ಗುರುವಾರ , ಆಗಸ್ಟ್ 11, 2022
21 °C
ನಿಯಮ ಪ್ರಕಾರ ಅವಕಾಶ ಇಲ್ಲದಿದ್ದರೂ ಹಣ ವಸೂಲಿ: ಚಿಕಿತ್ಸೆ ಪಡೆದ ವ್ಯಕ್ತಿಯಿಂದ ಆರೋಪ

ಕೋವಿಡ್‌ ಚಿಕಿತ್ಸೆ: ಶುಲ್ಕ ಮರಳಿಸಿದ ಆಸ್ಪತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಚಿಕಿತ್ಸೆಗೆ ದಾಖಲಾಗಿದ್ದ ರೋಗಿಯೊಬ್ಬರಿಂದ ಪಡೆದಿದ್ದ ಶುಲ್ಕವನ್ನು ಶೇಷಾದ್ರಿಪುರದ ಅಪೋಲೊ ಆಸ್ಪತ್ರೆ ಮರಳಿಸಿದೆ. ಇನ್ನು ಇಂತಹ ಘಟನೆ ಮರುಕಳಿಸುವುದಿಲ್ಲ ಎಂದೂ ಆಸ್ಪತ್ರೆ ಹೇಳಿದೆ.

ಹಲಸೂರಿನ ನರಸಿಂಹಮೂರ್ತಿ ಅವರು ಕೋವಿಡ್‌ ಚಿಕಿತ್ಸೆಗಾಗಿ ಬಿಬಿಎಂಪಿ ಶಿಫಾರಸಿನ ಮೇರೆಗೆ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು.

‘ನಾನು ಬಿ.ಯು.ನಂಬರ್‌ ಪಡೆದು ಚಿಕಿತ್ಸೆಗೆ ದಾಖಲಾಗಿದ್ದೆ. ಆದರೂ ನನ್ನ ಬಿಡುಗಡೆ ವೇಳೆ ಆಸ್ಪತ್ರೆ ಸಿಬ್ಬಂದಿ ₹ 10 ಸಾವಿರ ಶುಲ್ಕ ಪಾವತಿಸುವಂತೆ ಹೇಳಿದರು. ಬಿಬಿಎಂಪಿ ಶಿಫಾರಸಿನಿಂದ ದಾಖಲಾದ ರೋಗಿಗಳ ಶುಲ್ಕವನ್ನು ಸರ್ಕಾರವೇ ಪಾವತಿಸುತ್ತದೆ. ರೋಗಿ
ಗಳಿಂದ ಶುಲ್ಕ ಪಡೆಯುವಂತಿಲ್ಲ ಎಂದರೂ ಕೇಳಲಿಲ್ಲ. ಶುಲ್ಕ ಪಾವತಿಸದಿದ್ದರೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದರು. ಹಾಗಾಗಿ ವಿಧಿಯಿಲ್ಲದೇ ಶುಲ್ಕ ಪಾವತಿಸಿದೆ’ ಎಂದು ನರಸಿಂಹಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರದ ನಿರ್ದೇಶನವನ್ನು ಮೀರಿ ಆಸ್ಪತ್ರೆಯು ನನ್ನಿಂದ ಶುಲ್ಕ ಪಡೆದ ಬಗ್ಗೆ ಬಿಬಿಎಂಪಿ ಆಯುಕ್ತರಿಗೆ, ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದೆ. ಈ ಬಗ್ಗೆ ಪ್ರತಿಭಟನೆಯನ್ನೂ ಮಾಡಿದ್ದೇನೆ. ನನ್ನ ಹೋರಾಟಕ್ಕೆ ಮಣಿದು ಅವರು ₹ 10ಸಾವಿರ ಮರಳಿಸಲು ಬಂದರು. ಶುಲ್ಕ ಪಡೆದಿದ್ದಕ್ಕೆ ಕ್ಷಮೆ ಯಾಚಿಸಬೇಕು ಹಾಗೂ ನನಗೆ ಮಾನಸಿಕ ಕಿರುಕುಳ ನೀಡಿದ್ದಕ್ಕೆ ₹ 1 ದಂಡ ಸೇರಿಸಿ ನೀಡಬೇಕು ಎಂದು ಷರತ್ತು ಹಾಕಿದ ಬಳಿಕ ₹ 10,001 ಅನ್ನು ನನ್ನ ಬ್ಯಾಂಕ್‌ ಖಾತೆಗೆ ಜಮೆ ಮಾಡಿದ್ದಾರೆ’ ಎಂದು ಅವರು ಹೇಳಿದರು. 

‘ಅಕ್ರಮವಾಗಿ ಹಣ ವಸೂಲಿ ಮಾಡಿದ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಸ್‌ಎಎಸ್‌ಟಿಗೆ ದೂರು ನೀಡಿದ್ದೇನೆ. ನಿಮ್ಮ ಹಣ ಮರುಪಾವತಿಸಿದ್ದಾರಲ್ಲ ಎಂದು ಟ್ರಸ್ಟ್‌ ಉದಾಸೀನದಿಂದ ಪ್ರತಿಕ್ರಿಯಿಸಿದೆ. ಈ ಧೋರಣೆಯೇ ಆಸ್ಪತ್ರೆಗಳು ಅಕ್ರಮ ನಡೆಸಲು ಪ್ರೇರಣೆಯಾಗುತ್ತವೆ’ ಎಂದರು.

‘ಎಸ್‌ಎಎಸ್‌ಟಿಯು ಬಿಲ್ಲಿಂಗ್‌ ನಿಯಮಗಳಿಗೆ ಅನುಗುಣವಾಗಿಯೇ ರೋಗಿಯಿಂದ ಪ್ಲಾಸ್ಮಾ ಚಿಕಿತ್ಸೆಯ ಹೆಚ್ಚುವರಿ ವೆಚ್ಚವನ್ನು ನಾವು ಪಡೆದಿದ್ದೆವು. ಉದ್ದೇಶಪೂರ್ವಕವಾಗಿ ನಮ್ಮ ಸಿಬ್ಬಂದಿ ಈ ರೀತಿ ನಡೆದುಕೊಂಡಿಲ್ಲ. ಇಂತಹ ಪ್ರಕರಣಗಳು ಇನ್ನು ಮರುಕಳಿಸುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ. ರೋಗಿಯ ಜತೆಯಲ್ಲಿ ಬಂದವರಿಗೆ ಚಿಕಿತ್ಸೆ ವೆಚ್ಚದ ಬಗ್ಗೆ ನಾವು ಮುಂಚಿತವಾಗಿಯೇ ಮಾಹಿತಿ ನೀಡುತ್ತೇವೆ’ ಎಂದು ಆಸ್ಪತ್ರೆಯ ಬಿಲ್ಲಿಂಗ್‌ ವ್ಯವಸ್ಥಾಪಕರು ನರಸಿಂಹ ಮೂರ್ತಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು