ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ನೋಂದಣಿ ಮಾಡಿಕೊಂಡರೆ ಮಾತ್ರ ಲಸಿಕೆ

Last Updated 12 ಜನವರಿ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಹೆಸರು ನೋಂದಣಿ ಮಾಡಿಕೊಳ್ಳದವರಿಗೆ ಈಗ ಲಸಿಕೆ ವಿತರಿಸುವುದಿಲ್ಲ. ಲಸಿಕೆ ಪಡೆಯಲು ನೋಂದಣಿ ಕಡ್ಡಾಯ. ಅವರು ಮಾತ್ರ ನಿಗದಿತ ಕೇಂದ್ರಗಳಿಗೆ ತೆರಳಿ, ಲಸಿಕೆ ಪಡೆದುಕೊಳ್ಳಲು ಅವಕಾಶ ಇರುತ್ತದೆ’ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯಕ್ಕೆ ಕೋವಿಡ್‌ ಲಸಿಕೆ ಬಂದಿದ್ದು, ಮೊದಲ ಹಂತದಲ್ಲಿ ಕೋವಿಡ್ ಲಸಿಕೆಯನ್ನು ಆದ್ಯತೆಯ ಮೇರೆಗೆ ನೋಂದಾಯಿತ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುತ್ತದೆ.

‘ಲಸಿಕೆ ಲಭ್ಯತೆಯ ಆಧಾರದ ಮೇಲೆ 50 ವರ್ಷ ಮೇಲ್ಪಟ್ಟರಿಗೆ ಕೂಡ ಶೀಘ್ರದಲ್ಲಿಯೇ ವಿತರಿಸಲಾಗುತ್ತದೆ. ಈಗಾಗಲೇ ಲಸಿಕೆ ಪಡೆಯಲು ಹೆಸರು ನೋಂದಾಯಿಸಿ ಕೊಂಡ ಫಲಾನುಭವಿಗಳಿಗೆ ಲಸಿಕೆ ಪಡೆಯುವ ದಿನಾಂಕ, ಸಮಯ ಸೇರಿದಂತೆ ವಿವಿಧ ಮಾಹಿತಿಯನ್ನು ಅವರ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಲಸಿಕೆ ವಿತರಿಸುವಿಕೆ ಅಭಿಯಾನದಲ್ಲಿ ಗೊಂದಲ ಸೃಷ್ಟಿಯಾಗಬಾರದು ಎಂಬ ಕಾಣಕ್ಕೆ ಈ ವ್ಯವಸ್ಥೆ ರೂಪಿಸಲಾಗಿದೆ’ ಎಂದು ಇಲಾಖೆ ತಿಳಿಸಿದೆ.

ಪ್ರತಿಕಾಯ ಅಭಿವೃದ್ಧಿ: ‘ಕೋವಿಡ್ ಲಸಿಕೆ ಪಡೆದ ಬಳಿಕ ಕೂಡ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮುಖಗವಸು ಧರಿಸುವಿಕೆ, ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಸೋಂಕು ನಿವಾರಕ ದ್ರಾವಣದಿಂದ ಕೈಗಳನ್ನು ಸ್ವಚ್ಛಪಡಿಸಿಕೊಳ್ಳುವಿಕೆಯನ್ನು ಮುಂದುವರಿಸಬೇಕು. ಕೋವಿಡ್‌ ನಿಂದ ಚೇತರಿಸಿಕೊಂಡ ವ್ಯಕ್ತಿ ಕೂಡ ಲಸಿಕೆ ಪಡೆಯುವುದು ಸೂಕ್ತ. ರೋಗದ ವಿರುದ್ಧ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಲು ಇದು ಸಹಕಾರಿ ಯಾಗಲಿದೆ’ ಎಂದು ವಿವರಿಸಿದೆ.

‘ಕೋವಿಡ್ ಲಸಿಕೆಯನ್ನು +2ರಿಂದ +8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಿ, ಅಗತ್ಯ ತಾಪಮಾನದಲ್ಲಿ ಸಾಗಿಸಲಾಗುತ್ತದೆ. 26 ದಶಲಕ್ಷಕ್ಕೂ ಹೆಚ್ಚು ನವಜಾತ ಶಿಶುಗಳು ಮತ್ತು 29 ದಶಲಕ್ಷ ಗರ್ಭಿಣಿಯರಿಗೆ ಅಗತ್ಯ ಲಸಿಕೆಗಳನ್ನು ಪೂರೈಸುವ ಮೂಲಕ ದೇಶವು ವಿಶ್ವದ ಅತಿ ದೊಡ್ಡ ಲಸಿಕೆ ವಿತರಣೆ ಕಾರ್ಯಕ್ರಮವನ್ನು ನಡೆಸುತ್ತಿದೆ. ಹೀಗಾಗಿ ಕೋವಿಡ್‌ ಲಸಿಕೆಯ ಅಭಿಯಾನವನ್ನೂ ಯಶಸ್ವಿಯಾಗಿ ನಡೆಸಲಾಗುವುದು’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT