ಮಂಗಳವಾರ, ಮೇ 24, 2022
26 °C
ಎರಡು ಅಲೆಯಲ್ಲಿ ಎಡವಿದರೂ ಸಜ್ಜಾಗದ ಸರ್ಕಾರ l ಐಸಿಯು ಸಹಿತ ಹಾಸಿಗೆಗಳ ಸಂಖ್ಯೆ 7,216 ಮಾತ್ರ

ರಾಜ್ಯದಲ್ಲಿ ಕೋವಿಡ್ ಉಲ್ಬಣಿಸಿದರೆ ಖಾಸಗಿ ಆಸ್ಪತ್ರೆಯೇ ಗತಿ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಮೂರನೇ ಅಲೆ ಎದುರಿಸಲು ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಸಂಖ್ಯೆಯನ್ನು ಹಲವು ಪಟ್ಟು ಹೆಚ್ಚಿಸಿರುವುದಾಗಿ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ, ಕೋವಿಡ್ ಚಿಕಿತ್ಸೆಗೆ ಗೊತ್ತುಪಡಿಸಲಾದ 1.94 ಲಕ್ಷ ಹಾಸಿಗೆಗಳಲ್ಲಿ ಶೇ 73.71 ರಷ್ಟು ಹಾಸಿಗೆಗಳು ಖಾಸಗಿಯವರ ನಿಯಂತ್ರಣದಲ್ಲಿಯೇ ಇವೆ. 

ಸರ್ಕಾರವು ಕೋವಿಡ್ ಚಿಕಿತ್ಸೆಗೆ ಮೀಸಲಿರಿಸಿದ ಹಾಸಿಗೆಗಳಲ್ಲಿ 51,093 ಹಾಸಿಗೆಗಳು ಮಾತ್ರ ಸರ್ಕಾರಿ ವ್ಯವಸ್ಥೆಯಡಿ ಇವೆ. ಇವುಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಹಾಸಿಗೆಗಳೂ ಸೇರಿವೆ. 1.43 ಲಕ್ಷ ಹಾಸಿಗೆಗಳು ಖಾಸಗಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳ ಅಡಿಯಲ್ಲಿ ಗುರುತಿಸಲಾಗಿದೆ.

ಆರೋಗ್ಯ ಕ್ಷೇತ್ರದ ತಜ್ಞರು ಅಂದಾಜಿಸಿರುವ ಪ್ರಕಾರ ಫೆಬ್ರುವರಿಯಲ್ಲಿ ಕೋವಿಡ್ ಉತ್ತುಂಗಕ್ಕೇ ಏರಿ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಳವಾಗಬಹುದು. ಹಾಗಾದಲ್ಲಿ, ಗಂಭೀರ ಆರೋಗ್ಯ ಸಮಸ್ಯೆ ಇರುವವರಿಗೆ ಚಿಕಿತ್ಸೆ ನೀಡಲು ಬೇಕಾಗುವ ಐಸಿಯು(ತೀವ್ರ ನಿಗಾ ಘಟಕ) ಹಾಸಿಗೆ 7,216 ಹಾಗೂ ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆ 6,123 ಮಾತ್ರ. ಇದು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿರುವ ಸೌಲಭ್ಯ.

ಕೋವಿಡ್ ಎರಡನೇ ಅಲೆಯ ಬಳಿಕ ಸರ್ಕಾರವು ವೈದ್ಯಕೀಯ ಆಮ್ಲಜನಕ ತಯಾರಿಕಾ ಘಟಕಗಳ ನಿರ್ಮಾಣಕ್ಕೆ ಆದ್ಯತೆ ನೀಡಿತ್ತು. ಪೆಟ್ರೋಲಿಯಂ ಕಂಪನಿಗಳು ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಅಡಿಯಲ್ಲಿ 100 ಎಲ್‌ಪಿಎಂ (ಪ್ರತಿ ನಿಮಿಷಕ್ಕೆ ಸರಬರಾಜು) ಸಾಮರ್ಥ್ಯದ 28 ಆಮ್ಲಜನಕ ತಯಾರಿಕಾ ಘಟಕಗಳನ್ನು ಯಾದಗಿರಿ, ವಿಜಯಪುರ ಸೇರಿದಂತೆ ವಿವಿಧೆಡೆ ನಿರ್ಮಿಸಿಕೊಡುವುದಾಗಿ ಸರ್ಕಾರಕ್ಕೆ ಭರವಸೆ ನೀಡಿದ್ದವು. ಆದರೆ, ಇವು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಪ್ರಾರಂಭ ಮಾಡಿಲ್ಲ. ಅದೇ ರೀತಿ, ರಾಜ್ಯ ಸರ್ಕಾರ ಹೊಸದಾಗಿ ಕೈಗೆತ್ತಿಕೊಂಡ 40 ಘಟಕಗಳ ಅಳವಡಿಕೆಯೂ ಬಹುತೇಕ ಕಡೆ ಪ್ರಗತಿಯಲ್ಲಿದೆ. ಇದರಿಂದಾಗಿ ರಾಜ್ಯದಲ್ಲಿ ಆಸ್ಪತ್ರೆ ದಾಖಲಾತಿ ಹೆಚ್ಚಳವಾದಲ್ಲಿ ಖಾಸಗಿ ವೈದ್ಯಕೀಯ ವ್ಯವಸ್ಥೆಯನ್ನೇ ಸರ್ಕಾರ ನೆಚ್ಚಿಕೊಳ್ಳಬೇಕಾಗಿದೆ.

ಓಮೈಕ್ರಾನ್‌ ತಳಿ ಪ್ರಕರಣಗಳ ಪತ್ತೆಯಿಂದಾಗಿ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ವೇಗವಾಗಿ ಹೆಚ್ಚಳವಾಗುತ್ತಿದೆ. ಸೋಂಕಿನ ತೀವ್ರತೆ ಕಡಿಮೆ ಇರುವುದರಿಂದ ಕೋವಿಡ್ ಪೀಡಿತರಲ್ಲಿ ಸದ್ಯ ಶೇ 7 ರಷ್ಟು ಮಂದಿ ಮಾತ್ರ ಆಸ್ಪತ್ರೆ ಚಿಕಿತ್ಸೆಗೆ ಒಳಪಡುತ್ತಿದ್ದಾರೆ. ಇಷ್ಟಾಗಿಯೂ, ರಾಜ್ಯದಲ್ಲಿ ಜನವರಿ ಅಂತ್ಯಕ್ಕೆ ಅಥವಾ ಫೆಬ್ರುವರಿ ಮೊದಲ ವಾರದ ವೇಳೆ 20 ಸಾವಿರದಿಂದ 70 ಸಾವಿರದವರೆಗೆ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆ ಎಂದು ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ (ಐಎಸ್‌ಐ) ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಂಶೋಧಕರು ವಿಶ್ಲೇಷಿಸಿದ್ದಾರೆ.

ಕೋವಿಡ್ ಮೊದಲ ಅಲೆಯಲ್ಲಿ 9.41 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್ ಪೀಡಿತರಾಗಿದ್ದರು. ಸೋಂಕಿನ ತೀವ್ರತೆ ಕಡಿಮೆಯಿದ್ದರೂ 12 ಸಾವಿರಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದರು. ಎರಡನೇ ಅಲೆಯಲ್ಲಿ 20 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರಾಗಿ, 25 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಎರಡನೇ ಅಲೆಯಲ್ಲಿ ದಿಢೀರ್ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಂಡ ಪರಿಣಾಮ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ತಲೆದೋರಿದ್ದವು. ಸೋಂಕಿತರು ಐಸಿಯು ಹಾಸಿಗೆ, ವೈದ್ಯಕೀಯ ಆಮ್ಲಜನಕ ಸಂಪರ್ಕ ಹೊಂದಿರುವ ಹಾಸಿಗೆಗಳಿಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದಾಗಿ ಮರಣ ಪ್ರಕರಣಗಳ ಸಂಖ್ಯೆಯೂ ಏರುಗತಿ ಪಡೆದುಕೊಂಡಿತ್ತು. ಹೀಗಾಗಿ, ಎರಡೂ ಅಲೆ ಮುಗಿಯುವ ಹೊತ್ತಿಗೆ ರಾಜ್ಯದ 37 ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು.

ಖಾಸಗಿ ಆಸ್ಪತ್ರೆಗೆ ಪಾವತಿ:‌ 2021ರ ಮಾರ್ಚ್‌ ಮೊದಲ ವಾರದಲ್ಲಿ ಶೇ 0.58 ರಷ್ಟಿದ್ದ ಸೋಂಕು ದೃಢ ಪ್ರಮಾಣ,
ಏಪ್ರಿಲ್ ಅಂತ್ಯಕ್ಕೆ ಶೇ 25.44ಕ್ಕೆ ಏರಿಕೆಯಾಗಿತ್ತು. ಹೀಗಾಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ಜತಗೆ ಖಾಸಗಿ ಆಸ್ಪತ್ರೆಗಳಲ್ಲಿನ ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಸರ್ಕಾರವು ಗುರುತಿಸಿತ್ತು. ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಪಾವತಿಸಿತ್ತು.

ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಡಿ ಶಿಫಾರಸು ಮಾಡುವ ರೋಗಿಗೆ ದಿನವೊಂದಕ್ಕೆ ಸಾಮಾನ್ಯ ವಾರ್ಡ್‌ಗೆ ₹ 10 ಸಾವಿರ, ಐಸಿಯು ವಾರ್ಡ್‌ಗೆ ₹ 15 ಸಾವಿರ ಹಾಗೂ ವೆಂಟಿಲೇಟರ್ ಸಹಿತ ಐಸಿಯು ವಾರ್ಡ್‌ಗೆ ₹ 25 ಸಾವಿರ ನಿಗದಿ ಮಾಡಿತ್ತು. ಈಗ ಪುನಃ ಖಾಸಗಿ ವ್ಯವಸ್ಥೆಯಲ್ಲಿ ಶೇ 75 ರಷ್ಟು ಹಾಸಿಗೆಗಳನ್ನು ಗುರುತಿಸಿ, ಶಿಫಾರಸು ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿದೆ.

ಕೋವಿಡ್ ಚಿಕಿತ್ಸೆಗೆ ಎರಡನೇ ಅಲೆಯಲ್ಲಿ 63,761 ಹಾಸಿಗೆಗಳನ್ನು ಮೀಸಲಿರಿಸಲಾಗಿತ್ತು. ಆ ಸಂಖ್ಯೆ ಈಗ ಎರಡು ಪಟ್ಟು ಹೆಚ್ಚಾಗಿದೆ. ಆದರೆ, ಬಹುತೇಕ ಹಾಸಿಗೆಗಳು ಖಾಸಗಿ ಆಸ್ಪತ್ರೆಗಳಲ್ಲಿಯೇ ಇವೆ. ಐಸಿಯು ಹಾಸಿಗೆಗಳ ಸಂಖ್ಯೆ 3,321ರಿಂದ 7,216ಕ್ಕೆ, ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳ ಸಂಖ್ಯೆಯನ್ನು 3,014ರಿಂದ 6,123ಕ್ಕೆ ಹಾಗೂ ಎಚ್‌ಡಿಯು ಹಾಸಿಗೆಗಳನ್ನು 26,817ರಿಂದ 55,256ಕ್ಕೆ ಹೆಚ್ಚಳ ಮಾಡಲಾಗಿದೆ. 

‘ಕೋವಿಡ್ ಎರಡನೇ ಅಲೆಯಲ್ಲಿ ವೈದ್ಯಕೀಯ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯದಿಂದ ಸೋಂಕಿತರು ಸಮಸ್ಯೆ ಎದುರಿಸಬೇಕಾಯಿತು. ಆಗ ಪರಿಸ್ಥಿತಿ ಕೈಮೀರಿ ಹೋಗಿತ್ತು. ಆದರೆ, ಈಗ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದರೂ ಶೇ 90ಕ್ಕೂ ಅಧಿಕ ಮಂದಿ ಮನೆ ಆರೈಕೆಗೆ ಒಳಗಾಗುತ್ತಿದ್ದಾರೆ. ಸೋಂಕಿನ ತೀವ್ರತೆ ಕಡಿಮೆಯಿದೆ. ಹೀಗಾಗಿ, ಈ ಬಾರಿ ಹಾಸಿಗೆ ಸಮಸ್ಯೆ ತಲೆದೋರದು’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು
ತಿಳಿಸಿದರು. 

ತಾಲ್ಲೂಕು ಆಸ್ಪತ್ರೆ: ಸಜ್ಜಾಗದ ಆಮ್ಲಜನಕ ಘಟಕ

ಕೋವಿಡ್ ಎರಡನೇ ಅಲೆಯಲ್ಲಿ ಶೇ 17 ರಷ್ಟು ಕೋವಿಡ್ ಪೀಡಿತರಿಗೆ ವೈದ್ಯಕೀಯ ಆಮ್ಲಜನಕ ಸಂಪರ್ಕ ಹೊಂದಿದ್ದ ಹಾಸಿಗೆಗಳು ಬೇಕಾಗಿದ್ದವು. ಶೇ 3 ರಷ್ಟು ಮಂದಿ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದರು. ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯಿಂದ 23 ಮಂದಿ ಕೋವಿಡ್ ಪೀಡಿತರು ಮೃತಪಟ್ಟಿದ್ದರು.

ಪಿ.ಎಂ ಕೇರ್ಸ್ ಅನುದಾನದಡಿ ತುಮಕೂರಿನ ಪಾವಗಡ, ಶಿವಮೊಗ್ಗದ ಶಿಕಾರಿಪುರ ಸೇರಿದಂತೆ 6 ಕಡೆ ಹೊಸದಾಗಿ ತಲಾ 100 ಎಲ್‌ಪಿಎಂ ಸಾಮರ್ಥ್ಯದ  ಪ್ರೆಷರ್ ಸ್ವಿಂಗ್ ಅಡ್ಸಾರ್ಪ್ಶನ್ (ಪಿಎಸ್‌ಎ) ಆಮ್ಲಜನಕ ತಯಾರಿಕಾ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯ ಸರ್ಕಾರವು ವಿವಿಧ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 500 ಹಾಗೂ 390 ಲೀಟರ್ ಸಾಮರ್ಥ್ಯದ ಘಟಕಗಳನ್ನು ನಿರ್ಮಾಣ ಮಾಡಿದೆ. ಸದ್ಯ 222 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಚಿಕ್ಕಮಗಳೂರಿನ ಕೊಪ್ಪ, ವಿಜಯಪುರದ ಇಂಡಿ ಸೇರಿದಂತೆ 40ಕ್ಕೂ ಅಧಿಕ ತಾಲ್ಲೂಕು ಆಸ್ಪತ್ರೆಗಳಲ್ಲಿ ಘಟಕಗಳು ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು