ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಮರೀಚಿಕೆ

ನೆಟ್‌ವರ್ಕ್‌ಗಾಗಿ ಮರ ಏರುವ ಸಾಹಸ
Last Updated 7 ಆಗಸ್ಟ್ 2021, 21:52 IST
ಅಕ್ಷರ ಗಾತ್ರ

ಕಲಬುರ್ಗಿ/ಮೈಸೂರು: ಕಲ್ಯಾಣ ಕರ್ನಾಟಕ, ಮಲೆನಾಡು ಭಾಗದ ಕಾಡಂಚಿನ ಜಿಲ್ಲೆಗಳು ಹಾಗೂ ರಾಜ್ಯದ ಗ್ರಾಮೀಣ ಪ್ರದೇಶದ ಮಕ್ಕಳಿಗೆಆನ್‌ಲೈನ್ ಪಾಠ ಮರೀಚಿಕೆಯಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು, ಗುಂಡ್ಲುಪೇಟೆ ತಾಲ್ಲೂಕುಗಳ ಕಾಡಂಚಿನ ಪ್ರದೇಶಗಳು, ಕೊಡಗು ಜಿಲ್ಲೆಯ ತೆರ್ಮೆಮೊಟ್ಟೆ, ಪಾಲಂಗಾಲ, ಬಾರಿಕಾಡು, ಕೊಟ್ಟೋಳಿ, ಹಾಸನ ಜಿಲ್ಲೆಯ ಮಲೆನಾಡು‌ ಪ್ರದೇಶದ ಸಕಲೇಶಪುರ, ಆಲೂರು ಭಾಗದಲ್ಲಿ ಕಾಲೇಜು ವಿದ್ಯಾರ್ಥಿಗಳು ಆನ್‌ಲೈನ್‌ ಪಾಠ ಕೇಳಲು ಬೆಟ್ಟಗುಡ್ಡಗಳನ್ನು ಎಡತಾಕಬೇಕು. ಮರ ಹತ್ತಬೇಕು!

ಹೆತ್ತೂರು, ಶುಕ್ರವಾರಸಂತೆ, ಯಸಳೂರು ಹೋಬಳಿಗಳಲ್ಲಿ ಕಾಡಾನೆ ಹಾವಳಿಯ ಭಯ. ಪದವಿಯ ಪ್ರಾಯೋಗಿಕ ತರಗತಿಗಳಿಗೆ ವಿದ್ಯಾರ್ಥಿಗಳೇ ಕಡಿಮೆ. ಪ್ರೌಢ ಶಾಲೆ, ಪಿಯು ಹಂತದ ವಿದ್ಯಾರ್ಥಿಗಳ ಪೈಕಿ ಹಲವರಲ್ಲಿ ಸ್ಮಾರ್ಟ್‌ಫೋನ್‌ಗಳಿಲ್ಲ. ಮನೆಯ ಹಿರಿಯರ ಫೋನ್‌ನಲ್ಲಿರುವ ಇಂಟರ್‌ನೆಟ್‌ ಡೇಟಾ ಸಾಕಾಗುವುದಿಲ್ಲ.

ಆನ್‌ಲೈನ್ ತರಗತಿಗಳು ಶುರುವಾಗುವ ಹೊತ್ತಿಗೇ ಕುಟುಂಬದ ಮುಖ್ಯಸ್ಥರು ಫೋನ್‌ ಜೊತೆಗೆ ಹೊರಗೆ ಹೋಗುವುದೇ ಹೆಚ್ಚು. ಕೆಲವರು ಮಕ್ಕಳಿಗೆಂದೇ ಫೋನ್‌ ಕೊಡಿಸಿದ್ದರೂ ಹಳ್ಳಿಗಳಲ್ಲಿ 3ಜಿ, 4ಜಿ ವೇಗದ ಇಂಟರ್‌ನೆಟ್‌ ಸೌಲಭ್ಯವಿಲ್ಲ. ಝೂಮ್, ಗೂಗಲ್ ಮೀಟ್, ವಾಯ್ಸ್‌, ಯೂಟ್ಯೂಬ್ ಮೊಬೈಲ್ ಅಪ್ಲಿಕೇಶನ್‌ಗಳು ತೆರೆದುಕೊಳ್ಳುವುದಿಲ್ಲ.

ತೆಲಂಗಾಣ ಗಡಿಯಲ್ಲಿರುವ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಕೊಳ್ಳೂರಿನ ಪೋಷಕ ಬಾಬುರಾವ್ ಶೆಂಬೆಳ್ಳಿ ಪ್ರಕಾರ, ‘ಕರ್ನಾಟಕದ ನೆಟ್‌ವರ್ಕ್ ಸರಿಯಾಗಿ ಸಿಗುವುದಿಲ್ಲ. ಆಗಾಗ ತೆಲಂಗಾಣದ ನೆಟ್‌ವರ್ಕ್ ಬಂದರೂ ಉಪಯೋಗವಾಗುವುದಿಲ್ಲ. ಮಕ್ಕಳು ಮಾಳಿಗೆ ಏರಲೇಬೇಕು’.

‘ಆನ್‌ಲೈನ್‌ ತರಗತಿಗಳಿಗೆ ಅರ್ಧ ದಷ್ಟು ವಿದ್ಯಾರ್ಥಿಗಳು ಹಾಜರಾಗುತ್ತಿ ದ್ದಾರೆ. ಕೆಲವರು ಪರೀಕ್ಷೆಗಷ್ಟೇ ಬರುತ್ತಿ ದ್ದಾರೆ. ಆನ್‌ಲೈನ್‌ ಪಾಠ ಶುರುವಾದ ಬಳಿಕ ಒತ್ತಡ ಹೆಚ್ಚಾಗಿದೆ’ ಎಂದು ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಜೆ.ಎಲ್‌.ವೀರಣ್ಣ ಹೇಳಿದರು.

‘ನಗರದ ವಿದ್ಯಾರ್ಥಿಗಳಲ್ಲಿ ಸ್ಮಾರ್ಟ್‌ಫೋನ್‌ಗಳಿವೆ. ಹಳ್ಳಿಗಳ ಕಡುಬಡವರು ಮಕ್ಕಳಿಗೆ ಸ್ಮಾರ್ಟ್‌ ಫೋನ್ ಕೊಡಿಸು ವುದನ್ನು ಕನಸಿನಲ್ಲೂ ಯೋಚಿಸಲಾರರು’ ಎನ್ನುತ್ತಾರೆ ಗುಲಬರ್ಗಾ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಪ್ರೊ.ಎಚ್‌.ಟಿ. ಪೋತೆ.

‘ಪಿ.ಯು.ಗೆ ಭೌತಿಕ ತರಗತಿಗಳು ಆರಂಭವಾಗಿಲ್ಲ. ವಿಜ್ಞಾನ ವಿಭಾಗದ ವರಿಗೆ ಪ್ರಾಯೋಗಿಕ ತರಗತಿ ನಡೆಸಲು ಆಗುತ್ತಿಲ್ಲ. ಕಾಲೇಜಿನಲ್ಲಿ ತರಗತಿ ನಡೆಸಿದಷ್ಟು ತೃಪ್ತಿ ಆನ್‌ಲೈನ್‌ ಪಾಠದಲ್ಲಿ ಸಿಗುತ್ತಿಲ್ಲ’ ಎನ್ನುತ್ತಾರೆ ಕಲಬುರ್ಗಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಪ್ರಾಚಾರ್ಯ ದೇವನಗೌಡ ಪಾಟೀಲ.

ನೋ ನೆಟ್‌ವರ್ಕ್‌, ನೋ ವೋಟಿಂಗ್!

ಶಿವಮೊಗ್ಗ: ಇಲ್ಲಿನ ಕುದರೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಗ್ರಾಮಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗದೆ, ಕರೂರು ಹೋಬಳಿಯ ಗ್ರಾಮಸ್ಥರು ‘ನೋ ನೆಟ್‌ವರ್ಕ್, ನೋ ವೋಟಿಂಗ್’ ಎನ್ನುತ್ತಾ ಪಂಚಾಯಿತಿ ಚುನಾವಣೆ ಬಹಿಷ್ಕರಿಸಲು ಮುಂದಾಗಿದ್ದಾರೆ.

ತೀರ್ಥಹಳ್ಳಿ, ಹೊಸನಗರ ತಾಲ್ಲೂಕಿನಲ್ಲಿ ಹಾಜರಾತಿ ದಾಖಲಿಸುವುದೂ ಕಷ್ಟವಾಗಿದೆ. ಸಿಗ್ನಲ್ ಸಿಗುವ ಕಡೆ ಟೆಂಟ್ ನಿರ್ಮಿಸಿ ಪಾಠ ಕೇಳಬೇಕು. ಅಲ್ಲಿ ಸಿಡಿಲು, ಮರ ಬೀಳುವ ಅಪಾಯವೂ ಉಂಟು.

ಶರಾವತಿ ನದಿಯ ಹಿನ್ನೀರಿ ನಿಂದ ಆವೃತವಾಗಿರುವ ಸಾಗರ ತಾಲ್ಲೂಕಿನ ಗ್ರಾಮಗಳಲ್ಲಿ ನೆಟ್‌ವರ್ಕ್‌ಗಾಗಿ ನಾಲ್ಕೈದು ಕಿ.ಮೀ. ಹೋಗಬೇಕು. ಬಾಲಕಿಯ ರೊಂದಿಗೆ ಪೋಷಕರೂ ಗುಡ್ಡಕ್ಕೆ ಹೋಗಬೇಕಾಗಿದ್ದು, ಕೃಷಿಗೂ ಹಿನ್ನಡೆಯಾಗಿದೆ.

***

ಅಣ್ಣನ ಫೋನ್‌ನಲ್ಲಿ ಪಾಠ ಪೂರ್ತಿ ಕೇಳುವುದರೊಳಗೆ 1 ಜಿ ಬಿ ಡೇಟಾ ಮುಗಿದಿರುತ್ತದೆ. ಸ್ಮಾರ್ಟ್‌ ಫೋನ್‌ ಇಲ್ಲದವರು ಪಾಠವನ್ನೇ ಕೇಳಿಲ್ಲ.

–ಸುಮಾ ದೇವೇಂದ್ರಪ್ಪ,ದ್ವಿತೀಯ ಪಿಯು ವಿದ್ಯಾರ್ಥಿನಿ, ಕಲಬುರ್ಗಿ ತಾಲ್ಲೂಕಿನ ಜಂಬಗಾ (ಬಿ) ಗ್ರಾಮ

***

(ಪೂರಕ ಮಾಹಿತಿ: ಚಂದ್ರಕಾಂತ ಮಸಾನಿ, ನಾಗರಾಜ ಚಿನಗುಂಡಿ, ಮನೋಜಕುಮಾರ್ ಗುದ್ದಿ, ಕೆ.ಎ.ಆದಿತ್ಯ, ಕೆ.ಎಸ್‌.ಸುನೀಲ್, ಎಂ.ಎನ್‌.ಯೋಗೇಶ್‌, ವಿ.ಸೂರ್ಯನಾರಾಯಣ, ಎನ್.ನವೀನ್‌ಕುಮಾರ್‌. ಚಂದ್ರಹಾಸ ಹಿರೇಮಳಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT