ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಾಲ್ಕನೇ ಅಲೆ ಸಾಧ್ಯತೆ- ಮಾಸ್ಕ್‌ ಕಡ್ಡಾಯ: ಸಿಎಂ ಸಭೆಯಲ್ಲಿ ತೀರ್ಮಾನ

Last Updated 25 ಏಪ್ರಿಲ್ 2022, 10:41 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ನಾಲ್ಕನೇ ಬರುವ ಸಾಧ್ಯತೆ ಇರುವುದರಿಂದ ಕಡ್ಡಾಯವಾಗಿ ಮಾಸ್ಕ್‌ ಧರಿಸುವುದೂ ಸೇರಿ ಕೆಲವು ಕಟ್ಟುನಟ್ಟಿನ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ತಾಂತ್ರಿಕ ಸಲಹಾ ಸಮಿತಿ ನಿರ್ಧರಿಸಿದೆ.

ಸಭೆಯ ಬಳಿಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ರಾಜ್ಯದಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಬೇಕು. ವಿಶೇಷವಾಗಿ ಜನಜಂಗುಳಿ ಇರುವ ಕಡೆಗಳಲ್ಲಿ ಮತ್ತು ಒಳಾಂಗಣದಲ್ಲಿ ಮಾಸ್ಕ್‌ ಧರಿಸಬೇಕು. ಇದಕ್ಕಾಗಿ ಮಾರ್ಗಸೂಚಿ ಹೊರಡಿಸಲಾಗುವುದು. ಮಾಸ್ಕ್‌ ಧರಿಸದೇ ಇದ್ದರೆ ದಂಡ ವಿಧಿಸುವ ಬಗ್ಗೆ ತಕ್ಷಣಕ್ಕೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸುಧಾಕರ್‌ ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಕೋವಿಡ ದೃಢ ಪ್ರಮಾಣ ಶೇ 1.9 ರಷ್ಟಿದೆ. ಆದ್ದರಿಂದ ಬೆಂಗಳೂರು ನಗರದಲ್ಲಿ ವಿಶೇಷ ನಿಗಾ ಇಡಲು ತೀರ್ಮಾನಿಸಲಾಗಿದೆ. ಮೇಲ್ವಿಚಾರಣೆ ಮತ್ತು ಚಿಕಿತ್ಸೆ ನೀಡುವ ಸಂಬಂಧ ಮಾರ್ಗಸೂಚಿ ಹೊರಡಿಸಲಾಗುವುದು ಎಂದರು.

ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ, ಕೋವಿಡ್‌ ಲಸಿಕೆ ತೆಗೆದುಕೊಳ್ಳದೇ ಇರುವವರು ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ. ಆಸ್ಪತ್ರೆಗೆ ಸೇರುತ್ತಿರುವವರಲ್ಲಿ ಇವರ ಸಂಖ್ಯೆಯೇ ಹೆಚ್ಚು. ಮೂರನೇ ಡೋಸ್‌ ಅನ್ನು 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ನೀಡಲಾಗುವುದು. ಹೆಚ್ಚಿನ ಜನ ಮೂರನೇ ಡೋಸ್‌ ತೆಗೆದುಕೊಳ್ಳಲು ಬರುತ್ತಿಲ್ಲ. ನಾಲ್ಕನೇ ಅಲೆ ಬರುವ ತನಕ ಕಾಯುವುದು ಬೇಡ. ಆದಷ್ಟು ಬೇಗನೆ ತೆಗೆದುಕೊಂಡು ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಎಂದು ಹೇಳಿದರು.

ವಿದೇಶಗಳಿಂದ ಬರುವವರ ಮೇಲೆ ನಿಗಾ: ದಕ್ಷಿಣ ಕೊರಿಯಾ, ಥಾಯ್ಲೆಂಡ್‌, ಜಪಾನ್‌ಗಳಿಂದ ಬರುವವರ ಮೇಲೆ ವಿಮಾನ ನಿಲ್ದಾಣಗಳಲ್ಲಿ ವಿಶೇಷ ನಿಗಾ ಇರಿಸಲಾಗುವುದು. ಅಲ್ಲಿಂದ ಬಂದವರು ಮನೆಯಲ್ಲಿ ಇದ್ದಾಗಲೂ ನಿಗಾ ಇಡಲಾಗುವುದು. ಅವರ ಜತೆ ಸಂಪರ್ಕ ಇಟ್ಟುಕೊಳ್ಳುವುದರ ಜತೆಗೆ ಟೆಲಿಮಾನಿಟರಿಂಗ್ ಮೂಲಕ ಅಗತ್ಯ ಸಲಹೆ ಸೂಚನೆ ನೀಡಲಾಗುವುದು ಎಂದರು.

ಈಗಿನ ತಳಿಯ ಬಗ್ಗೆ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದು, ಯಾವ ತಳಿ ಎಂಬುದು ಆ ಬಳಿಕವೇ ಗೊತ್ತಾಗಲಿದೆ. ದೆಹಲಿ, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡುಗಳಿಂದ ಬರುವವರ ತಪಾಸಣೆ ಬಗ್ಗೆ ಏಪ್ರಿಲ್‌ 27 ರ ಬಳಿಕ ಸಭೆ ನಡೆಸಲಾಗುತ್ತದೆ. ಪ್ರಧಾನಿಯವರು ಕೋವಿಡ್‌ ಕುರಿತ ಸಭೆಯನ್ನು ಮಾಡಿದ ಬಳಿಕ ಮತ್ತೊಂದು ಸಭೆ ನಡೆಸಲಾಗುವುದು. ಆಗ ನೆರೆಯ ರಾಜ್ಯಗಳಿಂದ ಬರುವವರ ಮೇಲೆ ನಿಗಾ ಇಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸುಧಾಕರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT