ಶುಕ್ರವಾರ, ಮೇ 20, 2022
26 °C
ಲಾಕ್‌ಡೌನ್‌, ಕಠಿಣ ನಿಯಮ ಇಲ್ಲ l ವಾರಾಂತ್ಯ ಕರ್ಫ್ಯೂ ಮುಂದುವರಿಕೆ ಶುಕ್ರವಾರ ನಿರ್ಧಾರ

ತಿಂಗಳಾಂತ್ಯಕ್ಕೆ ಕೋವಿಡ್‌ ಉಲ್ಬಣ: ಮುನ್ನೆಚ್ಚರಿಕೆ ಕ್ರಮಗಳ ಜಾರಿಗೆ ಸಿಎಂ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಪ್ರಕರಣಗಳು ಮಾಸಾಂತ್ಯದ ವೇಳೆಗೆ ಗರಿಷ್ಠ ಮಟ್ಟವನ್ನು ತಲುಪಲಿವೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿರುವ ಬೆನ್ನಲ್ಲೇ, ಸಂಭಾವ್ಯ ಪರಿಸ್ಥಿತಿ ನಿಭಾಯಿಸಲು ನಡೆದಿರುವ ಸಿದ್ಧತೆಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯ ಸಭೆ ಸೋಮವಾರ ಸಂಜೆ ಪರಿಶೀಲನೆ ನಡೆಸಿತು.

ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಕೋವಿಡ್‌ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಬಹುತೇಕ ಜ. 25 ರ ವೇಳೆಗೆ ಕೋವಿಡ್‌ ಪ್ರಕರಣಗಳು ತಾರಕಕ್ಕೆ ಹೋಗಬಹುದು. ಬಳಿಕ ಇಳಿಕೆ ಆಗಬಹುದು ಎಂದು ತಜ್ಞರು ತಿಳಿಸಿದ್ದಾರೆ ಎಂದು ಸಭೆಯ ಬಳಿಕ ಕಂದಾಯ ಸಚಿವ ಆರ್‌.ಅಶೋಕ ಸುದ್ದಿಗಾರರಿಗೆ ಹೇಳಿದರು.

ಎಲ್ಲ ಬೆಳವಣಿಗೆಗಳನ್ನು ಗಮನಿಸಿ ಕೋವಿಡ್‌ ನಿಯಮಗಳ ಬಗ್ಗೆ ಮುಂದಿನ ತೀರ್ಮಾನಿಸಬೇಕಿದೆ. ಇದಕ್ಕಾಗಿ ಶುಕ್ರವಾರ ತುರ್ತುಸಭೆ ಕರೆಯಲಾಗಿದೆ. ಪ್ರಕರಣಗಳು ಇಳಿಕೆಯಾದರೆ ನಿಯಮಗಳನ್ನು ಸಡಿಲಿಸುವ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಆದರೆ, ರಾಜ್ಯದಲ್ಲಿ ಲಾಕ್‌ಡೌನ್ ಅಥವಾ ಇನ್ನಷ್ಟು ಕಠಿಣ ನಿಯಮ ಜಾರಿಗೆ ತರುವ ಉದ್ದೇಶವಿಲ್ಲ. ವಾರಾಂತ್ಯ ಕರ್ಫ್ಯೂ ಮುಂದುವರಿಸಬೇಕೆ ಅಥವಾ ಸಡಿಲಗೊಳಿಸಬೇಕೇ ಎಂಬುದನ್ನೂ ಶುಕ್ರವಾರದ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದರು.

ಬೆಂಗಳೂರು ಸೇರಿ ರಾಜ್ಯದ ಎಲ್ಲೆಡೆ ಶುಕ್ರವಾರದವರೆಗೆ ಶಾಲಾ–ಕಾಲೇಜುಗಳು ಯಥಾಸ್ಥಿತಿ ಮುಂದುವರೆಯಲಿವೆ. ಬಳಿಕ ಆ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅಶೋಕ ಹೇಳಿದರು.

ರಾಜ್ಯದಲ್ಲಿ ಕೋವಿಡ್‌ ಪರೀಕ್ಷೆಯನ್ನು ಹೆಚ್ಚು ಮಾಡಲಾಗುತ್ತಿದೆ. ಅಷ್ಟು ಅಗತ್ಯವಿಲ್ಲ. ರಾಜ್ಯದಲ್ಲಿ ಒಟ್ಟು 1.50 ಲಕ್ಷ ಪರೀಕ್ಷೆ ಮಾಡಿದರೆ ಸಾಕು. ಲಸಿಕೆ ಪಡೆಯದೇ ಇರುವವರಿಗೆ ಲಸಿಕೆ ನೀಡುವತ್ತ ಗಮನಹರಿಸಬೇಕು ಎಂಬುದಾಗಿ ತಜ್ಞರು ಸಭೆಯಲ್ಲಿ ತಿಳಿಸಿದ್ದಾರೆ ಎಂದು ಹೇಳಿದರು.

ಪರಿಸ್ಥಿತಿ ನಿಭಾವಣೆ: ಬೊಮ್ಮಾಯಿ ಸೂಚನೆ

ಕೋವಿಡ್ ಉಲ್ಬಣಗೊಂಡು ಪರಿಸ್ಥಿತಿ ಬಿಗಡಾಯಿಸದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.

* ಕೋವಿಡ್ ದೃಢಪಟ್ಟವರು ಮನೆಗಳಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಮೇಲೆ ಹೆಚ್ಚು ನಿಗಾ ಇಡಬೇಕು. ಟೆಲಿ ಟ್ರಯಾಜಿಂಗ್‌ ಮೂಲಕ ಮುಂದಿನ 7 ದಿನಗಳವರೆಗೆ ಪ್ರತಿ ದಿನ 2ರಿಂದ 3 ಬಾರಿ ಕರೆ ಮಾಡಿ ಮಾರ್ಗದರ್ಶನ ನೀಡಬೇಕು.

*ಬೆಂಗಳೂರಿನಲ್ಲಿ ಒಪಿಡಿಗಳಿಗೆ ಹೆಚ್ಚಿಗೆ ಗಮನ ಕೊಡುವುದರ ಜತೆಗೆ ಹೆಚ್ಚು ಸಿಬ್ಬಂದಿ ನಿಯೋಜಿಸುವುದು.

*ಮನೆಗಳಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಔಷಧದ ಕಿಟ್‌ಗಳನ್ನು ಬೇಗನೇ ತಲುಪಿಸಲು ವ್ಯವಸ್ಥೆ. ಇದಕ್ಕಾಗಿ ಸೇವಾ ಸಂಸ್ಥೆಗಳ ನೆರವು.

* ಸೋಂಕಿತ ಮಕ್ಕಳ ಕುರಿತು, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಪೋಷಕರಿಗೆ ಧೈರ್ಯ ತುಂಬುವುದರ ಜತೆಗೆ ಔಷಧ ಕಿಟ್‌ಗಳನ್ನು ನೀಡಬೇಕು. ಮಕ್ಕಳಿಗೆ ಪ್ರತ್ಯೇಕ ಕಿಟ್‌ ಸಿದ್ಧಪಡಿಸಬೇಕು.

* ಆಮ್ಲಜನಕ ತಯಾರಿಕ ಘಟಕಗಳನ್ನು ಸನ್ನದ್ಧಗೊಳಿಸಬೇಕು. ಅಗತ್ಯ ಸಿಬ್ಬಂದಿ ಮತ್ತು ಇಂಧನ ಸೇರಿ ಅಗತ್ಯ ಪರಿಕರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಜನರೇಟರ್‌ ವ್ಯವಸ್ಥೆ ಮಾಡಿಕೊಳ್ಳಬೇಕು.

* ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರ ಮೇಲೆ ಹೆಚ್ಚಿನ ನಿಗಾ ಇಡಬೇಕು. ಲಸಿಕೆ ಸಿಗದವರಿಗೆ ಆದಷ್ಟು ಬೇಗ ಲಸಿಕೆ ನೀಡಬೇಕು.

* ಮಾಸ್ಕ್‌ ಧರಿಸುವುದು ಮತ್ತು ಜನರು ಕೋವಿಡ್‌ ಸೂಕ್ತ ನಡವಳಿಕೆ ಅನುಸರಿಸುವ ಬಗ್ಗೆ ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸಬೇಕು.

* ಎರಡನೇ ಡೋಸ್‌ ಲಸಿಕೆ ಪಡೆದವರ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಒಗಳೊಂದಿಗೆ ವಿಡಿಯೊ ಸಂವಾದ ನಡೆಸಿ ನಿರ್ದೇಶನ

* 15 ರಿಂದ 18 ವರ್ಷದವರಿಗೆ ಲಸಿಕೆ ನೀಡುವ ಪ್ರಕ್ರಿಯೆ ಇನ್ನಷ್ಟು ತೀವ್ರಗೊಳಿಸಬೇಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು