ಮಂಗಳವಾರ, ಜನವರಿ 18, 2022
23 °C

ರಾಜ್ಯದಲ್ಲಿ ಕೋವಿಡ್ ಉಲ್ಬಣ: ಶಾಲಾ–ಕಾಲೇಜುಗಳ ಕಾರ್ಯಕ್ರಮಗಳಿಗೆ ಬ್ರೇಕ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಧಾರವಾಡ, ಬೆಂಗಳೂರು ಸೇರಿದಂತೆ ವಿವಿಧೆಡೆ ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿರುವುದರಿಂದ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಶಾಲಾ– ಕಾಲೇಜುಗಳಲ್ಲಿ ಮುಂದೂಡುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. 

ಈ ಬಗ್ಗೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ. ‘ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ, ವೈದ್ಯಕೀಯ ಸೇರಿದಂತೆ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರತಿನಿತ್ಯ ಕೋವಿಡ್ ತಪಾಸಣೆ ನಡೆಸಬೇಕು. ಸೋಂಕು ದೃಢಪಟ್ಟಲ್ಲಿ ಕೋವಿಡ್ ಮಾರ್ಗಸೂಚಿ ಅನುಸಾರ ಚಿಕಿತ್ಸೆ ಒದಗಿಸಬೇಕು’ ಎಂದು ತಿಳಿಸಿದ್ದಾರೆ. 

‘ಸಮ್ಮೇಳನ, ವಿಚಾರ ಸಂಕಿರಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಬೇಕಾದ ಅಗತ್ಯವಿದ್ದಲ್ಲಿ ‘ಹೈಬ್ರಿಡ್’ ಮಾದರಿ (ಸೀಮಿತ ಜನರಿಗೆ ಅವಕಾಶ) ಅನುಸರಿಸಬೇಕು. ಆನ್‌ಲೈನ್ ವೇದಿಕೆಗಳ ಮೂಲಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಹುದಾಗಿದೆ. 18 ವರ್ಷಗಳು ಮೇಲ್ಪಟ್ಟ ಎಲ್ಲ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಎರಡೂ ಡೋಸ್ ಲಸಿಕೆ ಪಡೆದಿರುವ ಬಗ್ಗೆ ಶಿಕ್ಷಣ ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು. ಆದಷ್ಟು ಬೇಗ ಎಲ್ಲರೂ ಲಸಿಕೆ ಪಡೆಯಲು ಕ್ರಮವಹಿಸಬೇಕು’ ಎಂದು ಹೇಳಿದ್ದಾರೆ. 

‘ಕೇರಳ, ಮಹಾರಾಷ್ಟ್ರದಿಂದ ಬರುವವರು 72 ಗಂಟೆಗಳ ಅವಧಿ ಮೀರಿರದ ಕೋವಿಡ್ ಆರ್‌ಟಿ–ಪಿಸಿಆರ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಕಳೆದ 15 ದಿನಗಳ ಅವಧಿಯಲ್ಲಿ ಕೇರಳದಿಂದ ಬಂದಿರುವ ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆಗೆ ಒಳಪಡಬೇಕು. ಅಲ್ಲಿಂದ ಈಗ ಬಂದ ವಿದ್ಯಾರ್ಥಿಗಳಿಗೆ 7 ದಿನಗಳ ಬಳಿಕ ಮತ್ತೊಮ್ಮೆ ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಬೇಕು. ಅಧಿಕ ಕೋವಿಡ್ ಪ್ರಕರಣಗಳು ಪತ್ತೆಯಾದ ಶಿಕ್ಷಣ ಸಂಸ್ಥೆಗಳಲ್ಲಿ ಸೋಂಕಿತರಾಗಿರದ ವಿದ್ಯಾರ್ಥಿಗಳನ್ನೂ ಕ್ವಾರಂಟೈನ್‌ಗೆ ಒಳಪಡಿಸಿ, 7 ದಿನಗಳ ಬಳಿಕ ಮತ್ತೊಮ್ಮೆ ‍ಪರೀಕ್ಷೆ ನಡೆಸಬೇಕು’ ಎಂದು ಸೂಚಿಸಿದ್ದಾರೆ. 

ಕಟ್ಟೆಚ್ಚರ: ‘ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ಎಲ್ಲರನ್ನೂ ಕಟ್ಟುನಿಟ್ಟಾಗಿ ತಪಾಸಣೆ ನಡೆಸಬೇಕು. ಶಿಕ್ಷಣ, ವ್ಯಾಪಾರ– ವ್ಯವಹಾರದ ಸಂಬಂಧ ಕೇರಳದಿಂದ ಇಲ್ಲಿಗೆ ಪ್ರತಿನಿತ್ಯ ಬರುವವರು ಕೋವಿಡ್‌ ಆರ್‌ಟಿ– ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರಬೇಕು. ಒಮ್ಮೆ ನಡೆಸಲಾದ ಪರೀಕ್ಷೆಯ ವರದಿಯನ್ನು 14 ದಿನಗಳವರೆಗೆ ಗಡಿಯಲ್ಲಿ ಹಾಜರುಪಡಿಸಬಹುದು’ ಎಂದಿದ್ದಾರೆ.

ಮುಚ್ಚಳಿಕೆ ಬರೆಸಿಕೊಂಡು ಲಸಿಕೆ ಪಡೆದ!

ಹುಬ್ಬಳ್ಳಿ: ‘ಕೋವಿಡ್‌ ಲಸಿಕೆಯಿಂದ ಆರೋಗ್ಯಕ್ಕೇನಾದರೂ ಸಮಸ್ಯೆಯಾದರೆ ನಾವೇ ಜವಾಬ್ದಾರಿ’ ಎಂದು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪಂಚಾಯ್ತಿ ವ್ಯಕ್ತಿಯೊಬ್ಬರಿಗೆ ಮುಚ್ಚಳಿಕೆ ಬರೆದುಕೊಟ್ಟು ಕೋವ್ಯಾಕ್ಸಿನ್‌ ಲಸಿಕೆ ನೀಡಿದ ಅಪರೂಪದ ಪ್ರಕರಣ ಭಾನುವಾರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ಸಭಾಭವನದಲ್ಲಿ ನಡೆಯಿತು.


ಹುಬ್ಬಳ್ಳಿ ಮಹಾನಗರ ಪಾಲಿಕೆ ಆಯುಕ್ತರ ಸಭಾಭವನದಲ್ಲಿ ಭಾನುವಾರ ಜಿಲ್ಲಾಡಳಿತದಿಂದ ಮುಚ್ಚಳಿಕೆ ಬರೆಸಿಕೊಂಡು ಕೋವಿಡ್‌ ಲಸಿಕೆ ಪಡೆದ ಯಲ್ಲಾಪುರ ಓಣಿಯ ಆನಂದ ಕೊನ್ನೂರಕರ. ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್, ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ, ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ಬಿ., ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಇದ್ದಾರೆ

ಲಸಿಕೆ ಪಡೆಯುವ ಕುರಿತು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ನೇತೃತ್ವದಲ್ಲಿ ಧಾರ್ಮಿಕ ಮುಖಂಡರ ಸಭೆ ಕರೆಯಲಾಗಿತ್ತು. ‘ಲಸಿಕೆ ಪಡೆಯುವ ಕುರಿತು ಭಯವಾಗುತ್ತಿದೆ. ಆರೋಗ್ಯದಲ್ಲಿ ಸಮಸ್ಯೆಯಾದರೆ ಯಾರು ಹೊಣೆ?’ ಎಂದು ಯಲ್ಲಾಪುರ ಓಣಿ ನಿವಾಸಿ ಆನಂದ ಕೊನ್ನೂರಕರ ಆತಂಕ ವ್ಯಕ್ತಪಡಿಸಿದರು.

‘ಕುಟುಂಬ ಸದಸ್ಯರು ಈಗಾಗಲೇ ಲಸಿಕೆ ಪಡೆದಿದ್ದಾರೆ. ನಾನು ಲಸಿಕೆ ಪಡೆದಾಗ ಹೆಚ್ಚು ಕಡಿಮೆಯಾದರೆ ಎನ್ನುವ ಭಯ ಕಾಡುತ್ತಿದೆ. ಏನಾದರೂ ಆದರೆ ಕುಟುಂಬದ ಕಥೆಯೇನು? ಜಿಲ್ಲಾಡಳಿತವೇ ಜವಾಬ್ದಾರಿ ವಹಿಸಿಕೊಳ್ಳುತ್ತದೆ ಎಂದು ಮುಚ್ಚಳಿಕೆ ಬರೆದುಕೊಡಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿ ಹೇಳುವ ಪ್ರಯತ್ನ ಪ್ರಯೋಜನವಾಗಿಲ್ಲ. ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್‌ ‘ಲಸಿಕೆಯಿಂದ ಅಡ್ಡ ಪರಿಣಾಮ ಅಥವಾ ದುಷ್ಪರಿಣಾಮ ಉಂಟಾದರೆ ನಾವು ಜವಾಬ್ದಾರಿ ವಹಿಸಿಕೊಳ್ಳುತ್ತೇವೆ’ ಎಂದು ಮುಚ್ಚಳಿಕೆ ಬರೆದು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾ ಅಧಿಕಾರಿ, ಉಪ ವಿಭಾಗಾಧಿಕಾರಿ ಸಹಿ ಜೊತೆ ತಮ್ಮ ಸಹಿ ಹಾಕಿ ನೀಡಿದರು. ಅಲ್ಲದೆ, ಅಲ್ಲಿಯೇ ಆನಂದ ಅವರಿಗೆ ಕೋವ್ಯಾಕ್ಸಿನ್‌ ಲಸಿಕೆ ಹಾಕಿದರು.

ಓಮಿಕ್ರಾನ್ ಆತಂಕ: ತೀವ್ರ ತಪಾಸಣೆ

ಕಲಬುರಗಿ: ಕೋವಿಡ್‌ನ ಹೊಸ ತಳಿ ಓಮಿಕ್ರಾನ್‌ ವೈರಾಣು ಸೃಷ್ಟಿಸಿರುವ ಆತಂಕದ ಹಿನ್ನೆಲೆಯಲ್ಲಿ ಭಾನುವಾರ ಕಲಬುರಗಿ ಮತ್ತು ಬೀದರ್ ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ.

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮೂರು ಗಡಿ ತಪಾಸಣಾ ಕೇಂದ್ರಗಳಲ್ಲಿ ಪೊಲೀಸರು ನೆರೆಯ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರ ವಾಹನಗಳ ತಪಾಸಣೆ ನಡೆಸಿದರು. ತಾಲ್ಲೂಕಿನ ಖಜೂರಿ, ಹಿರೋಳ್ಳಿ, ನಿಂಬಾಳ ಮತ್ತು ಮಾದನ ಹಿಪ್ಪರಗಿಯಲ್ಲಿ ಗಡಿ ತಪಾಸಣೆ ಕೇಂದ್ರಗಳನ್ನು ತೆರೆಯಲಾಗಿದೆ.

ಸೊಲ್ಲಾಪುರ, ಅಕ್ಕಲಕೋಟ ಮಾರ್ಗವಾಗಿ ರಾಜ್ಯದ ಗಡಿಯೊಳಗೆ ಪ್ರವೇಶಿಸುವ ವಾಹನಗಳಲ್ಲಿನ ಪ್ರಯಾಣಿಕರ ಕೋವಿಡ್‌ ವರದಿ, 2 ಡೋಸ್ ಲಸಿಕೆ ಪಡೆದ ಪ್ರಯಾಣಿಕರಿಗೆ ಮಾತ್ರ ಪ್ರವೇಶ ನೀಡಲಾಯಿತು.

 ಸಕ್ರಿಯ ಪ್ರಕರಣ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ನಾಲ್ಕು ದಿನಗಳಿಂದ ಏರುಗತಿ ಪಡೆದುಕೊಂಡಿದ್ದು, ಸದ್ಯ 6,831 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಭಾನುವಾರ 77 ಸಾವಿರ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. 315 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಸೋಂಕು ದೃಢ ಪ್ರಮಾಣ ಶೇ 0.63 ರಷ್ಟು ದೃಢಪಟ್ಟಿದೆ. ಆರು ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿ, 12 ಜಿಲ್ಲೆಗಳಲ್ಲಿ ಒಂದಂಕಿಯಲ್ಲಿದೆ. ಬಾಗಲಕೋಟೆ, ಬೆಳಗಾವಿ ಸೇರಿದಂತೆ 11 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು