ಸೋಮವಾರ, ಮಾರ್ಚ್ 20, 2023
24 °C

ಜಿ.ಪಂ., ತಾ.ಪಂ. ಕ್ಷೇತ್ರಗಳ ಪುನರ್ವಿಂಗಡಣೆ: ಪ್ರತ್ಯೇಕ ಆಯೋಗ ರಚನೆಗೆ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ವಿಂಗಡಣೆಗಾಗಿ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಪ್ರತ್ಯೇಕ ಕ್ಷೇತ್ರ ಪುನರ್ವಿಂಗಡಣಾ ಆಯೋಗ ರಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ‌.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರತ್ಯೇಕ ಆಯೋಗ ರಚನೆಗೆ ಪೂರಕವಾಗಿ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸಭೆಯ ಬಳಿಕ ವಿವರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, 'ಕಾನೂನಿನ ಪ್ರಕಾರ ರಾಜ್ಯ ಚುನಾವಣಾ ಆಯೋಗವೇ ಕ್ಷೇತ್ರ ಪುನರ್ವಿಂಗಡಣೆ ಮಾಡಲು ಅವಕಾಶವಿಲ್ಲ. ಕಳೆದ ಬಾರಿ ತಪ್ಪಾಗಿ ಆ ರೀತಿ ಪ್ರಕ್ರಿಯೆ ನಡೆಸಲಾಗಿದೆ. ಇದರಿಂದ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ವಿಂಗಡೆಯಲ್ಲಿ ತಪ್ಪುಗಳಾಗಿವೆ ಎಂದು ಆರೋಪಿಸಿ ಹೈಕೋರ್ಟ್‌ಗೆ 2,000 ಅರ್ಜಿಗಳು ಸಲ್ಲಿಕೆಯಾಗಿವೆ. ಇಂತಹ ಸಮಸ್ಯೆ ತಪ್ಪಿಸಲು ಪ್ರತ್ಯೇಕ ಆಯೋಗ ರಚನೆಗೆ ತೀರ್ಮಾನಿಸಲಾಯಿತು' ಎಂದರು.

ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಕ್ಷೇತ್ರ ಪುನರ್ವಿಂಗಡಣಾ ಆಯೋಗದಲ್ಲಿ ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಸದಸ್ಯರಾಗಲಿದ್ದು, ಆಯುಕ್ತರು ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಅಗತ್ಯ ಇರುವ ಎಲ್ಲ ಸಂದರ್ಭಗಳಲ್ಲಿ ಸೀಮಿತ ಕಾಲಾವಧಿಗೆ ಆಯೋಗವನ್ನು ನೇಮಿಸಲಾಗುವುದು ಎಂದು ವಿವರಿಸಿದರು.

ಪ್ರತ್ಯೇಕ ಆಯೋಗ ಸಿದ್ಧಪಡಿಸುವ ಕ್ಷೇತ್ರ ಪುನರ್ವಿಂಗಡಣಾ ವರದಿಗಳಿಗೆ ಎರಡು ಹಂತಗಳಲ್ಲಿ ಸಲಹೆ, ಆಕ್ಷೇಪಣೆ ಸ್ವೀಕರಿಸಿ, ಇತ್ಯರ್ಥಪಡಿಸಲಾಗುವುದು. ಮೊದಲು ಜಿಲ್ಲಾಧಿಕಾರಿ ಹಂತದಲ್ಲಿ ಆಕ್ಷೇಪಣೆ ಸ್ವೀಕರಿಸಲಾಗುವುದು. ಅಂತಿಮವಾಗಿ ಕ್ಷೇತ್ರ ಪುನರ್ವಿಂಗಡಣಾ ಆಯೋಗವೇ ಆಕ್ಷೇಪಣೆ ಸ್ವೀಕರಿಸಿ, ವಿಲೇವಾರಿ ಮಾಡುವ ವ್ಯವಸ್ಥೆ ಬರಲಿದೆ ಎಂದರು.

ಚುನಾವಣೆ ಮುಂದೂಡಿಕೆ ಸಾಧ್ಯತೆ: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ವಿಂಗಡಣೆ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಪ್ರತ್ಯೇಕ ಆಯೋಗ ರಚನೆ ಕುರಿತು ನ್ಯಾಯಾಲಯಕ್ಜೆ ಸೋಮವಾರ ಮಾಹಿತಿ ನೀಡಲಿರುವ ಸರ್ಕಾರ, ಹೊಸದಾಗಿ ಕ್ಷೇತ್ರ ಪುನರ್ವಿಂಗಡಣೆಗೆ ಅವಕಾಶ ಕೋರುವ ಸಾಧ್ಯತೆ ಇದೆ.

ಹೈಕೋರ್ಟ್‌ ಒಪ್ಪಿದರೆ, ಹೊಸದಾಗಿ ರಚನೆಯಾಗಲಿರುವ ಆಯೋಗ ಮತ್ತೊಮ್ಮೆ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ವಿಂಗಡಣಾ ಪ್ರಕ್ರಿಯೆ ನಡೆಸಲಿದೆ. ಬಳಿಕ ಮೀಸಲಾತಿ ನಿಗದಿಯಾಗಿ, ಚುನಾವಣೆ ನಡೆಸಬೇಕು. ಈ ಎಲ್ಲ ಪ್ರಕ್ರಿಯೆಗಳನ್ನು ನಡೆಸುವುದಕ್ಕಾಗಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು