ಗುರುವಾರ , ನವೆಂಬರ್ 26, 2020
20 °C
ಆರೋಗ್ಯ ಕ್ಷೇತ್ರದ ತಜ್ಞರ ಸಲಹೆ

ನಿರ್ಣಾಯಕ ಘಟ್ಟದಲ್ಲಿ ಕೋವಿಡ್: 2 ತಿಂಗಳು ಎಚ್ಚರ ವಹಿಸಿದಲ್ಲಿ ಸಂಪೂರ್ಣ ನಿಯಂತ್ರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಎರಡು ವಾರಗಳಿಂದ ಕೋವಿಡ್‌ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ತಿಂಗಳ ಪ್ರಾರಂಭದಲ್ಲಿ ದಿನವೂ 10 ಸಾವಿರ ದಾಟುತ್ತಿದ್ದ ಪ್ರಕರಣಗಳ ಸಂಖ್ಯೆ (ಶೇ 50 ಕ್ಕೂ ಕಡಿಮೆ) ಈಗ 3,100ರ ಆಸುಪಾಸಿಗೆ ತಗ್ಗಿದೆ.

ಕೊರೊನಾ ಸೋಂಕಿನ ವಿರುದ್ಧದ ಸಮರದಲ್ಲಿ ನಿರ್ಣಾಯಕ ಘಟ್ಟವನ್ನು ತಲುಪಿದ್ದು, ಮುಂದಿನ ಎರಡು ತಿಂಗಳು ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿದಲ್ಲಿ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ತಿಂಗಳ ಆರಂಭದಲ್ಲಿ ಸೋಂಕು ದೃಢ ಪ್ರಮಾಣವನ್ನು ಆಧರಿಸಿ ಕೆಲ ಖಾಸಗಿ ಸಂಸ್ಥೆಗಳು ನವೆಂಬರ್ ಎರಡನೇ ವಾರದ ವೇಳೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ ದಾಟಲಿದೆ ಎಂದು ಅಂದಾಜಿಸಿದ್ದವು. ಆದರೆ, 15 ದಿನಗಳಿಂದ ಕೋವಿಡ್‌ ಪೀಡಿತರ ಸಂಖ್ಯೆ ಗಣನೀಯ ಇಳಿಕೆ ಕಂಡಿದೆ. ಇದೇ ವೇಳೆ ಕೋವಿಡ್‌ನಿಂದ ಗುಣಮುಖರ ಸಂಖ್ಯೆಯೂ ಏರಿಕೆಯಾಗುತ್ತಿದೆ.

ಈ ತಿಂಗಳು ಪ್ರತಿನಿತ್ಯ ಸರಾಸರಿ ಒಂದು ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆರ್‌ಟಿ–ಪಿಸಿಆರ್ ಪರೀಕ್ಷೆಗಳ ಸಂಖ್ಯೆಯನ್ನೂ ಹೆಚ್ಚಳ ಮಾಡಲಾಗಿದ್ದು, ಪ್ರತಿ ನಿತ್ಯ ಸರಾಸರಿ 80 ಸಾವಿರಕ್ಕೂ ಅಧಿಕ ಈ ಮಾದರಿಯ ಪರೀಕ್ಷೆಗಳು ನಡೆಯುತ್ತಿವೆ. ಕಳೆದ 10 ದಿನಗಳ ಅವಧಿಯಲ್ಲಿ 10.25 ಲಕ್ಷ ಮಂದಿಗೆ ಕೋವಿಡ್ ಪರೀಕ್ಷೆಗ
ಳನ್ನು ನಡೆಸಲಾಗಿದೆ. ಇವರಲ್ಲಿ 58,969 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಈ ಅವಧಿಯಲ್ಲಿ ಸೋಂಕಿತರಲ್ಲಿ 90,835 ಮಂದಿಗೆ ಕಾಯಿಲೆ ವಾಸಿಯಾಗಿದೆ. ಪರಿಣಾಮ 7.10 ಲಕ್ಷಕ್ಕೂ ಅಧಿಕ ಮಂದಿ ಚೇತರಿಸಿಕೊಂಡಿದ್ದಾರೆ. ಪ್ರತಿ 100 ಜನರಲ್ಲಿ 4 ರಿಂದ 5 ಜನರಲ್ಲಿ ಮಾತ್ರ ಕೊರೊನಾ ಪಾಸಿಟಿವ್ ವರದಿ ಆಗುತ್ತಿದೆ. 

ಸೋಂಕು ದುರ್ಬಲ: ‘ರಾಜ್ಯದಲ್ಲಿ ಕೋವಿಡ್ ಇಳಿಕೆಯತ್ತ ಮುಖ ಮಾಡಿದೆ. ಈಗ ಸೋಂಕು ದುರ್ಬಲವಾಗುತ್ತಿದೆ. ಹಾಗಾಗಿ ಮುಂದಿನ ಕೆಲ ದಿನಗಳು ನಿರ್ಣಾಯಕ. ಎರಡರಿಂದ ಮೂರು ತಿಂಗಳ ಬಳಿಕ ಪರಿಸ್ಥಿತಿ ತಿಳಿಗೊಳ್ಳುವ ವಿಶ್ವಾಸವಿದೆ. ಅಷ್ಟರಲ್ಲಿ ಇದಕ್ಕೆ ಕೇಂದ್ರ ಸರ್ಕಾರವು ಔಷಧವನ್ನು ವಿತರಿಸುವ ಸಾಧ್ಯತೆಯಿದೆ. ಹಾಗಾಗಿ ಮುನ್ನೆಚ್ಚರಿಕೆ ವಹಿಸಬೇಕಿದೆ’ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಎಚ್ಚರಿಕೆ ನೀಡಿದ್ದಾರೆ. 

‘ಪ್ರಕರಣಗಳ ಸಂಖ್ಯೆ ಇಳಿಕೆಯಾಗುವ ಹೊತ್ತಿಗೆ ನಾವು ಮೈಮರೆಯಬಾರದು. ಮುಂದಿನ ಎರಡು ತಿಂಗಳ ಅವಧಿಯಲ್ಲಿ ವಿವಿಧ ಹಬ್ಬಗಳು ಬರುವ ಕಾರಣ ಕೋವಿಡ್ ಹರಡುವಿಕೆಯನ್ನು ತಡೆಯಲು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಕೇರಳ
ದಲ್ಲಿ ಓಣಂ ಸಂಭ್ರಮಾಚರಣೆಯ ಬಳಿಕ ಕೋವಿಡ್ ಮತ್ತೆ ಏರುಗತಿ ಪಡೆದಿದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ಕೋವಿಡ್ ಕಾರ್ಯಪಡೆಯ ತಜ್ಞರೊಬ್ಬರು ತಿಳಿಸಿದರು.

***

ಸೋಂಕು ದೃಢ ಪ್ರಮಾಣ ಶೇ 5ಕ್ಕಿಂತ ಕಡಿಮೆ ಆಗಿದೆ. ಈ ಸಂದರ್ಭದಲ್ಲಿ ಮೈಮರೆಯಬಾರದು. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಸಂಚಾರ ಕಡಿಮೆ ಮಾಡಬೇಕು
-ಡಾ.ಸಿ.ಎನ್. ಮಂಜುನಾಥ್, ಕೋವಿಡ್ ಪರೀಕ್ಷೆಗಳ ನೋಡಲ್ ಅಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು