ಬುಧವಾರ, ಮೇ 25, 2022
31 °C

ಕೋವಿಡ್‌: ತಜ್ಞರ ಸಲಹೆಯಂತೇ ಕ್ರಮ- ಕಂದಾಯ ಸಚಿವ ಆರ್‌.ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಯಾರೋ ಹೇಳಿದರೆಂದು ಅಪಾಯ ಮೈಮೇಲೆ ಎಳೆದುಕೊಳ್ಳಲು ಆಗುವುದಿಲ್ಲ. ತಜ್ಞರು, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೇಂದ್ರ ಸರ್ಕಾರ ನೀಡುವ ಸಲಹೆಯ ಪ್ರಕಾರವೇ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ವಾರಾಂತ್ಯ ಕರ್ಫ್ಯೂ, ರಾತ್ರಿ ಕರ್ಫ್ಯೂ ಹೇರಬಾರದು ಎಂದು ಹೊಟೇಲ್‌, ರೆಸ್ಟೋರೆಂಟ್‌ ಮಾಲೀಕರು ಒತ್ತಾಯಿಸುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

‘ಹೊಟೇಲ್‌ನವರು ಹೇಳಿದರು ಎಂದು ನಾವು 6.50 ಕೋಟಿ ಜನರ ಆರೋಗ್ಯವನ್ನು ಅಪಾಯದ ಅಂಚಿಗೆ ತಳ್ಳಲು ಆಗುವುದಿಲ್ಲ. ಆಡಳಿತದಲ್ಲಿ ಇರುವವರು ಜನರ ಪ್ರಾಣ ರಕ್ಷಣೆ ಮಾಡುವುದು ಪ್ರಾಥಮಿಕ ಕರ್ತವ್ಯ. ದಿನಕ್ಕೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿರುವುದನ್ನು ಗಮನಿಸಿದ್ದೇನೆ. ಹೆಚ್ಚು ಕಮ್ಮಿ ಆದರೆ ಇವರು ಬರ್ತಾರಾ’ ಎಂದು ಪ್ರಶ್ನಿಸಿದರು.

ಸರ್ಕಾರ ಜನರ ಪರವಾಗಿಯೇ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಶೋಕ ಹೇಳಿದರು.

ಯಾವುದೇ ಗೊಂದಲವಿಲ್ಲ: ‘ಕಂದಾಯ ಸಚಿವರು ಸಭೆಯ ನಂತರ ಸುದ್ದಿಗೋಷ್ಠಿ ಮಾಡಿದ್ದು ನನಗೆ ಬಳಿಕ ಗೊತ್ತಾಯಿತು. ಅದರಲ್ಲಿ ತಪ್ಪೇನೂ ಇಲ್ಲ. ಅವರು ಅವರ ಮನೆಯಿಂದ ವರ್ಚುವಲ್‌ ಆಗಿ ಸಭೆಯಲ್ಲಿ ಭಾಗವಹಿಸಿದ್ದರು. ಅವರು ಹಿರಿಯ ಸಚಿವರು. ನಿಮಗೆ ಮಾಹಿತಿ ನೀಡಿದ್ದಾರೆ. ಇಷ್ಟು ದಿನ ನಾನು ಹೇಳುತ್ತಿದ್ದೆ. ಇವತ್ತು ಅವರು ಮಾತನಾಡಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ‘ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

‘ಅಶೋಕ ಅವರು ಸುದ್ದಿಗಾರರ ಜತೆ ಮಾತನಾಡುವಾಗ ಕೋವಿಡ್‌ ಪರೀಕ್ಷೆ ಸಂಖ್ಯೆಯನ್ನು ಕಡಿಮೆ ಮಾಡಿ ಎಂದು ತಜ್ಞರು ಹೇಳಿದ್ದಾರೆ ಎಂದರು. ನೀವು ನೋಡಿದರೆ ಐಸಿಎಂಆರ್‌ ಮಾರ್ಗಸೂಚಿಯಂತೆ  ಪರೀಕ್ಷೆ ಮಾಡುತ್ತೇವೆ ಎನ್ನುತ್ತೀರಲ್ಲ’ ಎಂಬ ಪ್ರಶ್ನೆಗೆ ‘ಎರಡೂ ಒಂದೇ, ಅವರೂ ಅದನ್ನೇ ಹೇಳಿದ್ದಾರೆ’
ಎಂದರು.

‘ನೀವು ಕರೆದಿರಿ ಎಂದು ಮಾಹಿತಿ ನೀಡಲು ಹೊರಗೆ ಬಂದೆ, ಇಲ್ಲದಿರುವುದನ್ನು ಸೃಷ್ಟಿಸಲು ಹೋಗಬೇಡಿ’ ಎಂದು ಸುಧಾಕರ್‌ ಹೇಳಿದರು.

ಕೋವಿಡ್: ದೃಢ ಪ್ರಮಾಣ ಇಳಿಕೆ

ರಾಜ್ಯದಲ್ಲಿ ಸೋಮವಾರ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷದ ಗಡಿ ದಾಟಿದ್ದರೂ ಹೊಸದಾಗಿ ಪತ್ತೆಯಾಗುವ ಸೋಂಕು ದೃಢ ಪ್ರಮಾಣ ಶೇ 12.45ಕ್ಕೆ ಇಳಿಕೆಯಾಗಿದೆ.

ಭಾನುವಾರ 34,047 ಪ್ರಕರಣಗಳು ದೃಢಪಟ್ಟಿದ್ದವು. ಆದರೆ, ಸೋಮವಾರ ಬೆಂಗಳೂರಿನಲ್ಲಿ 15,947 ಮಂದಿ ಸೇರಿದಂತೆ ರಾಜ್ಯದಲ್ಲಿ 27,156 ಮಂದಿ ಕೊರೊನಾ ಸೋಂಕಿತರಾಗಿರುವುದು ದೃಢಪಟ್ಟಿದೆ. ಹೊಸ ಪ್ರಕರಣಗಳ ಸಂಖ್ಯೆ 7 ಸಾವಿರದಷ್ಟು ಇಳಿಕೆ ಕಂಡಿದೆ.

ಮೂರು ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ನಾಲ್ಕು ಅಂಕಿಗೆ ಮತ್ತು 19 ಜಿಲ್ಲೆಗಳಲ್ಲಿ ಮೂರಂಕಿಗೆ ತಲುಪಿದೆ. ಮೈಸೂರಿನಲ್ಲಿ 1770, ತುಮಕೂರಿನಲ್ಲಿ 1147 ಮತ್ತು ಹಾಸನದಲ್ಲಿ 1050 ಪ್ರಕರಣಗಳು ವರದಿಯಾಗಿವೆ. ಯಾದಗಿರಿಯಲ್ಲಿ 18 ಪ್ರಕರಣಗಳು ವರದಿಯಾಗಿವೆ.

ಕೋವಿಡ್ ಪೀಡಿತರಲ್ಲಿ ಬೆಂಗಳೂರಿನಲ್ಲಿ ಐದು ಮಂದಿ, ದಕ್ಷಿಣ ಕನ್ನಡದಲ್ಲಿ ಮೂವರು ಮತ್ತು ಚಿಕ್ಕಬಳ್ಳಾಪುರ, ಚಿತ್ರದುರ್ಗ, ಧಾರವಾಡ, ಕಲಬುರಗಿ, ರಾಮನಗರ, ತುಮಕೂರಿನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಮರಣ ಪ್ರಮಾಣ ದರವು ಶೇ 0.05 ರಷ್ಟು ವರದಿಯಾಗಿದೆ. ಈವರೆಗೆ ಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 38,445ಕ್ಕೆ ಏರಿಕೆಯಾಗಿದೆ.

287 ಓಮೈಕ್ರಾನ್‌ ಪ್ರಕರಣ: (ಬೆಂಗಳೂರು) ನಗರದಲ್ಲಿ ಸೋಮವಾರ 287 ಓಮೈಕ್ರಾನ್‌ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟು ಓಮೈಕ್ರಾನ್‌ ಪ್ರಕರಣಗಳ ಸಂಖ್ಯೆ 766ಕ್ಕೆ ತಲುಪಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು