ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೂರೇ ಪ್ರಕರಣ ಇದ್ದರೂ ಕ್ಲಸ್ಟರ್‌’–ಬಸವರಾಜ ಬೊಮ್ಮಾಯಿ

ನಿರ್ಬಂಧ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚನೆ: ಸಿ.ಎಂ
Last Updated 4 ಡಿಸೆಂಬರ್ 2021, 20:00 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ಕೋವಿಡ್‌ ಪ್ರಕರಣಗಳು ಪತ್ತೆಯಾಗುವ ಎಲ್ಲ ಸ್ಥಳಗಳನ್ನೂ ‘ಕೋವಿಡ್‌ ಕ್ಲಸ್ಟರ್‌’ ಎಂಬುದಾಗಿ ಘೋಷಿಸಿ, ಕಠಿಣ ನಿರ್ಬಂಧ ಕ್ರಮಗಳನ್ನು ಜಾರಿಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಈ ಹಿಂದೆ ಹತ್ತು ಕೋವಿಡ್‌ ಪ್ರಕರಣಗಳು ಒಂದೇ ಕಡೇ ಪತ್ತೆಯಾದರೆ ಮಾತ್ರ ಕ್ಲಸ್ಟರ್‌ ಎಂದು ಘೋಷಿಸಲಾಗುತ್ತಿತ್ತು. ಈಗ ಮೂರು ಪ್ರಕರಣಗಳಿರುವ ಪ್ರದೇಶವನ್ನು ಕ್ಲಸ್ಟರ್‌ ಎಂದು ಪರಿಗಣಿಸಿ, ಅಲ್ಲಿರುವ ಎಲ್ಲರನ್ನೂ ಪರೀಕ್ಷಿಸಲಾಗುವುದು. ಕೋವಿಡ್‌ ದೃಢಪಟ್ಟವರಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗುವುದು. ಎಲ್ಲರಿಗೂ ಕೋವಿಡ್‌ ಲಸಿಕೆ ನೀಡಲಾಗುವುದು’ ಎಂದರು.

ರಾಜ್ಯದ ವಿವಿಧೆಡೆ ಶಾಲೆ, ಕಾಲೇಜು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿವೆ. ಇಂತಹ ಕ್ಲಸ್ಟರ್‌ಗಳಲ್ಲಿ ಬಿಗಿಯಾದ ನಿರ್ಬಂಧಗಳನ್ನು ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಕ್ಲಸ್ಟರ್‌ಗಳ ನಿರ್ವಹಣೆಯೇ ಸರ್ಕಾರದ ಮುಂದಿರುವ ದೊಡ್ಡ ಸವಾಲು ಎಂದು ಹೇಳಿದರು.

ಪ್ರವೇಶ ನಿರ್ಬಂಧ: ಬೆಂಗಳೂರಿನಲ್ಲಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ಹೊರಗಿನ ವ್ಯಕ್ತಿಗಳ ಪ್ರವೇಶ ನಿರ್ಬಂಧಿಸಲು ಸೂಚಿಸಲಾಗಿದೆ. ಎರಡು ಡೋಸ್‌ ಲಸಿಕೆ ಪಡೆದಿರುವವರು ಮಾತ್ರ ಅಲ್ಲಿ ಗುಂಪು ಸೇರಬಹುದು. ಲಸಿಕೆ ಪಡೆಯದವರು ಮತ್ತು ಹೊರಗಿನವರು ಗುಂಪುಗೂಡದಂತೆ ಕ್ರಮವಹಿಸಲಾಗುವುದು ಎಂದರು.

ಅಧಿವೇಶನಕ್ಕೆ ಮುನ್ನೆಚ್ಚರಿಕೆ ಕ್ರಮ: ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೇ ನಡೆಯಲಿದೆ. ಕೋವಿಡ್‌ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಅಧಿವೇಶನ ನಡೆಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಅಧಿವೇಶನಕ್ಕೆ ಮುನ್ನೆಚ್ಚರಿಕೆ ಕ್ರಮ

ವಿಧಾನಮಂಡಲದ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೇ ನಡೆಯಲಿದೆ. ಕೋವಿಡ್‌ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಅಧಿವೇಶನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಭಯ ಬೇಡ, ಎಚ್ಚರದಿಂದಿರಿ’

ಬೆಂಗಳೂರು: ‘ಕೊರೊನಾ ವೈರಾಣುವಿನ ರೂಪಾಂತರಿ ತಳಿಯಾದ ಓಮೈಕ್ರಾನ್ ನನಗೆ ಅಷ್ಟಾಗಿ ಬಾಧಿಸಿಲ್ಲ. ವಿಶೇಷ ಚಿಕಿತ್ಸೆ ಇಲ್ಲದೆಯೇ ಚೇತರಿಸಿಕೊಂಡಿದ್ದೇನೆ. ಅನಗತ್ಯವಾಗಿ ಭಯಕ್ಕೆ ಒಳಗಾಗುವುದು ಸರಿಯಲ್ಲ.’

ಇವು ಓಮೈಕ್ರಾನ್ ತಳಿಯ ಸೋಂಕಿಗೆ ಒಳಗಾದ 46 ವರ್ಷದ ವ್ಯಕ್ತಿಯ ಅನುಭವದ ಮಾತು. ವೃತ್ತಿಯಲ್ಲಿ ವೈದ್ಯರಾದ ಅವರಿಗೆ ನ.21ರಂದು ಜ್ವರ, ಮೈ–ಕೈನೋವು ಕಾಣಿಸಿಕೊಂಡಿತ್ತು. ವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆಯಿಂದ (ಜೀನೋಮ್‌ ಸೀಕ್ವೆನ್ಸಿಂಗ್‌) ಓಮೈಕ್ರಾನ್‌ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅವರು ಈಗ ಚೇತರಿಸಿಕೊಂಡಿದ್ದು, ಇಲ್ಲಿನ ಬೌರಿಂಗ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಸದಲ್ಲಿದ್ದಾರೆ.

‘ನಾನು ಇತ್ತೀಚೆಗೆ ವಿದೇಶಿ ಪ್ರವಾಸ ಕೈಗೊಂಡಿಲ್ಲ. ಆದರೂ ಈ ವೈರಾಣು ನನ್ನಲ್ಲಿ ಪತ್ತೆಯಾಯಿತು. ಇದು ತಿಳಿಯುವಷ್ಟರಲ್ಲಿಯೇ ರೋಗ ಲಕ್ಷಣಗಳು ಬಹುತೇಕ ವಾಸಿಯಾಗಿದ್ದವು. ಹೀಗಾಗಿ, ಗಾಬರಿ ಆಗಲಿಲ್ಲ. ನಾನು ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದೆ. ಇದರಿಂದಾಗಿಯೂ ಕಾಯಿಲೆಯ ತೀವ್ರತೆ ಕಡಿಮೆ ಆಗಿರಬಹುದು’ ಎಂದು ಹೇಳಿದರು.

ಅವರ ಪತ್ನಿ ಮತ್ತು ಮಕ್ಕಳೂ ಕೋವಿಡ್ ಪೀಡಿತರಾಗಿದ್ದಾರೆ. ಅವರ ಗಂಟಲದ್ರವದ ಮಾದರಿಗಳನ್ನು ವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆ ಪರೀಕ್ಷೆಗೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT