿ ಹರಡದಂತೆ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಲಸಿಕೆ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ. ಕೆ.ವಿ. ತ್ರಿಲೋಕ್‌ ಚಂದ್ರ ತಿಳಿಸಿದರು.

‘ಪ್ರಜಾವಾಣಿ’ ವತಿಯಿಂದ ಸೋಮವಾರ ಏರ್ಪಡಿಸಿದ್ದ ಫೇಸ್‌ಬುಕ್‌ ಸಂವಾದದಲ್ಲಿ ಈ ಇಬ್ಬರು ತಜ್ಞರು ಕೋವಿಡ್ ಕುರಿತು ಅಮೂಲ್ಯ ಸಲಹೆಗಳನ್ನು ಹಂಚಿಕೊಂಡರು.

‘ಸಾಮಾಜಿಕ ಜವಾಬ್ದಾರಿ ತೋರುವ ಸಮಯ’

‘ತೀವ್ರಗತಿಯಲ್ಲಿ ಏರುತ್ತಿದ್ದ ಕೋವಿಡ್‌ ಪ್ರಕರಣಗಳು ಕಡಿಮೆಯಾಗಿ, ಮತ್ತೆ ಹೆಚ್ಚಾಗುವುದಕ್ಕೆ ಅಲೆ ಎನ್ನುತ್ತಾರೆ. ನಾಲ್ಕು ತಿಂಗಳಲ್ಲಿ ಕಡಿಮೆಯಾಗಿದ್ದು, ಈಗ ಜಾಸ್ತಿಯಾಗಿರುವ ಕಾರಣ ಎರಡನೇ ಅಲೆ ಪ್ರಾರಂಭವಾಗಿದೆ ಎನ್ನಬಹುದು. ವಿವಾಹದಂತಹ ಸಾಮಾಜಿಕ ಕಾರ್ಯಕ್ರಮಗಳನ್ನು, ಜಾತ್ರೆಗಳನ್ನು, ರಂಜಾನ್ ಸಂದರ್ಭದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿರ್ಬಂಧಿಸುವ ಅವಶ್ಯಕತೆ ಈಗ ಹೆಚ್ಚಿದೆ’ ಎಂದು ಮಂಜುನಾಥ್ ಹೇಳಿದರು.

‘ಯಾವುದೇ ವೈರಸ್‌ ಆರು ತಿಂಗಳು ಅಥವಾ 9 ತಿಂಗಳಲ್ಲಿ ರೂಪಾಂತರ ಹೊಂದುತ್ತಿರುತ್ತದೆ. ಒಂದು ವರ್ಷದಲ್ಲಿ ಹಲವು ಪಾಠ ಕಲಿತಿದ್ದೇವೆ. ನಮ್ಮ ಆರೋಗ್ಯದ ಜೊತೆಗೆ ಸಮಾಜದ ಆರೋಗ್ಯವನ್ನೂ ರಕ್ಷಿಸಬೇಕಾದ ಸಮಯ ಈಗ ಬಂದಿದೆ. ಮೊದಲು ನಗರ ಪ್ರದೇಶದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತದೆ. ಒಂದೂವರೆ ತಿಂಗಳಲ್ಲಿ ಹಳ್ಳಿಗಳನ್ನೂ ಸೋಂಕು ಹೆಚ್ಚು ಬಾಧಿಸಲಿದೆ. ಇನ್ನು ಎರಡು–ಮೂರು ವಾರಗಳಲ್ಲಿ ಇದು ಯಾವ ಹಂತಕ್ಕೆ ಹೋಗುತ್ತದೆ ಎಂಬುದು ತಿಳಿಯಲಿದೆ’ ಎಂದರು.

‘ಲಂಡನ್‌, ಪ್ಯಾರಿಸ್‌ನಂತಹ ಮಹಾನಗರಗಳಲ್ಲಿ ತೀವ್ರ ನಿಗಾ ಘಟಕಗಳೆಲ್ಲ ಈಗಾಗಲೇ ಭರ್ತಿಯಾಗಿವೆ. ಅಲ್ಲಿ ಮೂರನೇ ಹಂತದ ಲಾಕ್‌ಡೌನ್‌ ಘೋಷಿಸಲಾಗಿದೆ. ಗುಂಪು–ಗುಂಪಾಗಿ ಸೇರಬಾರದು ಮತ್ತು ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತಹ ಕ್ರಮಗಳಿಂದ ಈ ಸ್ಥಿತಿಯನ್ನು ರಾಜ್ಯದಲ್ಲಿ ನಿಯಂತ್ರಿಸಬಹುದಾಗಿದೆ’ ಎಂದರು.

‘ಕೋವಿಶೀಲ್ಡ್‌ ಅಥವಾ ಕೋವ್ಯಾಕ್ಸಿನ್‌ ತೆಗೆದುಕೊಂಡರೆ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಆ ಕ್ಷಣಕ್ಕೆ ಸುಸ್ತು ಅಥವಾ ತಲೆನೋವು ಕಾಣಿಸಿಕೊಂಡರೆ ಅದು ಪರಿಣಾಮವೇ ಹೊರತು ಅಡ್ಡಪರಿಣಾಮವಲ್ಲ. ಯಾವುದೇ ಲಸಿಕೆ ತೆಗೆದುಕೊಂಡರೂ ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಲಸಿಕೆ ತೆಗೆದುಕೊಂಡಾಗ ದಿಢೀರ್‌ ಸಾವು ಸಂಭವಿಸಿದರೆ ಅದಕ್ಕೆ ಅಡ್ಡಪರಿಣಾಮ ಎನ್ನಬಹುದು’ ಎಂದು ವಿವರಿಸಿದರು.

‘ಕೋವಿಶೀಲ್ಡ್‌ ಲಸಿಕೆ ತೆಗೆದುಕೊಂಡಾಗ 13ಕ್ಕೂ ಹೆಚ್ಚು ಜನರು ಸಾವಿಗೀಡಾದರು ಎಂಬ ಕಾರಣ ನೀಡಿ 17 ದೇಶಗಳಲ್ಲಿ ಈ ಲಸಿಕೆಯನ್ನು ಹಿಂತೆಗೆದುಕೊಳ್ಳಲಾಯಿತು. ಆದರೆ, ಸುಮಾರು 10 ಲಕ್ಷ ಜನ ಲಸಿಕೆ ಪಡೆದಾಗ ಹೃದಯಸಂಬಂಧಿ ಕಾಯಿಲೆ, ಪಾರ್ಶ್ವವಾಯು ಅಥವಾ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಂತಹ ಸಮಸ್ಯೆ ಇರುವವರು ಸಾವಿಗೀಡಾಗಿರಬಹುದು. ಸಾಮಾನ್ಯ ದಿನಗಳಲ್ಲಿನ ಅಂಕಿ–ಅಂಶ ಪರಿಗಣಿಸಿದಾಗಲೂ ಇಂತಹ ಸಮಸ್ಯೆಗಳಿಂದ ನಿರ್ದಿಷ್ಟ ಸಂಖ್ಯೆ ಜನ ಸಾವಿಗೀಡಾಗಿರುತ್ತಾರೆ. ಆದರೆ, ಅದಕ್ಕೆ ಕೋವಿಡ್‌ ಲಸಿಕೆ ಕಾರಣ ಎಂದು ಹೇಳುವುದು ಸರಿಯಲ್ಲ’ ಎಂದರು.

‘ಲಾಕ್‌ಡೌನ್‌ನಂತಹ ಕ್ರಮಗಳನ್ನು ತೆಗೆದುಕೊಂಡರೆ ಕೋವಿಡ್‌ಗಿಂತ ಹಸಿವಿನಿಂದ ಸಾಯುವವರ ಸಂಖ್ಯೆಯೇ ಹೆಚ್ಚಾಗಬಹುದು. ಇಂತಹ ಪರಿಸ್ಥಿತಿ ಬರಬಾರದು ಎಂದರೆ ಜನರಲ್ಲಿ ಸಾಮಾಜಿಕ ಜವಾಬ್ದಾರಿ ಮೂಡುವುದು ಅಗತ್ಯ’ ಎಂದು ಅವರು ಪುನರುಚ್ಛರಿಸಿದರು.

‘ವಾರದಲ್ಲಿ 12 ಲಕ್ಷ ಡೋಸ್‌ ಪೂರೈಕೆ’

‘ಎರಡನೇ ಅಲೆ ತೀವ್ರಗೊಳ್ಳದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ. ಈವರೆಗೆ 25 ಲಕ್ಷ ಜನರಿಗೆ ಕೋವಿಡ್‌ ಲಸಿಕೆ ವಿತರಿಸಿದ್ದು, ಈಗ ದಿನಕ್ಕೆ 2 ಲಕ್ಷ ಜನ ಲಸಿಕೆ ಪಡೆಯುತ್ತಿದ್ದಾರೆ. ಒಂದು ವಾರದಲ್ಲಿ 12 ಲಕ್ಷ ಡೋಸ್‌ ಪೂರೈಕೆಯಾಗಲಿದೆ’ ಎಂದು ತ್ರಿಲೋಕ್‌ಚಂದ್ರ ಹೇಳಿದರು.

‘ನೆರೆಯ ಮಹಾರಾಷ್ಟ್ರದಲ್ಲಿ ದಿನಕ್ಕೆ 10 ಸಾವಿರ, ಕೇರಳದಲ್ಲಿ 3 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಈ ನಿಟ್ಟಿನಲ್ಲಿ ಹೊರರಾಜ್ಯದಿಂದ ಬರುವವರಿಗೆ ಕೋವಿಡ್‌ ನೆಗೆಟಿವ್‌ ವರದಿ ಪ್ರದರ್ಶಿಸುವುದು ಕಡ್ಡಾಯ ಮಾಡಲಾಗಿದೆ. ಗಡಿ ಪ್ರದೇಶಗಳಲ್ಲಿ ಆರ್‌ಟಿ–‍ಪಿಸಿಆರ್‌ ಪರೀಕ್ಷೆ ನಡೆಸುವುದು ತೀವ್ರಗೊಳಿಸಲಾಗಿದೆ’ ಎಂದರು.

‘ಪ್ರತಿ ದಿನ ಒಂದು ಲಕ್ಷ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ. ಕೋವಿಡ್‌ ರೋಗಿಗಳ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಾಸಿಗೆಗಳನ್ನು ಮೀಸಲಿಡಲಾಗುತ್ತಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ತೀವ್ರ ನಿಗಾ ಘಟಕಗಳ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದರು.

‘ಕೊರೊನಾ ಪಾಸಿಟಿವ್‌ ಇದ್ದವರೂ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿರುವುದು ಸಮಸ್ಯೆಯನ್ನು ಉಂಟು ಮಾಡುತ್ತಿದೆ. ಇಂಥವರ ವಿರುದ್ಧ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.

‘ಯಾವುದೇ ಸೋಂಕಿನ ಲಕ್ಷಣ ಇರದವರಲ್ಲಿ ಕೋವಿಡ್‌ ದೃಢಪಟ್ಟಿದ್ದರೆ ಅವರು ಹೆಚ್ಚು ಅಪಾಯಕಾರಿ. ಸೋಂಕು ತಗುಲಿರುವ ಬಗ್ಗೆ ಸಣ್ಣ ಅನುಮಾನ ಬಂದರೂ ಪರೀಕ್ಷೆಗೆ ಒಳಗಾಗಬೇಕು. ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಅಥವಾ ಲಸಿಕೆ ವಿತರಿಸುವ ನಿರ್ದಿಷ್ಟ ಆಸ್ಪತ್ರೆಗಳಿಗೆ ನೇರವಾಗಿ ಹೋಗಿ ಲಸಿಕೆ ಪಡೆಯಬಹುದಾಗಿದೆ. ಆನ್‌ಲೈನ್‌ ನೋಂದಣಿ ಮಾಡಿಸಿಕೊಳ್ಳುವ ಅವಶ್ಯಕತೆಯೂ ಇಲ್ಲ. ಆಧಾರ್‌ ಕಾರ್ಡ್‌ ತೆಗೆದುಕೊಂಡು ಹೋಗಿ ತೋರಿಸಿದರೆ ಆ ಕ್ಷಣದಲ್ಲಿಯೇ ಲಸಿಕೆ ಹಾಕಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಚಿತ್ರಮಂದಿರಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಬೇಕೇ ಬೇಡವೇ ಎಂಬ ಬಗ್ಗೆ ನಡೆದಿದೆ. ಎರಡು ಮೂರು ದಿನಗಳಲ್ಲಿ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ’ ಎಂದೂ ಅವರು ಹೇಳಿದರು.

‘ರಕ್ತಹೆಪ್ಪುಗಟ್ಟುವಿಕೆ ನಿಯಂತ್ರಕ ಮಾತ್ರೆ ತೆಗೆದುಕೊಳ್ಳಬಹುದು’

‘ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರು ಆಸ್ಪ್ರಿನ್‌ ಅಥವಾ ಡಿಸ್ಪ್ರಿನ್‌ನಂತಹ ರಕ್ತಹೆಪ್ಪುಗಟ್ಟುವಿಕೆ ನಿಯಂತ್ರಿಸುವ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೋವಿಡ್ ಲಸಿಕೆ ಹಾಕಿಸಿಕೊಳ್ಳುವವರು ಈ ಮಾತ್ರೆಗಳನ್ನು ತೆಗೆದುಕೊಂಡರೆ ಅಪಾಯ ಎಂಬ ತಪ್ಪು ಕಲ್ಪನೆ ಹಬ್ಬಿದೆ. ಲಸಿಕೆ ಹಾಕಿಸಿಕೊಳ್ಳುವುದಕ್ಕೂ ಈ ಮಾತ್ರೆಗೂ ಯಾವುದೇ ಸಂಬಂಧವಿಲ್ಲ. ಧಾರಾಳವಾಗಿ ಈ ಮಾತ್ರೆಗಳನ್ನು ತೆಗೆದುಕೊಳ್ಳಬಹುದು’ ಎಂದು ಡಾ. ಮಂಜುನಾಥ್ ಹೇಳಿದರು.

‘ಕೋವಿಡ್‌ ಲಸಿಕೆಯನ್ನು ಗರ್ಭಿಣಿಯರು ಮತ್ತು ಬಾಣಂತಿಯರ ಮೇಲೆ ಪ್ರಯೋಗ ಮಾಡಿಲ್ಲವಾದ ಕಾರಣ ಈ ಮಹಿಳೆಯರಿಗೆ ಲಸಿಕೆ ನೀಡಲಾಗುತ್ತಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT