ಬುಧವಾರ, ಜನವರಿ 19, 2022
23 °C
3,500 ಜನರಿಗೆ ಕೋವಿಡ್ ತಪಾಸಣೆ

ಎಸ್‌ಡಿಎಂ: ಸೋಂಕಿತರ ಸಂಖ್ಯೆ 204ಕ್ಕೆ ಏರಿಕೆ; ಸಾರ್ವಜನಿಕರಿಗೆ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಇಲ್ಲಿನ ಸತ್ತೂರಿನಲ್ಲಿರುವ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಹೊಸದಾಗಿ 138 ವಿದ್ಯಾರ್ಥಿಗಳಲ್ಲಿ ಕೋವಿಡ್ ದೃಢಪಟ್ಟಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 204ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯ ಹೊರರೋಗಿಗಳ ವಿಭಾಗ ಮುಚ್ಚಲಾಗಿದೆ.

ನ. 17ರಂದು ಕಾಲೇಜಿನ ಡಾ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದ ನಂತರ ಕೆಲ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು. ವಿದ್ಯಾರ್ಥಿಗಳ ಗಂಟಲು ಹಾಗೂ ಮೂಗಿನ ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ ಗುರುವಾರ 66 ವಿದ್ಯಾರ್ಥಿಗಳಲ್ಲಿ ಸೋಂಕು ಕಂಡುಬಂದಿತ್ತು. ಇದರ ಹಿನ್ನೆಲೆಯಲ್ಲೇ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ತಪಾಸಣೆಗೆ ಜಿಲ್ಲಾಡಳಿತ ಸೂಚಿಸಿತ್ತು. ಜತೆಗೆ ಎರಡು ವಿದ್ಯಾರ್ಥಿನಿಲಯಗಳನ್ನು ಸೀಲ್‌ಡೌನ್ ಮಾಡಲಾಗಿತ್ತು.

‘ಗುರುವಾರ ಸಂಜೆಯವರೆಗೂ ಎಸ್‌ಡಿಎಂ ಆವರಣದೊಳಗೆ ಒಟ್ಟು 690 ಜನರನ್ನು ಆರ್‌ಟಿಪಿಸಿಆರ್ ಹಾಗೂ ಆರ್‌ಎಟಿ ತಪಾಸಣೆಗೆ ಒಳಪಡಿಸಲಾಗಿದೆ. ಇವುಗಳ ಮಾದರಿಯನ್ನು ಹುಬ್ಬಳ್ಳಿಯ ಕಿಮ್ಸ್, ಧಾರವಾಡದ ಡಿಮ್ಹಾನ್ಸ್ ಹಾಗೂ ಎಸ್‌ಡಿಎಂ ಕೋವಿಡ್ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಯಾರಲ್ಲೂ ಗಂಭೀರ ಸ್ವರೂಪದ ಲಕ್ಷಣಗಳಿಲ್ಲ’ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಸ್‌ಡಿಎಂ ಆವರಣದ ಹೊರಗೆ ಈವರೆಗೂ ಎಲ್ಲಿಯೂ ಕೋವಿಡ್‌ ಪ್ರಕರಣಗಳು ವರದಿಯಾಗಿಲ್ಲ. ಕಲಾಕ್ಷೇತ್ರದಲ್ಲಿ ನ.17ರ ನಂತರ ನ. 19 ಹಾಗೂ ನ.25ರಂದು ಕಾರ್ಯಕ್ರಮಗಳು ಆಗಿವೆ. ಮುನ್ನೆಚ್ಚರಿಕೆಯ ಕ್ರಮವಾಗಿ ಅಲ್ಲಿ ಭಾಗವಹಿಸಿದವರು ತಪಾಸಣೆಗೆ ಒಳಪಡುವುದು ಸೂಕ್ತ. ರೋಗದ ಲಕ್ಷಣಗಳು ಕಂಡುಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಅವರು ತಿಳಿಸಿದ್ದಾರೆ.
 

3,500 ಜನರಿಗೆ ಕೋವಿಡ್ ತಪಾಸಣೆ

ಧಾರವಾಡದ ಎಸ್‌ಡಿಎಂ ಕಾಲೇಜು ಹಾಗೂ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕಿತರ ಪ್ರಯಾಣ ಮಾಹಿತಿ ಹಾಗೂ ಸೋಂಕಿನ ತೀವ್ರತೆ ತಿಳಿಯಲು ಜಿನೋಮ್ ಅನುಕ್ರಮವನ್ನು ಪರಿಶೀಲಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಎಸ್‌ಡಿಎಂಗೆ ಸಾರ್ವಜನಿಕರ ಅನಗತ್ಯ ಭೇಟಿ, ದಾಖಲಾಗಿರುವ ರೋಗಿಗಳ ಸಹಾಯಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

‘ಕಾಲೇಜು ಸುತ್ತ 500 ಮೀ. ವ್ಯಾಪ್ತಿಯಲ್ಲಿರುವ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆಸ್ಪತ್ರೆಯ 3,500 ಜನರ ಕೋವಿಡ್ ತಪಾಸಣೆ ನಡೆಸಲಾಗುತ್ತಿದೆ‘ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು