ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಲಸಿಕೆ ಅಭಾವ: ಉಳಿದಿರುವುದು ಎಷ್ಟು? ಇಲ್ಲಿದೆ ಮಾಹಿತಿ

Last Updated 6 ಮೇ 2021, 3:27 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಲಸಿಕೆ ಹಾಕಿಸಿಕೊಳ್ಳಲು ಜನರು ಉತ್ಸಾಹ ತೋರಿಸುತ್ತಿದ್ದಾರೆ. ಆದರೆ, ಈಗ ಲಸಿಕೆಗೆ ಅಭಾವ ಉಂಟಾಗಿದೆ.

18 ವರ್ಷ ದಾಟಿದವರಿಗೆ ಲಸಿಕೆ ನೀಡುವ ಉದ್ದೇಶದಿಂದ 2 ಕೋಟಿ ಡೋಸ್‌ ಕೋವಿಶೀಲ್ಡ್‌ ಖರೀದಿಗೆ ವಾರದ ಹಿಂದೆಯೇ ಉತ್ಪಾದಕ ಕಂಪನಿಗೆ ಸರ್ಕಾರ ಹಣ ಪಾವತಿಸಿದೆ. ಆದರೆ, ಅದರಲ್ಲಿ ಈವರೆಗೆ ಕೇವಲ 3 ಲಕ್ಷ ಮಾತ್ರ ಸರಬರಾಜು ಆಗಿದೆ. ಹೀಗಾಗಿ, ಬೆಂಗಳೂರಿನಲ್ಲಿ ಮಾತ್ರ 18ರಿಂದ 44 ವರ್ಷದ 5,136 ಜನರಿಗೆ ಲಸಿಕೆ ಹಾಕಲಾಗಿದೆ.

‘ಯುವ ಸಮೂಹಕ್ಕೆ ಲಸಿಕೆ ನೀಡುವ ಉದ್ದೇಶದಿಂದ ಸೋಮವಾರ (ಮೇ 3) ಮತ್ತೆ 1 ಕೋಟಿ ಕೋವ್ಯಾಕ್ಸಿನ್‌ ಡೋಸ್‌ ಖರೀದಿಸಲು ಸರ್ಕಾರ ಉತ್ಪಾದಕ ಕಂಪನಿಗೆ ಹಣ ಪಾವತಿಸಿದೆ. ಹೀಗೆ, ಈವರೆಗೆ ಒಟ್ಟು 3 ಕೋಟಿ ಡೋಸ್‌ ಕೋವಿಡ್‌ ಲಸಿಕೆ ಖರೀದಿಗೆ ಹಣ ಪಾವತಿಸಲಾಗಿದೆ. ಆದರೆ, ಕೇವಲ 3 ಲಕ್ಷ ಕೋವಿಶೀಲ್ಡ್‌ ಮಾತ್ರ ಪೂರೈಕೆ ಆಗಿದೆ. ಸದ್ಯ ಅದನ್ನು ಮಾತ್ರ 18 ವರ್ಷ ದಾಟಿದವರಿಗೆ ನೀಡುತ್ತಿದ್ದೇವೆ’ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್‌ ಮಾಹಿತಿ ನೀಡಿದರು.

‘ಮುಂದಿನ ವಾರದಲ್ಲಿ ಸುಮಾರು 7 ಲಕ್ಷ ಕೋವಿ ಶೀಲ್ಡ್‌ ಕಳುಹಿಸುವುದಾಗಿ ಕಂಪನಿಯವರು ಭರವಸೆ ನೀಡಿದ್ದಾರೆ. ಕೋವ್ಯಾಕ್ಸಿನ್‌ಗೆ ₹ 400, ಕೋವಿಶೀಲ್ಡ್‌ಗೆ ₹ 300 ದರ ನೀಡಿ ಸರ್ಕಾರ ಖರೀದಿಸುತ್ತಿದೆ. 45 ವರ್ಷ ದಾಟಿದವರಿಗೆ ನೀಡಲು ಕೇಂದ್ರ ಸರ್ಕಾರ ಸೋಮವಾರ 5 ಲಕ್ಷ ಕೋವಿಶೀಲ್ಡ್‌ ಪೂರೈಸಿದೆ. ಜಿಲ್ಲೆಗಳಲ್ಲಿ ಈಗಾಗಲೇ ಲಸಿಕೆ ಪಡೆದವರ ಸರಾಸರಿ ಆಧರಿಸಿ, ಬಂದ ಡೋಸ್‌ಗಳನ್ನು ವಿವಿಧ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಕೋವ್ಯಾಕ್ಸಿನ್‌ ಲಸಿಕೆ 2–3 ದಿನಗಳಲ್ಲಿ ಪೂರೈಕೆ ಆಗಬಹುದು’ ಎಂದರು.

‘ನಮ್ಮಲ್ಲಿ ಸದ್ಯ 5.75 ಲಕ್ಷ ಕೋವಿಶೀಲ್ಡ್ ಲಸಿಕೆ ಇದೆ. ಕೋವ್ಯಾಕ್ಸಿನ್‌ ಕೇವಲ 30 ಸಾವಿರ ಡೋಸ್‌ ಮಾತ್ರ ಇದೆ. ಆರಂಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನರು ನಿರುತ್ಸಾಹ ತೋರಿಸಿದ್ದರು. ಈಗ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿದ್ದಾರೆ. ಉತ್ಪಾದಕ ಕಂಪನಿಗಳು ಸರ್ಕಾರಿ ವಲಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆ ಮಾಡದೇ ಇರುವುದರಿಂದ ಸಮಸ್ಯೆ ಆಗಿದೆ. 3 ದಿನಗಳಿಗೊಮ್ಮೆ ಕೇಂದ್ರದಿಂದ 4 ಲಕ್ಷದಿಂದ 5 ಲಕ್ಷ ಡೋಸ್‌ ಪೂರೈಕೆ ಆಗುತ್ತಿದೆ. ಆರೋಗ್ಯ ಇಲಾಖೆಯಿಂದ ಗುರುತಿಸಿದ್ದ ಖಾಸಗಿ ಲಸಿಕಾ ಕೇಂದ್ರಗಳಿಗೆ ಈವರೆಗೆ ಸರ್ಕಾರಕ್ಕೆ ಬಂದ ಡೋಸ್‌ಗಳನ್ನೇ ಕಳುಹಿಸುತ್ತಿದ್ದೆವು. ಇನ್ನು ಮುಂದೆ ಖಾಸಗಿಯವರು ನೇರವಾಗಿ ಉತ್ಪಾದಕ ಕಂಪನಿಗಳಿಂದ ಖರೀದಿಸಿ ಲಸಿಕೆ ವಿತರಿಸಬೇಕು’ ಎಂದರು.

ಲಸಿಕೆ ಅಭಾವದಿಂದ 18ರಿಂದ 44 ವಯೋಮಾನದವರಿಗೆ ಲಸಿಕೆ ನೀಡುವ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ. ಮೇ 2ನೇ ವಾರದಲ್ಲಿ 15 ಲಕ್ಷ ಡೋಸ್‌ ಲಸಿಕೆ ಬರುವ ನಿರೀಕ್ಷೆಯಿದೆ ಎಂದುಕೋವಿಡ್‌ ಕಾರ್ಯಪಡೆ ಅಧ್ಯಕ್ಷ ಡಾ.ಸಿ.ಎನ್‌. ಆಶ್ವತ್ಥನಾರಾಯಣ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT