ಶುಕ್ರವಾರ, ನವೆಂಬರ್ 27, 2020
20 °C
ನೆರೆ ಸಂತ್ರಸ್ತರಿಗೆ ₹35.49 ಕೋಟಿ ಪರಿಹಾರ ಬಿಡುಗಡೆ

ಪ್ರವಾಹ: ಆಗಸ್ಟ್‌–ಸೆಪ್ಟೆಂಬರ್‌ ವೇಳೆ ರಾಜ್ಯದಾದ್ಯಂತ 13,553 ಮನೆಗಳಿಗೆ ಹಾನಿ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಆಗಸ್ಟ್‌–ಸೆಪ್ಟೆಂಬರ್‌ ತಿಂಗಳಲ್ಲಿ ಉಂಟಾದ ಪ್ರವಾಹ ಮತ್ತು ಅತಿವೃಷ್ಟಿಯಿಂದ ರಾಜ್ಯದ 21 ಜಿಲ್ಲೆಗಳಲ್ಲಿ 13,553 ಮನೆಗಳಿಗೆ ಹಾನಿಯಾಗಿದೆ. ಕೇಂದ್ರ ಸರ್ಕಾರದ ಎಸ್‌ಡಿಆರ್‌ಎಫ್‌/ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ₹35.49 ಕೋಟಿ ಪರಿಹಾರ ಬಿಡುಗಡೆ ಮಾಡಿದೆ.

ಪೂರ್ಣ ಹಾನಿಯಾದ ಮನೆಗೆ ₹5 ಲಕ್ಷ, ತೀವ್ರ ಹಾನಿಯಾದ ಮನೆಗೆ ₹3 ಲಕ್ಷ ಹಾಗೂ ಭಾಗಶಃ ಹಾನಿಯಾದ ಮನೆಗೆ ₹50 ಸಾವಿರ ಪರಿಹಾರವನ್ನು ಮಾರ್ಗಸೂಚಿಯಂತೆ ನೀಡಬೇಕಿದೆ. ನೆರೆ ಹಾವಳಿಯಿಂದ ಹಾನಿಗೀಡಾದ ಮನೆಗಳ ಪುನರ್‌ ನಿರ್ಮಾಣ ಅಥವಾ ದುರಸ್ತಿ ಕಾರ್ಯ ಕೈಗೊಳ್ಳಲು ಸಂತ್ರಸ್ತರಿಗೆ ಕೂಡಲೇ ಹಣ ನೀಡುವಂತೆ ಸೂಚಿಸಲಾಗಿದೆ.

ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಬಿಡುಗಡೆ ಮಾಡಿರುವ ಅನುದಾನವನ್ನು ನಿಯಮಾನುಸಾರ ಪಾವತಿಸಲು ರಾಜೀವ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಅನುಮತಿ ನೀಡಲಾಗಿದೆ. 

 ಸಂತ್ರಸ್ತರ ಖಾತೆಗೆ ನೇರ ಪಾವತಿ

ಪರಿಹಾರ ಮೊತ್ತವನ್ನು ನೆರೆ ಸಂತ್ರಸ್ತರ ಬ್ಯಾಂಕ್‌ ಖಾತೆಗೆ ನೇರವಾಗಿ ಆರ್‌.ಟಿ.ಜಿ.ಎಸ್‌ ಮೂಲಕ ಜಮಾ ಮಾಡಬೇಕು ಹಾಗೂ ಫಲಾನುಭವಿಗಳ ವಿವರವನ್ನು ಆರ್‌.ಜಿ.ಆರ್‌.ಎಚ್‌.ಸಿ.ಎಲ್‌. ತಂತ್ರಾಂಶದಲ್ಲಿ ನಮೂದಿಸಬೇಕು. ಬಿಡುಗಡೆ ಮಾಡಿದ ಅನುದಾನ ಉಪಯೋಗಿಸಿದ ಬಗ್ಗೆ ಪ್ರಮಾಣ ಪತ್ರವನ್ನು ಆಯಾ ಜಿಲ್ಲಾಧಿಕಾರಿಗಳು ರಾಜೀವಗಾಂಧಿ ವಸತಿ ನಿಗಮಕ್ಕೆ ಕಡ್ಡಾಯವಾಗಿ ಸಲ್ಲಿಸುವಂತೆ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ನಾಗರಾಜು ಎಸ್‌. ಸೂಚನೆ ನೀಡಿದ್ದಾರೆ. 

ಲೋಪವಾಗದಂತೆ ಎಚ್ಚರಿಕೆ

ಬಿಡುಗಡೆಯಾದ ಅನುದಾನದ ಬಳಕೆಯಲ್ಲಿ ಲೋಪ ದೋಷಗಳಾದಲ್ಲಿ ಜಿಲ್ಲಾಧಿಕಾರಿ ಮತ್ತು ರಾಜೀವ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ನೇರವಾಗಿ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. 

‘ಹಾವೇರಿ ಜಿಲ್ಲೆಯಲ್ಲಿ 5 ಮನೆಗಳು ಪೂರ್ಣಹಾನಿ, 311 ಮನೆಗಳು ತೀವ್ರ ಹಾನಿ ಹಾಗೂ 484 ಮನೆಗಳು ಭಾಗಶಃ ಹಾನಿಯಾಗಿವೆ. 935 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಇನ್ನೂ 534 ಪರಿಹಾರ ಅರ್ಜಿ ಪರಿಶೀಲನೆ ಬಾಕಿಯಿದೆ. ಜಿಲ್ಲೆಗೆ ₹2.90 ಕೋಟಿ ಅನುದಾನ ಬಿಡುಗಡೆಯಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು