ಮಂಗಳವಾರ, ಜೂನ್ 15, 2021
22 °C

ಬಾಗಲಕೋಟೆ: ಗುಣಮುಖರಾದರೂ ಆಮ್ಲಜನಕದ ಸಂಗ ಬಿಡಲೊಲ್ಲರು, ಕೌನ್ಸೆಲಿಂಗ್‌ಗೆ ಚಿಂತನೆ

ವೆಂಕಟೇಶ ಜಿ.ಎಚ್. Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಇಲ್ಲಿನ ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಂಪರ್ಕಿತ ಹಾಸಿಗೆಯಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾದ ಕೋವಿಡ್ ಸೋಂಕಿತರು ಮನೆಗೆ ಹೋಗಲು ಒಪ್ಪುತ್ತಿಲ್ಲ. ಇದರಿಂದಾಗಿ ಆಮ್ಲಜನಕವುಳ್ಳ ಹಾಸಿಗೆಯ ತುರ್ತು ನೆರವು ಬೇಕಿರುವವರಿಗೆ ಚಿಕಿತ್ಸೆ ನೀಡಲು ತೀವ್ರ ತೊಂದರೆ ಆಗಿದೆ.

ಮನೆಗೆ ಹೋಗುವಂತೆ ಮನವೊಲಿಸಲು ಆಪ್ತಸಮಾಲೋಚನೆಗೆ ಮನೋವೈದ್ಯರನ್ನು ಜಿಲ್ಲಾಡಳಿತ ನೇಮಕ ಮಾಡಿದೆ.

‘ನೀವು ಹೇಳಿದ್ದೀರೆಂದು ಮನೆಗೆ ಹೋಗುತ್ತೇವೆ. ಅಲ್ಲಿ ಮತ್ತೆ ಉಸಿರಾಟಕ್ಕೆ ತೊಂದರೆ ಆದರೆ ಯಾರು ಹೊಣೆ. ಇನ್ನೆರಡು ದಿನ ಇರುತ್ತೇವೆ‘ ಎಂದು ಗುಣಮುಖರಾದವರು ಹೇಳುತ್ತಿದ್ದಾರೆ. ಉಸಿರಾಟಕ್ಕೆ ಆಮ್ಲಜನಕದ ನೆರವು ನಿಲ್ಲಿಸದಂತೆ ಒತ್ತಾಯಿಸುತ್ತಾರೆ. ತಕ್ಷಣ ಡಿಸ್ಚಾರ್ಜ್ ಮಾಡದಂತೆ ಪ್ರಭಾವಿಗಳಿಂದ ಒತ್ತಡ ಹಾಕಿಸುತ್ತಿದ್ದಾರೆ. ಇದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಇಲ್ಲಿನ ಕುಮಾರೇಶ್ವರ ಆಸ್ಪತ್ರೆಯಲ್ಲಿ ಎರಡು ದಿನಗಳ ಹಿಂದೆ ಮಹಿಳೆ ಯೊಬ್ಬರು ಆಮ್ಲಜನಕ ಸಿಲಿಂಡರ್ ಅಪ್ಪಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಮಾಡದಂತೆ ದೊಡ್ಡ ರಂಪವನ್ನೇ ಮಾಡಿದ್ದಾರೆ.

‘ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು ಎಂದು ಚಿಕಿತ್ಸೆ ನೀಡಿದ ವೈದ್ಯರು ಶಿಫಾರಸು ಮಾಡಿದ ನಂತರವೇ ಮನೆಗೆ ತೆರಳಲು ಅವರಿಗೆ ಹೇಳಲಾಗುತ್ತಿದೆ. ಆದರೂ ಒಪ್ಪುತ್ತಿಲ್ಲ. ಕೆಲವರಿಗೆ ಕೌನ್ಸೆಲಿಂಗ್ ಮಾಡಿಸಿ, ಇನ್ನೂ ಕೆಲವರನ್ನು ಬಲವಂತವಾಗಿ ಮನೆಗೆ ಕಳುಹಿಸಿದ್ದೇವೆ‘ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಹೇಳುತ್ತಾರೆ.

‘ಹೀಗೆ ಗುಣಮುಖರಾದವರನ್ನು ಪರಿಶೀಲಿಸಿ ಆಸ್ಪತ್ರೆಯಿಂದ ಮನೆಗೆ ಕಳುಹಿಸಲೆಂದೇ ಹಿರಿಯ ವೈದ್ಯೆ ಡಾ.ಜಯಶ್ರೀ ಎಮ್ಮಿ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದ್ದೇವೆ. ಅವರ ಶಿಫಾರಸ್ಸಿನ ಮೇರೆಗೆ ಜಿಲ್ಲಾ ಆಸ್ಪತ್ರೆಯಲ್ಲಿದ್ದ 26 ಮಂದಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ’ ಎನ್ನುತ್ತಾರೆ.

ಜೇಬಿನಲ್ಲಿ ಸ್ಪ್ಯಾನರ್; ಬೆಚ್ಚಿಬಿದ್ದ ಅಧಿಕಾರಿಗಳು!
ಇಲ್ಲಿನ ಜಿಲ್ಲಾ ಆಸ್ಪತ್ರೆಯ ಕೋವಿಡ್ ವಾರ್ಡ್‌ಗಳಿಗೆ ಜಿಲ್ಲಾಧಿಕಾರಿ, ಎಸ್ಪಿ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು. ಈ ವೇಳೆ ಅಲ್ಲಿ ಸೋಂಕಿತರ ನೋಡಿಕೊಳ್ಳಲು ಬಂದಿದ್ದ ಸಂಬಂಧಿಕರು ಜೇಬಿನಲ್ಲಿ, ಕೈಯಲ್ಲಿ ಸ್ಪ್ಯಾನರ್ ಇಟ್ಟುಕೊಂಡು ಅಡ್ಡಾಡುವುದು ಕಂಡುಬಂದಿತು.  

ವಿಚಾರಿಸಿದಾಗ, ರೋಗಿಗೆ ಅಳವಡಿಸಿರುವ ಸಿಲಿಂಡರ್‌ನ ದ್ವಾರ ಸಡಿಲಿಸಿ ನಿಗದಿಗಿಂತ ಹೆಚ್ಚಿನ ಪ್ರಮಾಣದ ಜೀವವಾಯು ಹರಿಯುವಂತೆ ಮಾಡಲು ಸ್ಪ್ಯಾನರ್ ಬಳಸುತ್ತಿದ್ದೇವೆ’ ಎಂದಾಗ ಅಧಿಕಾರಿಗಳು ಬೆಚ್ಚಿಬಿದ್ದರು. ಅವಧಿಗೆ ಮುನ್ನ ಸಿಲಿಂಡರ್‌ಗಳು ಖಾಲಿಯಾಗುವುದರ ಹಿಂದಿನ ರಹಸ್ಯವೂ ಗೊತ್ತಾಯಿತು.

*
ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯುತ್ತಿರುವವರೇ ಹೆಚ್ಚಾಗಿ ಈ ವರ್ತನೆ ತೋರುತ್ತಿದ್ದಾರೆ. ಹಾಸಿಗೆ ಖಾಲಿ ಮಾಡಿದರೆ, ಇನ್ನೊಂದು ಜೀವ ಉಳಿಯಲಿದೆ ಎಂಬುದನ್ನು ಅರಿಯಬೇಕು.
–ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾಧಿಕಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು