ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ವಿತರಣೆಗೂ ವಕ್ರದೃಷ್ಟಿ: ಅಮಿತ್‌ ಶಾ

ರಾಜ್ಯದಲ್ಲಿ ಅವಧಿ ಪೂರ್ಣಗೊಳಿಸುವುದಷ್ಟೇ ಅಲ್ಲ, ಮತ್ತೆ ಬಿಜೆಪಿಯೇ ಅಧಿಕಾರಕ್ಕೆ
Last Updated 16 ಜನವರಿ 2021, 15:22 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ದೇಶ ಯಶಸ್ವಿಯಾಗಿದೆ. ಆದರೆ, ವಕ್ರದೃಷ್ಟಿ ಇರುವವರು ಇದನ್ನೂ ವಕ್ರದೃಷ್ಟಿಯಿಂದಲೇ ನೋಡುತ್ತಿದ್ದಾರೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬೆಂಗಳೂರಿನಲ್ಲಿ ‘ಪೊಲೀಸ್‌ ಗೃಹ–2025’ ಯೋಜನೆಗೆ ಚಾಲನೆ ಮತ್ತು ಬಹಮಹಡಿ ಪೊಲೀಸ್‌ ವಸತಿಗೃಹಗಳು ಮತ್ತು ವಿಜಯಪುರದಲ್ಲಿ ಭಾರತೀಯ ಮೀಸಲು ಪಡೆಯ (ಐಆರ್‌ಬಿ) ನೂತನ ಆಡಳಿತ ಕಚೇರಿಯ ಕಟ್ಟಡವನ್ನು ವರ್ಚುವಲ್‌ ಮೂಲಕ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ತನ್ನ ಅವಧಿ ಪೂರ್ಣಗೊಳಿಸುವುದಷ್ಟೇ ಅಲ್ಲ, ಮುಂದಿನ 5 ವರ್ಷಕ್ಕೆ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದೂ ಶಾ ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ಮಾತಿನ ಉದ್ದಕ್ಕೂ ಕೊರೊನಾ ವಿರುದ್ಧದ ದೇಶದ ಹೋರಾಟವನ್ನು ನೆನಪಿಸಿಕೊಂಡ ಶಾ, ‘ದೇಶದ ವಿಜ್ಞಾನಿಗಳೇ ಕಂಡುಹಿಡಿದ ಎರಡು ರೀತಿಯ ಲಸಿಕೆಯನ್ನು ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್‌ಗೆ ನೀಡಲಾಗುತ್ತಿದೆ. ಎಲ್ಲರೂ ಸೇರಿ ಲಸಿಕೆಯ ಬಗ್ಗೆ ಇಡೀ ದೇಶಕ್ಕೆ ವಿಶ್ವಾಸ ಮೂಡಿಸಬೇಕಿದೆ. ಕೊರೊನಾ ವಿರುದ್ಧದ ಹೋರಾಟಕ್ಕೆ ವಿಶ್ವದಲ್ಲೇ ಭಾರತ ಪ್ರಶಂಸೆಗೆ ಪಾತ್ರವಾಗಿದೆ’ ಎಂದು ಬಣ್ಣಿಸಿದರು.

‘ಕೊರೊನಾ ಬಿಕ್ಕಟ್ಟನ್ನು ಭಾರತವೂ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಯಾವ ರೀತಿಯಲ್ಲಿ ಎದುರಿಸಬಹುದು ಎಂಬ ಆತಂಕ ಇತ್ತು. ಆದರೆ, ಇತರ ದೇಶಗಳ ಜೊತೆ ತುಲನಾತ್ಮಕವಾಗಿ ನೋಡಿದರೆ, 130 ಕೋಟಿ ಜನಸಂಖ್ಯೆ ಇರುವ ಭಾರತ ಕೊರೊನಾ ವಿರುದ್ಧ ಯಶಸ್ವಿಯಾಗಿ ಹೋರಾಟ ನಡೆಸಿದೆ. ದೇಶದಾದ್ಯಂತ ಪ್ರಯೋಗಾಲಯಗಳು ಸೇರಿದಂತೆ ಆರೋಗ್ಯ ವ್ಯವಸ್ಥೆ ಸುಧಾರಣೆಗೊಂಡಿದೆ’ ಎಂದರು.

’ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತ ವೈದ್ಯರು, ಆರೋಗ್ಯ ಕಾರ್ಯಕರ್ತರು, ಸ್ವಚ್ಛತಾ ಕಾರ್ಮಿಕರು ಜೀವವನ್ನೇ ಮುಡಿಪಾಗಿಟ್ಟು ಕೆಲಸ ಮಾಡಿದ್ದಾರೆ. ಈ ಕಾರಣಕ್ಕೆ ಮೊದಲ ಹಂತದಲ್ಲಿ ಈ ಕೊರೊನಾ ವಾರಿಯರ್ಸ್‌ಗಳಿಗೆ ಲಸಿಕೆ ನೀಡಲಾಗುತ್ತಿದೆ’ ಎಂದೂ ಶಾ ಸಮರ್ಥಿಸಿದರು.

‘ಪ್ರಧಾನಿ ಮೋದೊಯವರ ನಡೆ ಜನರಿಗೆ ಇಷ್ಟವಾಗಿದೆ. ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗದುಕೊಂಡು ಕೊರೊನಾ ವಿರುದ್ಧ ಅವರು ಸಮರ ಸಾರಿದ್ದಾರೆ. ನಾಯಕನೊಬ್ಬ ಕರೆಕೊಟ್ಟಾಗ ಜನರು ಜನತಾ ಕರ್ಪ್ಯೂ, ಲಾಕ್‌ಡೌನ್‌, ಚಪ್ಪಾಳೆ ಬಾರಿಸಿ ಜಾಗೃತಿ, ಬೆಳಕು ಬೆಳಗಿಸಲು ಸ್ಪಂದಿಸಿದ್ದಾರೆ’ ಎಂದರು.

‘ಕರ್ನಾಟಕಕ್ಕೆ ಮೊದಲ ಹಂತದಲ್ಲಿ 13.90 ಲಕ್ಷ ಲಸಿಕೆ ಬಂದಿದೆ. ಯಡಿಯೂರಪ್ಪ ನೇತೃತ್ವದಲ್ಲಿ ಕೊರೊನಾ ವಿರುದ್ಧದ ವಿರುದ್ಧದ ಹೋರಾಟ ತುಂಬ ಉತ್ತಮವಾಗಿ ನಡೆದಿದೆ. ಲಾಕ್‌ಡೌನ್‌ ಅವಧಿಯಲ್ಲಿ ಬೆಂಗಳೂರು ಪೊಲೀಸರು ಉತ್ತಮ ಕಲಸ ಮಾಡಿದ್ದಾರೆ’ ಎಂದರು.

‘ಪೊಲೀಸರಿಗೆ ವಸತಿ ಸೌಲಭ್ಯ ಕಲ್ಪಿಸುವುದ ಗೃಹ ಸಚಿವ ಆದವರಿಗೆ ದೊಡ್ಡ ಸವಾಲು. ಆದರೆ, ರಾಜ್ಯದ ಗೃಹ ಸಚಿವರು ಇದನ್ನು ಸವಾಲು ಆಗಿ ಸ್ವೀಕರಿಸಿದ್ದಾರೆ. ಅಲ್ಲದೆ, 2025ರ ವೇಳೆಗೆ 10 ಸಾವಿರಕ್ಕೂ ಹೆಚ್ಚು ವಸತಿಗೃಹಳನ್ನು ನಿರ್ಮಿಸುವ ಗುರಿ ಹೊಂದಿದ್ದಾರೆ’ ಎಂದು ಶ್ಲಾಘಿಸಿದರು.

‘ಮೂಲಸೌಲಭ್ಯ, ಕೃಷಿ ಸೇರಿದಂತೆ ಎಲ್ಲ ವಲಯಗಳಲ್ಲಿ ರಾಜ್ಯ ಸರ್ಕಾರಕ್ಕೆ ನೆರವು ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ’ ಎಂದೂ ಶಾ ಹೇಳಿದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ‘ಗೃಹ ನಿರ್ಮಾಣ ಯೋಜನೆ ಪೊಲೀಸರ ಮೇಲಿನ ಸರ್ಕಾರದ ಕಾಳಜಿಯ ಪ್ರತೀಕ. ಆರೋಗ್ಯ ಭಾಗ್ಯ ಯೋಜನೆಯಲ್ಲಿ ಪೊಲೀಸ್‌ ಸಿಬ್ಬಂದಿ ಮತ್ತು ಅವರ ಕುಟುಂಬಕ್ಕೆ ಆರೋಗ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ’ ಎಂದರು.

ರಾಜ್ಯ ಗೃಹ ಇಲಾಖೆಯ ಸಾಧನೆಗಳನ್ನು ತೆರೆದಿಟ್ಟ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಇಲಾಖೆಯಲ್ಲಿ ಶೇ 50ರಷ್ಟು ಸಿಬ್ಬಂದಿ ಕೊರತೆ ಇತ್ತು. ಅದೀಗ ಶೇ 11ರಕ್ಕೆ ಇಳಿದಿದೆ. ಮಾರ್ಚ್‌ ವೇಳೆಗೆ ಅದನ್ನು ಶೇ 6ಕ್ಕೆ ಇಳಿಸುತ್ತೇವೆ’ ಎಂದರು.

ಡ್ರಗ್ಸ್‌ ಜಾಲ ಬೇಧಿಸುವಲ್ಲಿ ಸರ್ಕಾರದ ತೋರಿದ ಬದ್ಧತೆ, 23 ಮಂದಿ ವಿದೇಶಿಯರ ಪೆಡ್ಲರ್‌ಗಳ ಬಂಧನ, ಉಗ್ರ ಚಟುವಟಿಕೆಯನ್ನು ಮಟ್ಟ ಹಾಕುವ ಹಾದಿಯಲ್ಲಿ 61 ಮಂದಿ ಶಂಕಿತ ಉಗ್ರರನ್ನು ಬಂಧಿಸಿದ ಬಗ್ಗೆಯೂ ಬೊಮ್ಮಾಯಿ ವಿವರಿಸಿದರು. ರಾಜ್ಯ ಆಂತರಿಕ ಭದ್ರತಾ ವಿಭಾಗ ಮತ್ತು ರಾಷ್ಟ್ರೀಯ ತನಿಖಾ ಏಜೆನ್ಸಿಯ ಜಂಟಿ ಕಾರ್ಯಾಚರಣೆಯಿಂದ ಇದು ಸಾಧ್ಯವಾಗಿದೆ ಎಂದೂ ಅವರು ಹೇಳಿದರು.

ಕೇಂದ್ರದಿಂದ ₹ 104.97 ಕೋಟಿ ಅನುದಾನ: ವಿಜಯಪುರದಲ್ಲಿ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಅರಕೇರಿ ಗ್ರಾಮದಲ್ಲಿ 100 ಎಕರೆ ಪ್ರದೇಶದಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ₹ 104.97 ಕೋಟಿ ಅನುದಾನದಲ್ಲಿ ಭಾರತೀಯ ಮೀಸಲು ಪಡೆಯ ನೂತನ ಆಡಳಿತ ಕಚೇರಿ ಕಟ್ಟಡವನ್ನು ನಿರ್ಮಿಸಲಾಗಿದೆ.

‘ಪೊಲೀಸ್‌ ಗೃಹ –2025 ಯೋಜನೆ: ಈ ಯೋಜನೆಯಡಿ ₹ 2740 ಕೋಟಿ ವೆಚ್ಚದಲ್ಲಿ 10,034 ಪೊಲೀಸ್‌ ವಸತಿಗೃಹಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಆ ಮೂಲಕ, ರಾಜ್ಯದ ಪೊಲೀಸರಿಗೆ ಒತ್ತಡ ರಹಿತ ಹಾಗೂ ಸುಭದ್ರ ನೆಲೆ ಒದಗಿಸಲು ಉದ್ದೇಶಿಸಲಾಗಿದೆ. ‘ಪೊಲೀಸ್‌ ಗೃಹ–2020’ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ವತಿಯಿಂದ 2015ರಲ್ಲಿ ₹ 2272.37 ಕೋಟಿ ವೆಚ್ಚದಲ್ಲಿ 11 ಸಾವಿರ ಪೊಲೀಸ್‌ ವಸತಿಗೃಹಗಳನ್ನು ನಿರ್ಮಿಸಲಾಗಿದೆ.

ಅದಕ್ಕೂ ಮೊದಲು ಶಾ ಅವರು, ತುರ್ತು ಸ್ಪಂದನ ಸಹಾ ವ್ಯವಸ್ಥೆಯ (ಇಆರ್‌ಎಸ್‌ಎಸ್‌) 150 ವಾಹನಗಳಿಗೆ ವಿಧಾನಸೌಧದ ಮೆಟ್ಟಿಲುಗಳಲ್ಲಿ ಶಾ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT