ಭಾನುವಾರ, ಜನವರಿ 17, 2021
18 °C

ರಾಜ್ಯಕ್ಕೆ 20 ಸಾವಿರ ಡೋಸ್ ಕೋವ್ಯಾಕಿನ್ಸ್: ಡಾ.ಕೆ. ಸುಧಾಕರ್ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜ್ಯಕ್ಕೆ ಶೀಘ್ರದಲ್ಲಿಯೇ 20 ಸಾವಿರ ಡೋಸ್‌ಗಳು ‘ಕೋವ್ಯಾಕ್ಸಿನ್‌’ ಲಸಿಕೆ ಬರಲಿದೆ. ಆದರೆ, ಲಸಿಕೆ ಪಡೆಯುವವರು ತಮಗೆ ಇದೇ ಲಸಿಕೆ ಬೇಕೆಂದು ಬೇಡಿಕೆ ಮಂಡಿಸುವಂತಿಲ್ಲ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಈಗಾಗಲೇ ಮೊದಲ ಹಂತದಲ್ಲಿ ಕೇಂದ್ರ ಸರ್ಕಾರವು ‘ಕೋವಿಶೀಲ್ಡ್‌’ ಲಸಿಕೆಯನ್ನು ಪುಣೆಯಿಂದ ಬೆಂಗಳೂರಿಗೆ 6.48 ಲಕ್ಷ ಡೋಸ್‌ ಹಾಗೂ ಬೆಳಗಾವಿಗೆ 1.47 ಲಕ್ಷ ಡೋಸ್ ಕಳುಹಿಸಿದೆ. ದೇಶದಲ್ಲಿ ‘ಕೋವಿಶೀಲ್ಡ್‌’ ಮತ್ತು ‘ಕೋವ್ಯಾಕ್ಸಿನ್’ ಲಸಿಕೆ ವಿರಣೆಗೆ ಅನುಮತಿ ದೊರೆತಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ. ಸುಧಾಕರ್, ‘ಕೋವ್ಯಾಕ್ಸಿನ್‌ ಲಸಿಕೆಯು ಒಂದು ಬಾಟಲಿಯಲ್ಲಿ 10 ಎಂಎಲ್ ಇರುತ್ತದೆ. ಕೋವಿಶೀಲ್ಡ್‌ ಲಸಿಕೆಯು ಒಂದು ಬಾಟಲಿಯಲ್ಲಿ 5 ಎಂಎಲ್ ಇದೆ. ಕೋವ್ಯಾಕ್ಸಿನ್‌ನ ಒಂದು ಬಾಟಲಿಯಿಂದ 20 ಮಂದಿಗೆ ಲಸಿಕೆ ನೀಡಬಹುದು. ಎರಡು ಲಸಿಕೆಗಳ ನಡುವೆ ಬೇರೆ ಯಾವುದೇ ವ್ಯತ್ಯಾಸವಿಲ್ಲ. ಫಲಿತಾಂಶ ಕೂಡ ಒಂದೇ ರೀತಿ ಇರಲಿದೆ. ರಾಜ್ಯದಲ್ಲಿ ಇವೆರಡೂ ಲಸಿಕೆಗಳನ್ನು ನೀಡಲಾಗುವುದು’ ಎಂದರು.

‘ಯಾವ ಜಿಲ್ಲೆಗಳಿಗೆ ಎಷ್ಟು ಲಸಿಕೆ ನೀಡಬೇಕು, ಯಾವ ಸಿಬ್ಬಂದಿಗೆ ನೀಡಬೇಕು ಸೇರಿದಂತೆ ವಿವಿಧ ಪ್ರಕ್ರಿಯೆಗಳ ಬಗ್ಗೆ ಕೇಂದ್ರ ಸರ್ಕಾರವು ಸೂಚನೆ ನೀಡಿದೆ. ಇದೇ 16 ರಿಂದ ಲಸಿಕೆ ವಿತರಣೆ ಅಭಿಯಾನ ಪ್ರಾರಂಭಿಸುವುದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಎಲ್ಲ ಜಿಲ್ಲೆಗಳಿಗೆ ಲಸಿಕೆ ಪೂರೈಕೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ಇದೇ 16ರಿಂದ ಲಸಿಕೆ ವಿತರಣೆ

ಇದೇ 16ರಿಂದ ಕೋವಿಡ್‌ ಲಸಿಕೆ ವಿತರಣೆ ಅಭಿಯಾನ ಪ್ರಾರಂಭವಾಗಲಿದ್ದು, ರಾಜ್ಯಕ್ಕೆ ಮೊದಲ ಹಂತದಲ್ಲಿ ಬಂದಿರುವ ಲಸಿಕೆಗಳನ್ನು ಜಿಲ್ಲಾವಾರು ಹಂಚಿಕೆ ಮಾಡಲಾಗಿದೆ.

ರಾಜ್ಯಕ್ಕೆ ಈವರೆಗೆ 7,94,500 ಡೋಸ್‌ ‘ಕೋವಿಶೀಲ್ಡ್‌’ ಲಸಿಕೆಯನ್ನು ಕೇಂದ್ರ ಸರ್ಕಾರ ಕಳುಹಿಸಿದೆ. ಬೆಂಗಳೂರು ಹಾಗೂ ಬೆಳಗಾವಿಯಲ್ಲಿನ ರಾಜ್ಯ ಮಟ್ಟದ ದಾಸ್ತಾನು ಕೇಂದ್ರಗಳಲ್ಲಿ ಇರಿಸಲಾಗಿದ್ದ ಲಸಿಕೆಯನ್ನು ಜಿಲ್ಲಾ ಮಟ್ಟದ ದಾಸ್ತಾನು ಕೇಂದ್ರಗಳಿಗೆ ಲಾಜಿಸ್ಟಿಕ್ ವಾಹನಗಳ ನೆರವಿನಿಂದ ಬುಧವಾರ ರವಾನಿಸಲಾಗಿದೆ. ನೋಂದಾಯಿತ ಆರೋಗ್ಯ ಕಾರ್ಯಕರ್ತರ ಅನುಸಾರ ಬಿಬಿಎಂಪಿಗೆ ಗರಿಷ್ಠ (1.05 ಲಕ್ಷ) ಹಾಗೂ ಯಾದಗಿರಿಗೆ ಕನಿಷ್ಠ (3 ಸಾವಿರ) ಡೋಸ್‌ಗಳು ಹಂಚಿಕೆಯಾಗಿವೆ.

ಸದ್ಯ ರಾಜ್ಯಕ್ಕೆ ನೀಡಿರುವ ಲಸಿಕೆ ಪೈಕಿ ಇಲ್ಲಿರುವ ಕೇಂದ್ರ ಸರ್ಕಾರದ ಆರೋಗ್ಯ ಸಿಬ್ಬಂದಿಗೆ 15,730 ಡೋಸ್, ರಾಜ್ಯ ಸರ್ಕಾರದ ಆರೋಗ್ಯ ಕಾರ್ಯಕರ್ತರಿಗೆ 7,75,400 ಡೋಸ್ ಹಾಗೂ ಸೇನಾ ವೈದ್ಯಕೀಯ ಸಿಬ್ಬಂದಿಗೆ 2,580 ಡೋಸ್ ಎಂದು ವಿಂಗಡಣೆ ಮಾಡಲಾಗಿದೆ. ಪ್ರತಿ ವ್ಯಕ್ತಿಗೆ 0.5 ಎಂಎಲ್‌ನ ಒಂದು ಡೋಸ್‌ ಲಸಿಕೆಯನ್ನು ನೀಡಲಾಗುತ್ತದೆ. 28 ದಿನಗಳ ಬಳಿಕೆ ಎರಡನೇ ಡೋಸ್ ಲಸಿಕೆಯನ್ನು ವಿತರಿಸಲಾಗುತ್ತದೆ.

ಆರೋಗ್ಯ ಕಾರ್ಯಕರ್ತರಿಗೆ ಅನುಸಾರ ಬೆಂಗಳೂರು ಮತ್ತು ಬೆಳಗಾವಿಯ ರಾಜ್ಯಮಟ್ಟದ ದಾಸ್ತಾನು ಕೇಂದ್ರಗಳಿಂದ ಲಸಿಕೆಯನ್ನು ಪ್ರಾದೇಶಿಕ ದಾಸ್ತಾನು ಕೇಂದ್ರಗಳಿಗೆ ರವಾನಿಸಲಾಗಿದೆ. ಅಲ್ಲಿಂದ ಲಸಿಕೆಯನ್ನು ಜಿಲ್ಲಾ ಮಟ್ಟದ ದಾಸ್ತಾನು ಕೇಂದ್ರಗಳಿಗೆ ಸಾಗಾಟ ಮಾಡಿ, ದಾಸ್ತಾನು ಮಾಡಲಾಗಿದೆ. ರಾಜ್ಯದಲ್ಲಿ 2,767 ಕೋಲ್ಡ್‌ ಚೈನ್‌ ಪಾಯಿಂಟ್‌ಗಳನ್ನು ಗುರುತಿಸಲಾಗಿದ್ದು, ಈ ಕೇಂದ್ರಗಳಲ್ಲಿ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

‘ದೃಶ್ಯ ಕೈಬಿಡಲು ಮನವಿ’

‘ಚಿತ್ರನಟ ಯಶ್ ಅವರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಅವರ ಮೇಲೆ ನನಗೂ ಅಭಿಮಾನವಿದೆ. ಅವರ ಹೊಸ ಸಿನಿಮಾದಲ್ಲಿನ ಸಿಗರೇಟ್ ಸೇದುವ ದೃಶ್ಯವನ್ನು ಕೈಬಿಡುವಂತೆ ಇಲಾಖೆಯಿಂದ ಮನವಿ ಮಾಡಲಾಗಿದೆ. ಆದರೆ, ಇದು ನೋಟಿಸ್ ಅಲ್ಲ. ನಿಗದಿತ ದೃಶ್ಯವನ್ನು ತೆಗೆದುಹಾಕಿದಲ್ಲಿ ಸಮಾಜಕ್ಕೆ ಅನುಕೂಲ. ಯಶ್ ಅವರ ಅಭಿಮಾನಿಗಳಲ್ಲಿ ಅನೇಕ ಯುವಜನರು ಇದ್ದಾರೆ. ಇದು ಎಲ್ಲ ಚಿತ್ರಗಳಿಗೂ ಅನ್ವಯವಾಗುತ್ತದೆ’ ಎಂದು ಸುಧಾಕರ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು