ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೋವ್ಯಾಕ್ಸಿನ್’: ರಾಜ್ಯಕ್ಕೆ ತಲುಪಿದ 1.46 ಲಕ್ಷ ಡೋಸ್

Last Updated 23 ಜನವರಿ 2021, 19:19 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರವು ರಾಜ್ಯಕ್ಕೆ ಶನಿವಾರ ಎರಡನೇ ಬ್ಯಾಚ್‌ನಲ್ಲಿ 1,46,240 ಡೋಸ್ ‘ಕೋವ್ಯಾಕ್ಸಿನ್’ ಲಸಿಕೆಯನ್ನು ಕಳುಹಿಸಿದೆ. ಈವರೆಗೆ ರಾಜ್ಯಕ್ಕೆ ಒಟ್ಟು 15.52 ಲಕ್ಷ ಡೋಸ್‌ ಲಸಿಕೆ ಬಂದಿದೆ.

ರಾಜ್ಯದಾದ್ಯಂತ ಕೋವಿಡ್‌ ಲಸಿಕೆ ಅಭಿಯಾನವು ನಡೆಯುತ್ತಿದ್ದು, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. 7 ಲಕ್ಷಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಮೊದಲ ಬ್ಯಾಚ್‌ನಲ್ಲಿ ಕೇಂದ್ರ ಸರ್ಕಾರವು ‘ಕೋವಿಶೀಲ್ಡ್‌’ ಲಸಿಕೆಯನ್ನು 1.47 ಲಕ್ಷ ಡೋಸ್‌ ಬೆಳಗಾವಿಗೆ ಹಾಗೂ 6,47,500 ಡೋಸ್‌ ಬೆಂಗಳೂರಿಗೆ ಕಳುಹಿಸಿತ್ತು. ಆರೋಗ್ಯ ಕಾರ್ಯಕರ್ತರ ಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಲಾಗಿತ್ತು. ಅದೇ ರೀತಿ, 20 ಸಾವಿರ ಡೋಸ್‌ ‘ಕೋವ್ಯಾಕ್ಸಿನ್‌’ ಲಸಿಕೆಯನ್ನು ಹೈದರಾಬಾದ್‌ನ ಭಾರತ್ ಬಯೋಟೆಕ್‌ ಕಂಪನಿಯು ಕೇಂದ್ರ ಸರ್ಕಾರದ ಸೂಚನೆ ಅನುಸಾರ ಮೊದಲ ಬ್ಯಾಚ್‌ನಲ್ಲಿ ಕಳುಹಿಸಿತ್ತು.

ಎರಡನೇ ಬ್ಯಾಚ್‌ನಲ್ಲಿ ರಾಜ್ಯಕ್ಕೆ 7,57,500 ಡೋಸ್‌ ‘ಕೋವಿಶೀಲ್ಡ್‌’ ಲಸಿಕೆಯು ರಾಜ್ಯಕ್ಕೆ ಬಂದಿದೆ. ಬೆಂಗಳೂರಿನ ದಾಸ್ತಾನು ಕೇಂದ್ರದಲ್ಲಿ 5.94 ಲಕ್ಷ ಡೋಸ್ ಹಾಗೂ ಬೆಳಗಾವಿಯ ದಾಸ್ತಾನು ಕೇಂದ್ರದಲ್ಲಿ 1.63 ಲಕ್ಷ ಡೋಸ್ ಇರಿಸಿ, ಜಿಲ್ಲಾವಾರು ಹಂಚಿಕೆ ಮಾಡಲಾಗಿದೆ. ಎರಡನೇ ಬ್ಯಾಚ್‌ನಲ್ಲಿ ಬಂದಿರುವ ‘ಕೋವ್ಯಾಕ್ಸಿನ್‌’ ಲಸಿಕೆಯನ್ನು ಬೆಂಗಳೂರಿನ ದಾಸ್ತಾನು ಕೇಂದ್ರದಲ್ಲಿ ಇರಿಸಲಾಗಿದೆ. ಅದೇ ರೀತಿ, ಕೇಂದ್ರ ಸರ್ಕಾರವು ಮೊದಲ ಬ್ಯಾಚ್‌ನಲ್ಲಿ 24 ಲಕ್ಷ ಸಿರಿಂಜ್‌ಗಳನ್ನು ಇಲ್ಲಿಗೆ ಕಳುಹಿಸಿತ್ತು. ಈಗ ಎರಡನೇ ಬ್ಯಾಚ್‌ನಲ್ಲಿ 31 ಲಕ್ಷ ಸಿರಿಂಜ್‌ಗಳು ರಾಜ್ಯ ತಲುಪಿವೆ.

ಶೇ 36ರಷ್ಟು ಮಂದಿ ಹಾಜರಿ: ಕೋವಿಡ್ ಲಸಿಕೆ ವಿತರಣೆ ಅಭಿಯಾದ 8ನೇ ದಿನವಾದ ಶನಿವಾರ ಬೆಂಗಳೂರಿನಲ್ಲಿ ಮಾತ್ರ ಲಸಿಕೆ ವಿತರಣೆ ನಡೆದಿದೆ. 107 ಕೇಂದ್ರಗಳಿಂದ 10,065 ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಅದರಲ್ಲಿ 3,699 ಮಂದಿ ಮಾತ್ರ ಕೇಂದ್ರಗಳಿಗೆ ಹಾಜರಾಗಿ ಲಸಿಕೆ ಪಡೆದುಕೊಂಡಿದ್ದಾರೆ. ಉಳಿದವರು ನಾನಾ ಕಾರಣಗಳಿಂದ ಗೈರಾಗಿದ್ದಾರೆ. ಲಸಿಕೆ ಪಡೆದವರಲ್ಲಿ ಯಾರಿಗೂ ತೀವ್ರ ಮತ್ತು ಗಂಭೀರ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ವಿಮಾನ ನಿಲ್ದಾಣದ ಸಿಬ್ಬಂದಿಗೆ ಲಸಿಕೆ

ರಾಜ್ಯದಲ್ಲಿನ ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಬೇಕು ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಅಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಯನ್ನು ಕೋವಿಡ್‌ ಯೋಧರು ಎಂದು ಪರಿಗಣಿಸಿ, ಲಸಿಕೆ ನೀಡಬೇಕು. ಈ ಕುರಿತು ವಿಮಾನ ನಿಲ್ದಾಣ ವ್ಯಾಪ್ತಿಗೆ ಬರುವ ಜಿಲ್ಲಾ ಆರೋಗ್ಯಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT