ಶನಿವಾರ, ಮೇ 8, 2021
25 °C
ನರೇಗಾ ಅನುಷ್ಠಾನಗೊಂಡ ನಂತರ ದ.ಕ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಈ ಸಾಧನೆ

ಉದ್ಯೋಗ ಖಾತ್ರಿಯಲ್ಲಿ ದಾಖಲೆ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಗೊಂಡ 12 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ 2020–2ನೇ ಸಾಲಿನಲ್ಲಿ ಗುರಿ ಮೀರಿದ ಸಾಧನೆ ದಾಖಲಾಗಿದೆ.

ಕಳೆದ ವರ್ಷ ಕೋವಿಡ್–19 ಲಾಕ್‌ಡೌನ್‌ ಸಂದರ್ಭದಲ್ಲಿಯೂ ನರೇಗಾ ಯೋಜನೆಯಡಿ ಕಾಮಗಾರಿಗಳು ನಡೆದಿದ್ದವು. ಉದ್ಯೋಗ ಕಳೆದುಕೊಂಡ ಹಲವರಿಗೆ ನರೇಗಾ ಆಸರೆಯಾಯಿತು. ಕೆಲಸ ಅರಸುತ್ತಿದ್ದವರು ಉದ್ಯೋಗ ಚೀಟಿ ಪಡೆದು, ಜೀವನೋಪಾಯಕ್ಕೆ ಮಾರ್ಗ ಕಂಡುಕೊಂಡರು. ಜಿಲ್ಲೆಯಲ್ಲಿ ಸುಮಾರು 65,078 ಕ್ರಿಯಾಶೀಲ ಉದ್ಯೋಗ ಚೀಟಿಗಳು ಇದ್ದು, ಅವುಗಳಲ್ಲಿ 32,644 (ಕುಟುಂಬಗಳಿಗೆ) ಉದ್ಯೋಗ ಚೀಟಿಗಳಿಗೆ ಕಳೆದ ಸಾಲಿನಲ್ಲಿ ಕೆಲಸ ನೀಡಲಾಗಿದೆ. ಅವುಗಳಲ್ಲಿ 11,789 ಹೊಸ ಉದ್ಯೋಗ ಚೀಟಿಗಳಾಗಿವೆ.

ಸರ್ಕಾರವು ಜಿಲ್ಲೆಗೆ 16 ಲಕ್ಷ ಮಾನವ ದಿನಗಳ ಗುರಿ ನಿಗದಿಪಡಿಸಿತ್ತು. ಅದಕ್ಕೆ ಬದಲಾಗಿ 16,54,551 ಮಾನವ ದಿನಗಳನ್ನು ಪೂರೈಸಿ, ಜಿಲ್ಲಾ ಪಂಚಾಯಿತಿ ಶೇ 103ರಷ್ಟು ಸಾಧನೆ ಮಾಡಿದೆ. 2008ರಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದೆ. ಅಲ್ಲಿಂದ ಈವರೆಗೆ 15,50,000 ಮಾನವ ದಿನಗಳ ಕೆಲಸ ಗರಿಷ್ಠ ದಾಖಲೆಯಾಗಿತ್ತು. 2019–20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 1,29,113 ಉದ್ಯೋಗ ಚೀಟಿ ನೀಡಿದ್ದು, 12.91 ಲಕ್ಷ ಮಾನವ ದಿನಗಳನ್ನು ಪೂರೈಸಲಾಗಿತ್ತು. 2020–21ರಲ್ಲಿ ಒಟ್ಟು 1,40,018 ಉದ್ಯೋಗ ಚೀಟಿ ನೀಡಲಾಗಿದೆ.

ಈ ವರ್ಷ ಕೂಡ 16 ಲಕ್ಷ ಮಾನವ ದಿನಗಳ ಗುರಿ ನಿಗದಿಯಾಗಿದೆ. ವಿವಿಧ ಕಾಮಗಾರಿಗಳ ಜತೆ ‘ಜಲಶಕ್ತಿ– ಕ್ಯಾಚ್‌ ದಿ ರೇನ್’ ಅಭಿಯಾನದ ಅಡಿಯಲ್ಲಿ ಇಂಗುಗುಂಡಿ ರಚನೆ, ಕೆರೆ ಪುನಶ್ಚೇತನ, ಬಚ್ಚಲು ಗುಂಡಿ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಗುರಿ ತಲುಪ‍ಲು ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.

‘ಉತ್ತರ ಕರ್ನಾಟಕ ಭಾಗದಲ್ಲಿ ನರೇಗಾ ಯೋಜನೆಯ ಅವಲಂಬಿತರು ಹೆಚ್ಚಿದ್ದಾರೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನರೇಗಾ ಅಡಿಯಲ್ಲಿ ಉದ್ಯೋಗಕ್ಕೆ ಅಷ್ಟು ಬೇಡಿಕೆ ಇರಲಿಲ್ಲ. ಈ ಕಳೆದ ಬಾರಿ ಉದ್ಯೋಗದ ಬೇಡಿಕೆ ಹೆಚ್ಚಿತ್ತು. ಲಾಕ್‌ಡೌನ್ ಅವಧಿಯಲ್ಲಿ ಬಂದಿದ್ದ ಉದ್ಯೋಗ ಚೀಟಿ ಬೇಡಿಕೆಯನ್ನು ಪೂರೈಸಿ, ಜನರಿಗೆ ಕೆಲಸ ನೀಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು