ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

23ರಿಂದ ಪ್ರೌಢ, ಪಿಯು ತರಗತಿ ಪ್ರಾರಂಭ: ಬಸವರಾಜ ಬೊಮ್ಮಾಯಿ

ಭೌತಿಕ ತರಗತಿ ನಡೆಸಲು ಒಪ್ಪಿಗೆ l 1ರಿಂದ 8ನೇ ತರಗತಿ ಮಕ್ಕಳಿಗೆ ಸದ್ಯ ಶಾಲೆ ಇಲ್ಲ
Last Updated 6 ಆಗಸ್ಟ್ 2021, 22:16 IST
ಅಕ್ಷರ ಗಾತ್ರ

ಬೆಂಗಳೂರು: ಒಂಬತ್ತನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಇದೇ 23ರಿಂದ ಭೌತಿಕ ತರಗತಿಗಳು ಆರಂಭವಾಗಲಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶುಕ್ರವಾರ ನಡೆದ ಉನ್ನತಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಮಾತನಾಡಿದ ಬೊಮ್ಮಾಯಿ, ‘ಶಾಲಾ ತರಗತಿಗಳ ಆರಂಭ ಕುರಿತು ತಜ್ಞರು ಮತ್ತು ಅಧಿಕಾರಿಗಳ ಜತೆ ವಿಸ್ತೃತವಾಗಿ ಚರ್ಚೆ ನಡೆಸಲಾಗಿದೆ. ಒಂಬತ್ತನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಆಗಸ್ಟ್‌ 23ರಿಂದ ತರಗತಿಗಳನ್ನು ಆರಂಭಿಸಲಾಗುವುದು’ ಎಂದರು.

‘ತರಗತಿಯಲ್ಲಿರುವ ವಿದ್ಯಾರ್ಥಿಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗುವುದು. ಪ್ರತಿ ಗುಂಪಿಗೂ ದಿನ ಬಿಟ್ಟು ದಿನ ತರಗತಿಗಳನ್ನು ನಡೆಸಲಾಗುವುದು. ಪ್ರತಿ ಗುಂಪಿಗೆ ತಲಾ ಮೂರು ದಿನಗಳ ಕಾಲ ತರಗತಿಗಳನ್ನು ನಡೆಸಲು ನಿರ್ಧರಿಸಲಾಗಿದೆ. ಶಾಲಾ, ಕಾಲೇಜುಗಳನ್ನು ಆರಂಭಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಗುವುದು’ ಎಂದು ತಿಳಿಸಿದರು.

‘ವಿವಿಧ ರಾಜ್ಯಗಳಲ್ಲಿ ಶಾಲಾ, ಕಾಲೇಜುಗಳಲ್ಲಿ ಹೇಗೆ ತರಗತಿ ನಡೆಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಸಭೆಯಲ್ಲಿ ಚರ್ಚಿಸಲಾಗಿದೆ. ಶಿಕ್ಷಣ ತಜ್ಞರು ಮತ್ತು ಆರೋಗ್ಯ ತಜ್ಞರ ಸಲಹೆ ಪಡೆದು ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದರು.

1ರಿಂದ 8ಕ್ಕೆ ಸದ್ಯಕ್ಕಿಲ್ಲ: ‘ಒಂದರಿಂದ ಎಂಟನೇ ತರಗತಿವರೆಗಿನ ವಿದ್ಯಾರ್ಥಿ ಗಳಿಗೆ ತರಗತಿ ಆರಂಭಿಸುವ ಕುರಿತು ಸದ್ಯ ಯಾವುದೇ ತೀರ್ಮಾನ ಕೈಗೊಂಡಿಲ್ಲ. ತಿಂಗಳ ಅಂತ್ಯದಲ್ಲಿ ಮತ್ತೊಮ್ಮೆ ಸಭೆ ನಡೆಸಲಾಗುವುದು’ ಎಂದು ಮುಖ್ಯಮಂತ್ರಿ ಹೇಳಿದರು.

‘ಕೋವಿಡ್‌ ಪ್ರಕರಣಗಳ ದೃಢ ಪ್ರಮಾಣ ದರ,ಕೋವಿಡ್‌ 3ನೇ ಅಲೆಯ ತೀವ್ರತೆ, ಸೋಂಕಿನ ಪ್ರಸರಣದ ವೇಗ ಆಧರಿಸಿ ಚರ್ಚೆ ನಡೆಸಿ 1ರಿಂದ 8ನೇ ತರಗತಿವರೆಗಿನ ತರಗತಿ ಆರಂಭದ ಕುರಿತು ತೀರ್ಮಾನಕ್ಕೆ ಬರಲಾಗುವುದು’ ಎಂದರು.

ಶೀಘ್ರದಲ್ಲಿ ಕಾರ್ಯಪಡೆ ನೇಮಕ: ‘ಕೋವಿಡ್‌ ನಿಯಂತ್ರಣ ಮೇಲುಸ್ತುವಾರಿಗೆ ಹೊಸ ಕಾರ್ಯಪಡೆ ಶೀಘ್ರದಲ್ಲಿ ರಚಿಸಲಾಗುವುದು. ಈ ಕುರಿತು ಆದೇಶ ಹೊರಡಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಚಿವರಾದ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಡಾ.ಕೆ. ಸುಧಾಕರ್‌, ಕೋವಿಡ್‌ ನಿಯಂತ್ರಣ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್‌, ಸದಸ್ಯರಾದ ಡಾ.ಸಿ.ಎನ್. ಮಂಜುನಾಥ್, ಡಾ. ರವಿ, ಮೂರನೇ ಅಲೆ ನಿಯಂತ್ರಣ ಸಂಬಂಧ ಸಲಹೆ ನೀಡಲು ನೇಮಿಸಿರುವ ತಜ್ಞರ ಸಮಿತಿ ಮುಖ್ಯಸ್ಥ ಡಾ. ದೇವಿ ಪ್ರಸಾದ್‌ ಶೆಟ್ಟಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಗಡಿ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ

ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಹೊಂದಿಕೊಂಡಿರುವ ರಾಜ್ಯದ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಅದರ ಜತೆಗೆ, ರಾಜ್ಯದಾದ್ಯಂತ ಜಾರಿ ಇರುವ ಪ್ರತಿದಿನದ ರಾತ್ರಿ ಕರ್ಫ್ಯೂ ಅವಧಿ ರಾತ್ರಿ 10ಗಂಟೆಯ ಬದಲು 9ಗಂಟೆಯಿಂದಲೇ ಆರಂಭವಾಗಲಿದೆ.

ವಾರಾಂತ್ಯದ ಕರ್ಫ್ಯೂ ಮತ್ತು ರಾತ್ರಿ ಕರ್ಫ್ಯೂ ವಿಸ್ತರಿಸಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಇದೇ 16ರವರೆಗೂ ಆದೇಶ ಜಾರಿಯಲ್ಲಿರಲಿದೆ.

ಮಹಾರಾಷ್ಟ್ರದ ಗಡಿ ಮತ್ತು ಕೇರಳಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೂ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಾರಾಂತ್ಯದ ಕರ್ಫ್ಯೂ– ಏನಿರುತ್ತೆ?: ಸರ್ಕಾರದ ಎಲ್ಲ ಕಚೇರಿಗಳು, ಸ್ವಾಯತ್ತ ಸಂಸ್ಥೆಗಳು, ಅಗತ್ಯ ಸೇವೆಗಳು, ತುರ್ತು ಮತ್ತು ಅಗತ್ಯ ಸೇವೆಗಳಿಗೆ ಪೂರಕವಾದ ಎಲ್ಲ ಉದ್ದಿಮೆಗಳು, ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಉದ್ಯಮದ ಸಂಸ್ಥೆಗಳು ಕಾರ್ಯನಿರ್ವಹಿಸಬಹುದು. ದಿನಸಿ ಪದಾರ್ಥಗಳು, ತರಕಾರಿ, ಮೀನು, ಮಾಂಸ, ಡೇರಿ ಉತ್ಪನ್ನಗಳು, ಹಾಲಿನ ಮಳಿಗೆಗಳು, ಪಶು ಆಹಾರದ ಮಳಿಗೆಗಳನ್ನು ಬೆಳಿಗ್ಗೆ 5ರಿಂದ ಮಧ್ಯಾಹ್ನ 2ರವರೆಗೆ ತೆರೆಯಬಹುದು. ಬೀದಿಬದಿ ವ್ಯಾಪಾರಿಗಳಿಗೂ ಇದೇ ಸಮಯ ಅನ್ವಯ. ಮದ್ಯದಂಗಡಿಗಳಲ್ಲಿ ಬೆಳಿಗ್ಗೆ 5ರಿಂದ ಮಧ್ಯಾಹ್ನ 2ರವರೆಗೆ ಪಾರ್ಸೆಲ್‌ ಸೇವೆ ಮಾತ್ರ. ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ ಸೇವೆ ಮಾತ್ರ. ಅಂತರ ಜಿಲ್ಲಾ ಪ್ರಯಾಣಿಕರು ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ ಸಂಚಾರ ನಡೆಸಬಹುದು. ಮದುವೆಗಳಿಗೆ 100 ಜನರು ಮತ್ತು ಅಂತ್ಯಸಂಸ್ಕಾರದಲ್ಲಿ 20 ಮಂದಿ ಮಾತ್ರ ಭಾಗವಹಿಸಲು ಅವಕಾಶವಿದೆ.

ಸಭೆ, ಸಮಾರಂಭಕ್ಕಿಲ್ಲ ಅವಕಾಶ

ರಾಜ್ಯದಾದ್ಯಂತ ಬೃಹತ್‌ ಪ್ರಮಾಣದ ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು, ಬೃಹತ್‌ ಸಭೆ, ಸಮಾರಂಭಗಳಿಗೆ ನಿಷೇಧ ಮುಂದುವರಿಸಲಾಗಿದೆ.

ದೇವಸ್ಥಾನ, ಮಸೀದಿ, ಚರ್ಚ್‌ ಸೇರಿದಂತೆ ಧಾರ್ಮಿಕ ಕೇಂದ್ರಗಳಲ್ಲಿ ಕೋವಿಡ್‌ ನಿಯಮ ಪಾಲಿಸಿಕೊಂಡು ದರ್ಶನ, ಪ್ರಾರ್ಥನೆ, ಸೇವೆ ಸಲ್ಲಿಸಲು ಅವಕಾಶ ಇರಲಿದೆ. ಆದರೆ, ಜಾತ್ರೆ, ದೇವಸ್ಥಾನಕ್ಕೆ ಸಂಬಂಧಿಸಿದ ಹಬ್ಬಗಳು, ಮೆರವಣಿಗೆ ಮತ್ತು ಸಮಾವೇಶಗಳಿಗೆ ನಿಷೇಧ ಮುಂದುವರಿಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕರ್ಫ್ಯೂ ಎಲ್ಲೆಲ್ಲಿ

ಬೆಳಗಾವಿ, ಬೀದರ್‌, ವಿಜಯಪುರ, ಕಲಬುರ್ಗಿ, ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT