ಮಂಗಳವಾರ, ಮೇ 18, 2021
24 °C

Covid-19 Karnataka Updates: ರಾಜ್ಯದಲ್ಲಿ ಮತ್ತೆ 2,886 ಮಂದಿಗೆ ಸೋಂಕು ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಶನಿವಾರ 2,886 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಕೋವಿಡ್ ಹರಡುವಿಕೆ ತಡೆಯಲು ಮುಂದಾಗಿರುವ ಸರ್ಕಾರ ಹಬ್ಬದ ಜತೆಗೆ ಜಾತ್ರೆ ಮತ್ತು ಮೇಳಗಳಿಗೂ ನಿರ್ಬಂಧ ವಿಧಿಸಿದೆ.

ಎರಡು ದಿನಗಳ ಹಿಂದಷ್ಟೇ ಹೋಳಿ, ಯುಗಾದಿ, ಷಬ್‌–ಎ–ಬರಾತ್, ಗುಡ್‌ ಫ್ರೈಡೇ ಹಬ್ಬಗಳ ಆಚರಣೆಗೆ ನಿರ್ಬಂಧ ವಿಧಿಸಲಾಗಿತ್ತು. ಯಾವುದೇ ಹಬ್ಬಗಳನ್ನು ಸಾರ್ವಜನಿಕ ಸ್ಥಳಗಳು, ಸಾರ್ವಜನಿಕ ಮೈದಾನಗಳು, ಉದ್ಯಾನ, ಮಾರುಕಟ್ಟೆ ಮತ್ತು ಧಾರ್ಮಿಕ ಪ್ರದೇಶಗಳಲ್ಲಿ ಆಚರಿಸುವಂತಿಲ್ಲ ಎಂದು ಸೂಚಿಸಲಾಗಿತ್ತು. ಆದರೆ, ಇದರಲ್ಲಿ ಜಾತ್ರೆ ಮತ್ತು ಮೇಳಗಳನ್ನು ಸೇರಿಸಿರಲಿಲ್ಲ.

ಕೋವಿಡ್ ಹರಡುವಿಕೆ ತಡೆಯಲು ಸಾರ್ವಜನಿಕ ಕಾರ್ಯಕ್ರಮಗಳಿಗೆ ಕಟ್ಟುನಿಟ್ಟಾಗಿ ನಿರ್ಬಂಧ ವಿಧಿಸಬೇಕು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಸೂಚಿಸಿದ್ದರು. ಧಾರ್ಮಿಕ ಹಬ್ಬಗಳಿಗೆ ಸಂಬಂಧಿಸಿದಂತೆ ಜಾತ್ರೆ, ಮೇಳಗಳಲ್ಲಿ ಸಹ ಜನ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಎಂದು ನೂತನ ಆದೇಶದಲ್ಲಿ ತಿಳಿಸಿರುವ ಸರ್ಕಾರ, ಈ ಸಂಬಂಧ ಬಿಬಿಎಂಪಿ ಆಯುಕ್ತರು ಮತ್ತು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸಬೇಕು. ಯಾರಾದರೂ ನಿಯಮ ಉಲ್ಲಂಘಿಸಿದರೆ ಅಂತಹವರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿ ಕ್ರಮಕೈಗೊಳ್ಳುಬೇಕು ಎಂದು ಸೂಚಿಸಿದೆ.

ಪ್ರಕರಣ ಮತ್ತಷ್ಟು ಏರಿಕೆ: ರಾಜ್ಯದಲ್ಲಿ  ಕೇವಲ 3 ದಿನಗಳಲ್ಲಿ 7,975 ಪ್ರಕರಣಗಳು ಖಚಿತಪಟ್ಟಿವೆ. ಈವರೆಗೆ ಸೋಂಕಿತರಾದವರ ಸಂಖ್ಯೆ 9.83 ಲಕ್ಷ ದಾಟಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೊಸದಾಗಿ ಪ್ರಕರಣಗಳು ವರದಿಯಾಗಿದ್ದು, ನಾಲ್ಕು ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಮೂರಂಕಿ ದಾಟಿದೆ. ಬೆಂಗಳೂರು (1,820), ಉಡುಪಿ (156), (ಕಲಬುರ್ಗಿ 147), ಮೈಸೂರು (131), ಬೀದರ್ (82), ತುಮಕೂರು (80) ಜಿಲ್ಲೆಯಲ್ಲಿ ಹೊಸ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ದೃಢಪಟ್ಟಿವೆ. 

ಕೊರೊನಾ ಸೋಂಕಿತರಲ್ಲಿ ಬೆಂಗಳೂರು ಹಾಗೂ ಕಲಬುರ್ಗಿಯಲ್ಲಿ ತಲಾ ಇಬ್ಬರು, ತುಮಕೂರು, ಹಾಸನ, ಧಾರವಾಡ ಮತ್ತು ಬೀದರ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 12,492ಕ್ಕೆ ಏರಿಕೆಯಾಗದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 20 ಸಾವಿರದ ಗಡಿ (21,252) ದಾಟಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು