ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಬ ಸಮುದಾಯ ಎಸ್ಟಿಗೆ ಸೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧಾರ

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಕುರುಬ ಸಮುದಾಯದ ಸ್ವಾಮೀಜಿಗಳ, ಪ್ರಮುಖರ ಸಭೆ
Last Updated 27 ಸೆಪ್ಟೆಂಬರ್ 2020, 11:19 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಪಂಗಡ (ಎಸ್ಟಿ) ವರ್ಗಕ್ಕೆ ಕುರುಬ ಸಮುದಾಯವನ್ನು ಸೇರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಸಮುದಾಯದಸ್ವಾಮೀಜಿಗಳ ಸಲಹೆಯಂತೆ ಹೋರಾಟದ ರೂಪುರೇಷೆ ತಯಾರಿಸಲಾಗುವುದು ಎಂದು ಕುರುಬ ಸಮುದಾಯದ ಮುಖಂಡರೂ ಆಗಿರುವ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ತಮ್ಮ ನಿವಾಸದಲ್ಲಿ ಭಾನುವಾರ ನಡೆದಸಮುದಾಯದ ಸ್ವಾಮೀಜಿಗಳು ಮತ್ತು ಎಲ್ಲ ಪಕ್ಷಗಳಲ್ಲಿರುವ ಪ್ರಮುಖರ ಸಭೆಯ ಬಳಿಕ ಮಾತನಾಡಿದ ಅವರು,ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ಆ ಸಮುದಾಯ ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದೆ. ಆ ಒಗ್ಗಟ್ಟಿನ ಪ್ರದರ್ಶನದಿಂದ ಆ ಸಮುದಾಯಕ್ಕೆ ಮೀಸಲಾತಿ ಹೆಚ್ಚಳದ ಬಗ್ಗೆ ಸರ್ಕಾರ ತೀರ್ಮಾನ ಮಾಡಲು ಮುಂದಾಗಿದೆ‌. ಅದೇ ರೀತಿ ನಾವು ಕೂಡಾ ಹೋರಾಟ ರೂಪಿಸಬೇಕು ಎಂದು ಸಮುದಾಯದ ಜನರಿಗೆ‌ ಕರೆ ನೀಡಿದರು.

ಸಮುದಾಯದಿಂದ ಶಕ್ತಿ ಪ್ರದರ್ಶನ ಆಗಬೇಕು. ಇಲ್ಲವಾದಲ್ಲಿ ಯಾವುದೇ ಸರ್ಕಾರಗಳು ಬಗ್ಗುವುದಿಲ್ಲ. ನಾವು ಒಟ್ಟಾಗಿ ಹೋರಾಟ ಮಾಡಬೇಕು. ನಮ್ಮ ಉದ್ದೇಶ ನಮ್ಮ ಸಮುದಾಯ ಎಸ್ಟಿಗೆ ಸೇರಿಸಬೇಕು ಎನ್ನುವುದು. ಹೀಗಾಗಿ ಪಾದಯಾತ್ರೆ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಸಮುದಾಯದ ಮುಖಂಡರಿಗೆ ಕರೆ ಕೊಟ್ಟರು.

ಜೆಡಿಎಸ್ ಶಾಸಕ ಬಂಡೆಪ್ಪ ಕಾಶಂಪುರ ಮಾತನಾಡಿ, ಒಂದೇ ಧ್ವನಿಯಿಂದ ನಾವು ಹೋರಾಟ ಮಾಡಬೇಕು. ಇದು ಹೊಸ ಹೋರಾಟ ಅಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಸ್ವಾತಂತ್ರ ಪೂರ್ವದಿಂದ ಈ ಹೋರಾಟ ನಡೆಯುತ್ತಿದೆ. ನಮ್ಮ ಸಮಾಜ ಎಸ್ಟಿ ಗೆ ಸೇರಬೇಕು ಎಂದರು.

ಈಗ ಬಿಜೆಪಿ ಅಧಿಕಾರದಲ್ಲಿ ಇದೆ. ಹೀಗಾಗಿ ಈಶ್ವರಪ್ಪ ಅವರ ನೇತೃತ್ವದಲ್ಲಿ ಹೋರಾಟ ಮಾಡೋಣ. ಅವರು ಮುಂದೆ ನಿಂತರೆ ನಾವು ಅವರ ಹಿಂದೆ ಬರುತ್ತೇವೆ. ಮೊದಲ ರಾಜ್ಯದ ಮುಖ್ಯಮಂತ್ರಿಯಡಿಯೂರಪ್ಪ ಅವರಿಂದ ಈ ಬೇಡಿಕೆಗೆ ಒಪ್ಪಿಗೆ ಕೊಡಿಸಬೇಕು ಎಂದರು.

ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್ ಮಾತನಾಡಿ, ಎಸ್ಟಿಗೆ ಸೇರಿಸಬೇಕು ಎಂದು ಹೋರಾಟಕ್ಕೆ ಮುಂದಾಗಿರುವ ಈಶ್ವರಪ್ಪ ಅವರಿಗೆ ಅಭಿನಂದನೆ ಸಲ್ಲಿಸಬೇಕು. ಜನಾಂಗದ ಎಲ್ಲ ಪ್ರಮುಖರನ್ನು ಅವರು ಒಂದೇ ಕಡೆ ಸೇರಿಸಿದ್ದಾರೆ ಎಂದರು.

ಎಸ್ಟಿಗೆ ಸೇರಿಸಿ ಎನ್ನುವುದು ಹೊಸ ಪ್ರಯತ್ನ ಅಲ್ಲ. ಹಿಂದೆಯೇ ಈ ಬಗ್ಗೆಹೋರಾಟ ಮಾಡಿದ್ದೇವೆ. ಈ ವಿಚಾರ ಸಂಬಂಧಿಸಿದಂತೆಕೇಂದ್ರ ಸರ್ಕಾರ ನಿರ್ಧಾರ ಮಾಡಬೇಕು. ಎಸ್ಟಿಗೆ ಸೇರಿಸುವ ಅಧಿಕಾರಇರುವುದು ಕೇಂದ್ರ ಸರ್ಕಾರಕ್ಕೆ. ಅದಕ್ಕಾಗಿ ನಾವು ಇಂದು ಹೋರಾಟ ಮಾಡಬೇಕು. ಇದು ಯಾರ ವಿರುದ್ಧದ ಹೋರಾಟ ಅಲ್ಲ. ಎಸ್ಟಿ ಸೇರುವ ವಿಚಾರಕ್ಕೆ ಸಂಬಂಧಿಸಿದಂತೆ . ಹೋರಾಟ ಮಾಡಲು ಇದು ಸೂಕ್ತ ಸಮಯ. ಈ ಕೆಲಸ ಈಗ ಆಗಿಲ್ಲದಿದ್ದರೆ ಮುಂದೆ ಆಗಲ್ಲ. ಎಂದೂ ಹೇಳಿದರು.

ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಯಾವ ಸಮಾಜದಲ್ಲಿ ಸಾಂಘಿಕ ಹೋರಾಟ ಇರುವುದಿಲ್ಲವೊ ಅಂತ ಸಮಾಜದಲ್ಲಿ ಒಗ್ಗಟು ಇರಲ್ಲ. ಎಲ್ಲರೂ ಜೊತೆ ಸೇರಿ ಈಹೋರಾಟ ಮಾಡಬೇಕು ಎಂದರು.

ನಾವು ಹುಟ್ಟುವ ಮೊದಲೇ ಈ ಹೋರಾಟ ಆರಂಭವಾಗಿತ್ತು. ಎಸ್ಟಿ ಗೆ ಸೇರಿಸುವ ವಿಚಾರಕ್ಕೆ ಕೇವಲ ಬೀದರ್ , ಕಲಬುರ್ಗಿ, ಯಾದಗಿರಿ ಹೋರಾಟ ನಡೆಯುತ್ತಿದೆ. ರಾಜ್ಯದ ಎಲ್ಲರೂ ಸೇರಿ ಹೋರಾಟ ಮಾಡಬೇಕು. ಇಡೀ ಕುರುಬ ಸಮುದಾಯ ಒಂದೇ ಕಡೆ ಸೇರಿದರೆ ಜಯ ಸಿಗುತ್ತದೆ ಎಂದರು.

ಒಟ್ಟಿಗೆ ಸೇರಿಕಾಗಿನೆಲೆ ಪಡೆದುಕೊಂಡೆವು. ಎಲ್ಲರೂ ಒಂದಾದೆವು. ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು. ಈಗಲೂ ಅಷ್ಟೆ. ಎಸ್ಟಿ ಸೇರುವ ವಿಚಾರದಲ್ಲೂ ಜಯ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT