ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: 5 ಜಿಲ್ಲೆಗಳಲ್ಲಿ ಲಸಿಕೆ ತಾಲೀಮು ಯಶಸ್ವಿ

Last Updated 2 ಜನವರಿ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 5 ಜಿಲ್ಲೆಗಳ 16 ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆಯ ಪೂರ್ವಾಭ್ಯಾಸವು (ಡ್ರೈ ರನ್) ಶನಿವಾರ ಯಶಸ್ವಿಯಾಗಿ ನಡೆಯಿತು.

ಬೆಂಗಳೂರಿನಲ್ಲಿ 4 ಹಾಗೂ ಬೆಳಗಾವಿ, ಮೈಸೂರು, ಕಲಬುರ್ಗಿ ಮತ್ತು ಶಿವಮೊಗ್ಗದಲ್ಲಿ ತಲಾ 3 ಆರೋಗ್ಯ ಕೇಂದ್ರಗಳಲ್ಲಿ ತಾಲೀಮು ನಡೆಯಿತು. ಪ್ರತಿ ಕೇಂದ್ರದಲ್ಲಿ ಲಸಿಕೆ ಪಡೆಯಲು 25 ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿತ್ತು. ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಿಬ್ಬಂದಿಯು ಲಸಿಕೆ ವಿತರಣೆಗೆ ಸಂಬಂಧಿಸಿದ ವಿವಿಧ ಪ್ರಕ್ರಿಯೆಗಳನ್ನು ನಡೆಸಿದರು. ಸ್ಥಳೀಯ ಶಾಸಕರು ಹಾಗೂ ಸಂಸದರು ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪ್ರಕ್ರಿಯೆ ಪರಿಶೀಲಿಸಿದರು.

ಬೆಳಗಾವಿಯ ಕಿತ್ತೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಕೆಲವೆಡೆ ತಡವಾಗಿ ‍ಪ್ರಕ್ರಿಯೆ ಪ್ರಾರಂಭಗೊಂಡ ಕಾರಣ ಲಸಿಕೆ ಪಡೆಯಲು ಬಂದಿದ್ದ ಕಾರ್ಯಕರ್ತರು ಕೆಲಹೊತ್ತು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನೂ ಕೆಲವೆಡೆ ಲಸಿಕೆ ಪಡೆಯಲು ಬಂದಿದ್ದ ಕೆಲ ಆರೋಗ್ಯ ಕಾರ್ಯಕರ್ತರು ಮೊಬೈಲ್ ಫೋನ್ ಬಿಟ್ಟು ಬಂದಿದ್ದರು. ‘ಲಸಿಕೆ ನೀಡುವಿಕೆಗೆ ಸಂಬಂಧಿಸಿದ ದೂರವಾಣಿ ಸಂದೇಶ ತೋರಿಸಿದಲ್ಲಿ ಮಾತ್ರ ಹೆಸರು ನೋಂದಾಯಿಸಿಕೊಳ್ಳಲಾಗುವುದು’ ಎಂದು ಸಿಬ್ಬಂದಿ ಸೂಚಿಸಿದ ಕಾರಣ ಮನೆಗೆ ತೆರಳಿದರು.

ಕೇಂದ್ರಕ್ಕೆ ವರದಿ ಸಲ್ಲಿಕೆ: ಲಸಿಕೆ ಪಡೆಯಲು ಬಂದವರ ದಾಖಲಾತಿ ಪರಿಶೀಲನೆ, ಲಸಿಕೆ ವಿತರಣೆ, ನಿಗಾ ವ್ಯವಸ್ಥೆ, ಪೋರ್ಟಲ್‌ನಲ್ಲಿ ಮಾಹಿತಿ ನಮೂದನೆ ಸೇರಿದಂತೆ ವಿವಿಧ ಪ್ರಕ್ರಿಯೆಯನ್ನು ಸಿಬ್ಬಂದಿ ಇಡೀ ದಿನ ನಡೆಸಿದರು. ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಭಾನುವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಂತಿಮ ವರದಿಯನ್ನು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಸಲ್ಲಿಸಲಿದ್ದಾರೆ.

ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಬೆಂಗಳೂರಿನ ಯಲಹಂಕದ ಸಾರ್ವಜನಿಕ ಆಸ್ಪತ್ರೆಗೆ ಭೇಟಿನೀಡಿ, ಲಸಿಕೆ ವಿತರಣೆ ಪ್ರಕ್ರಿಯೆಯನ್ನು ಪರಿಶೀಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲಸಿಕೆ ವಿತರಣೆಗೆ ರಾಜ್ಯ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿದೆ. ಲಸಿಕೆ ಹಾಕುವ ತಾಲೀಮಿನಿಂದ ಸಿಬ್ಬಂದಿಗೆ ತರಬೇತಿ ದೊರೆತಿದೆ. ಈ ಪೂರ್ವಾಭ್ಯಾಸವು ಅಧಿಕೃತವಾಗಿ ಲಸಿಕೆಯನ್ನು ಪರಿಚಯಿಸಿದ ಬಳಿಕ ಸಮಸ್ಯೆಯಾಗದಂತೆ ವಿತರಿಸಲು ನೆರವಾಗುತ್ತದೆ’ ಎಂದು ತಿಳಿಸಿದರು.

ಇಲಾಖೆಯ ಆರೋಗ್ಯ ವಿಭಾಗದ ಉಪನಿರ್ದೇಶಕಿ ಡಾ. ಮಮತಾ ಎಂ.ಎಸ್., ‘5 ಜಿಲ್ಲೆಗಳ ನಿಗದಿತ ಕೇಂದ್ರಗಳಲ್ಲಿ ತಾಲೀಮು ನಡೆದಿದೆ. ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳು ಮಾತ್ರ ಕಾಣಿಸಿಕೊಂಡಿವೆ’ ಎಂದರು.

‘ಈ ತಿಂಗಳು ಲಸಿಕೆ ಬರುವ ನಿರೀಕ್ಷೆ’
‘ಕೋವಿಡ್ ಲಸಿಕೆ ಜನವರಿಯಲ್ಲಿಯೇ ಬರುವ ನಿರೀಕ್ಷೆಯಿದೆ. ಆರೋಗ್ಯ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಒಂದು ಕೋಟಿ ಜನರಿಗೆ ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆ ನೀಡಲಿದೆ. ಉಳಿದವರಿಗೆ ಲಸಿಕೆ ನೀಡುವ ಬಗ್ಗೆ ಕೇಂದ್ರ ಸರ್ಕಾರವೇ ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ. ಲಸಿಕೆ ವಿತರಣೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸಾರ ನಡೆದುಕೊಳ್ಳುತ್ತೇವೆ’ ಎಂದು ಡಾ.ಕೆ. ಸುಧಾಕರ್ ತಿಳಿಸಿದರು.

‘ರಾಜ್ಯದಲ್ಲಿ 10 ಮಂದಿಗೆ ರೂಪಾಂತರಗೊಂಡ ವೈರಾಣು ದೃಢವಾಗಿದೆ. ಇನ್ನೂ 10 ಮಂದಿಯ ಮಾದರಿಯ ವರದಿಗಳು ಬರಬೇಕಿದೆ. ಹೊಸ ಮಾದರಿಯ ಸೋಂಕು ದೃಢಪಟ್ಟ 10 ಮಂದಿಯೂ ಆಸ್ಪತ್ರೆಯಲ್ಲಿ ಇದ್ದಾರೆ. ಅವರಲ್ಲಿ ಅಷ್ಟಾಗಿ ಲಕ್ಷಣಗಳು ಕಾಣಿಸಿಕೊಂಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT