ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದಾಗಿ ಪರಿಶಿಷ್ಟರಿಗೆ ಮೀಸಲಾದ ಹಣದ ವೆಚ್ಚ ಕುಸಿತ: ಕಾರಜೋಳ

Last Updated 13 ಅಕ್ಟೋಬರ್ 2020, 20:01 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌–19 ನಿಂದಾಗಿ ಪರಿಶಿಷ್ಟ ಜಾತಿ (ಎಸ್‌.ಸಿ) ಮತ್ತು ಪಂಗಡಗಳಿಗೆ (ಎಸ್‌.ಟಿ) ಮೀಸಲಾದ ವಿಶೇಷ ಅನುದಾನದ (ಎಸ್‌ಸಿಎಸ್‌ಪಿ/ಟಿಎಸ್‌ಪಿ) ಬಳಕೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಒಟ್ಟು ಶೇ 20 ರಷ್ಟು ಮಾತ್ರ ಖರ್ಚಾಗಿದೆ.

ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಡಿ 2020–21 ರ ಸಾಲಿಗೆ ₹27,699 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ, ಈ ವರೆಗೆ ₹5,603 ಕೋಟಿ ಮಾತ್ರ ಬಳಕೆಯಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ಈವರೆಗೆ ಸಮಾಜಕಲ್ಯಾಣ ಇಲಾಖೆಯನ್ನು ನಿರ್ವಹಿಸಿದ ಕಾರಜೋಳ ಅವರು ಒಂದು ವರ್ಷದ ಸಾಧನೆಯನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಕೋವಿಡ್‌ನಿಂದಾಗಿ ಎಸ್‌.ಸಿ ಮತ್ತು ಎಸ್‌.ಟಿ ವಿದ್ಯಾರ್ಥಿನಿಲಯಗಳು ಆರಂಭಗೊಂಡಿಲ್ಲ. ಲಾಕ್‌ಡೌನ್‌ ಇದ್ದ ಕಾರಣ ಇಲಾಖೆಯ ಹಲವು ಚಟುವಟಿಕೆಗಳೂ ನಡೆಯಲಿಲ್ಲ. ಇದರಿಂದ ಹಣ ಖರ್ಚಾಗಿಲ್ಲ ಎಂದು ತಿಳಿಸಿದರು.

2019–20ರಲ್ಲಿ ₹27,558 ಕೋಟಿಯಲ್ಲಿ ₹25,387 ಕೋಟಿ ಬಳಕೆ ಮಾಡಿ ಶೇ 92 ರಷ್ಟು ಪ್ರಗತಿ ಸಾಧಿಸಲಾಗಿತ್ತು. ಎಸ್‌.ಸಿಗೆ ₹18,228 ಕೋಟಿ, ಎಸ್‌.ಟಿಗೆ ₹7,159 ಕೋಟಿ ಮೀಸಲಿಡಲಾಗಿತ್ತು ಎಂದು ಹೇಳಿದರು.

ಭೂ ಒಡೆತನ ಯೋಜನೆಯಡಿ 2,391 ಎಸ್‌.ಸಿ ಮತ್ತು ಎಸ್‌.ಟಿ ಫಲಾನು
ಭವಿಗಳಿಗೆ 3,228 ಎಕರೆಯನ್ನು ₹295 ಕೋಟಿ ವೆಚ್ಚದಲ್ಲಿ ಖರೀದಿಸಿ ಹಂಚಿಕೆ ಮಾಡ
ಲಾಗಿದೆ. 2020–21ನೇ ಸಾಲಿನಲ್ಲಿ ₹349.11 ಕೋಟಿ ನಿಗದಿ ಮಾಡಿದ್ದು, 1,151 ಫಲಾನುಭವಿಗಳಿಗೆ ₹141 ಕೋಟಿ ವೆಚ್ಚದಲ್ಲಿ 1,603.43 ಎಕರೆ ಖರೀದಿಸಿ ವಿತರಿಸಲಾಗಿದೆ ಎಂದರು.

ಎಸ್‌.ಸಿ 1,69,374 ಹಾಗೂ ಎಸ್‌.ಟಿಗೆ ಸೇರಿದ 36,548 ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗಿದೆ. 9.11 ಲಕ್ಷ ಎಸ್‌.ಸಿ ವಿದ್ಯಾರ್ಥಿಗಳಿಗೆ ₹134 ಕೋಟಿ ಹಾಗೂ 3.99 ಲಕ್ಷ ಎಸ್‌.ಟಿ ವಿದ್ಯಾರ್ಥಿಗಳಿಗೆ ₹51.97 ಕೋಟಿ ವಿದ್ಯಾರ್ಥಿ ವೇತನ ನೀಡಲಾಗಿದೆ. ಮೊದಲ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಎಸ್‌.ಸಿಯ 1,10,985 ಹಾಗೂ ಎಸ್‌.ಟಿಯ 40,378 ವಿದ್ಯಾರ್ಥಿಗಳಿಗೆ ₹267 ಕೋಟಿ ಪ್ರೋತ್ಸಾಹ ಧನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

‘ಯಡಿಯೂರಪ್ಪ ಅವರು ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು ಶ್ರೀರಾಮುಲು ಅವರಿಗೆವಹಿಸಿಕೊಟ್ಟಿದ್ದಾರೆ. ಅವರಿಗೆ ಸಹಕಾರ ನೀಡುವ ಮೂಲಕ ಸಮುದಾಯಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು.

***

ಸಾಮಾಜಿಕ ನ್ಯಾಯ, ಶೋಷಿತರ ಕಲ್ಯಾಣಕ್ಕಾಗಿ, ಬಡವರ ಮಕ್ಕಳ ಏಳಿಗೆಗೆ ಹಲವು ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಿದ ತೃಪ್ತಿ ಇದೆ

- ಗೋವಿಂದ ಕಾರಜೋಳ, ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT