ಸೋಮವಾರ, ಜೂನ್ 14, 2021
23 °C
ಕಾರ್ಮಿಕರಿಗೆ ಆಹಾರ– ನೀರು ಒದಗಿಸಿ ಔದಾರ್ಯ

ಲಾಠಿ ಬಿಟ್ಟು ಜಾಗೃತಿಗಿಳಿದ ಪೊಲೀಸರು: ತಾಳ್ಮೆಯಿಂದ ವರ್ತಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಜಾರಿಗೊಳಿಸಿರುವ ಕಠಿಣ ಲಾಕ್‌ಡೌನ್‌ನ ಎರಡನೇ ದಿನವಾದ ಮಂಗಳವಾರ, ಪೊಲೀಸರು ತುಸು ಮೃದುವಾಗಿ ವರ್ತಿಸಿದರು. ಸೋಮವಾರ ಲಾಠಿ ಝಳಪಿಸಿ ಜನಾಕ್ರೋಶಕ್ಕೆ ಗುರಿಯಾಗಿದ್ದ ಪೊಲೀಸರು ಜಾಗೃತಿ ಮೂಡಿಸಿ ಜನರನ್ನು ನಿಯಂತ್ರಿಸುವ ಕೆಲಸಕ್ಕೆ ಮುಂದಡಿ ಇಟ್ಟರು.

ಸೋಮವಾರ ಖರೀದಿಗೆ ಬಂದವರು, ಅಂಗಡಿ ಮಾಲೀಕರು, ಹಣ್ಣು ಮತ್ತು ತರಕಾರಿ ಮಾರಾಟಗಾರರು, ವಾಹನ ಸವಾರರ ಮೇಲೆ ಪೊಲೀಸರು ಲಾಠಿ ಬೀಸಿ ದರ್ಪ ಮೆರೆದಿದ್ದು, ಈ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಗತ್ಯ ವಸ್ತುಗಳ ಖರೀದಿಗೆ ವಾಹನ ಬಳಕೆಗೆ ಅವಕಾಶ ನೀಡುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಪೊಲೀಸ್ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ನಿರ್ದೇಶನ ನೀಡಿದ್ದರು.

ಮಂಗಳವಾರ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ರಾಜ್ಯದಾದ್ಯಂತ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ನಗರಗಳಲ್ಲಿ ಸಮೀಪದ ಅಂಗಡಿಗಳಿಗೆ ಮತ್ತು ಗ್ರಾಮೀಣ ಭಾಗದಲ್ಲಿ ಸಮೀಪದ ಪೇಟೆಗಳಿಗೆ ವಾಹನಗಳಲ್ಲೇ ತೆರಳಲು ಅವಕಾಶ ನೀಡಲಾಗಿತ್ತು. ಯಾವುದೇ ಭಾಗದಲ್ಲೂ ಮಂಗಳವಾರ ಲಾಠಿ ಪ್ರಹಾರ ನಡೆಸಿದ, ಜನರ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣ ವರದಿಯಾಗಿಲ್ಲ.

ಜಾಗೃತಿಗೆ ಯತ್ನ: ಕೆಲವು ಪ್ರದೇಶಗಳಲ್ಲಿ ಬೆಳಿಗ್ಗೆ 10ರ ನಂತರವೂ ಅನಗತ್ಯವಾಗಿ ವಾಹನಗಳಲ್ಲಿ ಓಡಾಡುತ್ತಿದ್ದವರನ್ನು ಪೊಲೀಸರು ತಡೆದಿದ್ದಾರೆ. ಅಂತಹವರ ವಾಹನಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರು ನಗರ ಸೇರಿದಂತೆ ಹಲವು ಕಡೆಗಳಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಓಡಾಡುತ್ತಿದ್ದವರನ್ನು ಕರೆತಂದು ಬುದ್ಧಿಮಾತು ಹೇಳಿ ಕಳುಹಿಸುವ ಕೆಲಸವನ್ನೂ ಅಲ್ಲಲ್ಲಿ ಪೊಲೀಸರು ಮಾಡಿದ್ದಾರೆ. ಕೆಲವೆಡೆ ನಿರ್ಗತಿಕರು, ಕೂಲಿ ಕಾರ್ಮಿಕರಿಗೆ ಆಹಾರ ಮತ್ತು ನೀರು ವಿತರಿಸಿ ಪೊಲೀಸರು ನೆರವಾಗಿದ್ದಾರೆ. ಕೆಲವೆಡೆ ಮಾಸ್ಕ್‌ ಕೂಡ ವಿತರಣೆ ಮಾಡಿ, ಜಾಗೃತಿ ಮೂಡಿಸಿದ್ದಾರೆ.

ಚೆಕ್‌ ಪೋಸ್ಟ್‌ಗಳಲ್ಲೂ ನಿರಾಳ: ಮೊದಲ ದಿನ ಅಂತರ ಜಿಲ್ಲಾ ಚೆಕ್ ಪೋಸ್ಟ್‌ಗಳು ಮತ್ತು ನಗರ ಪ್ರದೇಶಗಳನ್ನು ಪ್ರವೇಶಿಸುವ ಸ್ಥಳದಲ್ಲಿನ ಚೆಕ್‌ ಪೋಸ್ಟ್‌ಗಳಲ್ಲಿ ಜನರು ಹೆಚ್ಚಿನ ತೊಂದರೆ ಅನುಭವಿಸಿದ್ದರು. ಆಸ್ಪತ್ರೆಗೆ ತೆರಳುತ್ತಿದ್ದವರು, ಅಗತ್ಯ ವಸ್ತು ಖರೀದಿಗೆ ಹೊರಟವರನ್ನು ಪೊಲೀಸರು ಗಂಟೆಗಟ್ಟಲೆ ತಡೆದು ನಿಲ್ಲಿಸಿದ್ದರು.

ಮಂಗಳವಾರ ಬಹುತೇಕ ಚೆಕ್‌ ಪೋಸ್ಟ್‌ಗಳಲ್ಲಿ ವಾತಾವರಣ ಸಂಪೂರ್ಣ ಬದಲಾಗಿತ್ತು. ವೈದ್ಯಕೀಯ ದಾಖಲೆಗಳನ್ನು ಹೊಂದಿರುವವರು, ಅನಾರೋಗ್ಯಕ್ಕೆ ಒಳಗಾದವರನ್ನು ತ್ವರಿತವಾಗಿ ಮುಂದಕ್ಕೆ ಕಳಿಸಲಾಗುತ್ತಿತ್ತು. ಅಗತ್ಯವಸ್ತು ಖರೀದಿಗೆ ಬಂದವರಿಗೂ ಮುಂದಕ್ಕೆ ಸಾಗಲು ಅವಕಾಶ ಕಲ್ಪಿಸಲಾಯಿತು.

ತಾಳ್ಮೆಯಿಂದ ವರ್ತಿಸಲು ಸೂಚನೆ
ಬೆಂಗಳೂರು:
ರಾಜ್ಯದಲ್ಲಿ ಲಾಕ್‌ಡೌನ್ ಮಾನದಂಡಗಳನ್ನು ಜಾರಿಗೊಳಿಸುವಾಗ ತಾಳ್ಮೆಯಿಂದ ವರ್ತಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ. ಕೋವಿಡ್ ವಿಷಯಗಳ ಕುರಿತ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ ಜಾರಿಗೊಳಿಸಿದ ಆದೇಶವನ್ನು ಈ ವರ್ಷವೂ ಅನ್ವಯಿಸುವಂತೆ ತಿಳಿಸಿತು.

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಹೊರ ಹೋಗುವ ಜನರ ವಿರುದ್ಧ ಲಾಠಿ ಬೀಸುತ್ತಿರುವುದನ್ನು ವಕೀಲರು ಉಲ್ಲೇಖಿಸಿದರು. ಸಂಯಮದಿಂದ ವರ್ತಿಸಲು ಸಂಬಂಧಪಟ್ಟವರಿಗೆ ತಿಳಿಸಲಾಗುವುದು ಎಂದು ಅಡ್ವೊಕೇಟ್ ಜನರಲ್ ಭರವಸೆ ನೀಡಿದರು. ಕಳೆದ ವರ್ಷದ ಲಾಕ್‌ಡೌನ್ ಸಂದರ್ಭದಲ್ಲಿ ಇದೇ ರೀತಿಯ ದೂರುಗಳು ಬಂದಾಗ 2020ರ ಮಾರ್ಚ್ 30ರಂದು ಹೊರಡಿಸಿದ ಆದೇಶವನ್ನು ಪೀಠ ನೆನಪಿಸಿತು. ‘ಲಾಠಿ ಬಳಸದೆ ನಾಗರಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ನಾಗರಿಕರು ಕೂಡ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಪೀಠ ತಿಳಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು