ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೀಮ್ಡ್‌ ಫಾರೆಸ್ಟ್: 6 ಲಕ್ಷ ಹೆಕ್ಟೇರ್‌ ಭೂಮಿ ಕಂದಾಯ ಇಲಾಖೆಗೆ

ಅರಣ್ಯ ಇಲಾಖೆಗೆ 3.50 ಲಕ್ಷ ಹೆಕ್ಟೇರ್ ಭೂಮಿ * ಸಮಿತಿ ಸಭೆಯಲ್ಲಿ ತೀರ್ಮಾನ
Last Updated 14 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಸುಮಾರು 9.50 ಲಕ್ಷ ಹೆಕ್ಟೇರ್ ಪ್ರದೇಶವನ್ನು‌ ಅರಣ್ಯವೆಂದು ಪರಿಭಾವಿಸಿದ್ದ (ಡೀಮ್ಡ್‌ ಫಾರೆಸ್ಟ್‌) ಜಮೀನಿನ ಪೈಕಿ 6 ಲಕ್ಷ ಹೆಕ್ಟೇರ್‌ಗಳನ್ನು ಕಂದಾಯ ಇಲಾಖೆಗೆ ವಾಪಸ್‌ ಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಇದರಿಂದ ಬಗರ್‌ ಹುಕುಂ ಸಾಗುವಳಿದಾರರಿಗೆ ಜಮೀನು ಮಂಜೂರು ಮಾಡಲು ಹಾದಿ ಸುಗಮವಾಗಲಿದೆ.

ಉಳಿದ 3.50 ಲಕ್ಷ ಹೆಕ್ಟೇರ್‌ ಜಮೀನನ್ನು ಅರಣ್ಯ ಇಲಾಖೆಗೇ ಬಿಟ್ಟುಕೊಡಲಾಗುವುದು. ಈ ಸಂಬಂಧ ತಕ್ಷಣವೇ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ವಿಧಾನಸೌಧದಲ್ಲಿ ಸೋಮವಾರ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಮೀಸಲಿಟ್ಟ ಅರಣ್ಯ, ಸಂರಕ್ಷಿತ ಅರಣ್ಯಗಳು ಇವತ್ತಿನ ತೀರ್ಮಾನದ ವ್ಯಾಪ್ತಿಗೆ ಬರುವುದಿಲ್ಲ. ಅರಣ್ಯವೆಂದು ಪರಿಭಾವಿಸಿದ (ಡೀಮ್ಡ್‌ ಫಾರೆಸ್ಟ್‌) ಪ್ರದೇಶದಲ್ಲಿ ಕೃಷಿ ಚಟುವಟಿಕೆ, ಮನೆಗಳನ್ನು ಕಟ್ಟಿಕೊಂಡಿರುವ ಪ್ರದೇಶಕ್ಕೆ ಮಾತ್ರ ಅನ್ವಯವಾಗುತ್ತದೆ. ಈಗಾಗಲೇ ಬಗರ್‌ ಹುಕುಂ ಜಮೀನು ಸಕ್ರಮಗೊಳಿಸುವ ನಿಟ್ಟಿನಲ್ಲಿ 94 ಸಿ ಅಡಿ ಸಾವಿರಾರು ಜನ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅವರಿಗೆ ಭೂಮಿ ಹಂಚಲು ಈ ನಿರ್ಣಯದಿಂದ ಅನುಕೂಲವಾಗುತ್ತದೆ. ಹಲವು ದಶಕಗಳ ಸಮಸ್ಯೆಗೆ ಮುಕ್ತಿ ಸಿಕ್ಕಿದಂತೆ ಆಗುತ್ತದೆ ಎಂದು ಅಶೋಕ ಹೇಳಿದರು.

ಡೀಮ್ಡ್‌ ಫಾರೆಸ್ಟ್‌ಗೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳೂ ಕಂದಾಯ ಇಲಾಖೆಯ ಬಳಿಯೇ ಇದೆ. ಆದರೆ, ಅರಣ್ಯ ಇಲಾಖೆಯವರು ಜಮೀನು ತಮಗೆ ಸೇರಿದ್ದು ಎಂದು ಹೇಳಿಕೊಳ್ಳುತ್ತಲೇ ಬಂದಿದ್ದರು. ಈ ಕಗ್ಗಂಟು ಬಗೆಹರಿಸಲು ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲಾಗುವುದು. ಅದಕ್ಕೂ ಮುನ್ನ ಅಡ್ವೊಕೇಟ್‌ ಜನರಲ್‌ ಅವರ ಅಭಿಪ್ರಾಯ ಪಡೆಯಲಾಗುವುದು ಎಂದು ತಿಳಿಸಿದರು.

ಸುಪ್ರೀಂಕೋರ್ಟ್‌ ಪ್ರಮಾಣಪತ್ರವನ್ನು ಅಂಗೀಕರಿಸಿದರೆ ಹಲವು ದಶಕಗಳ ಸಮಸ್ಯೆ ಇತ್ಯರ್ಥವಾಗುತ್ತದೆ. ಸಾಗುವಳಿದಾರರಿಗೇ ಜಮೀನು ಸಿಗುತ್ತದೆ. ಸಾಕಷ್ಟು ಪ್ರದೇಶದಲ್ಲಿ ಮರಗಳೇ ಇಲ್ಲದಿದ್ದರೂ ಅರಣ್ಯ ಎಂದು ಅರಣ್ಯ ಇಲಾಖೆ ದಾಖಲಿಸಿಕೊಂಡಿದೆ. ಭೂಮಂಜೂರಾತಿ ಸಮಿತಿ ಭೂಮಿ ಹಂಚಿಕೆ ಮಾಡಿದರೂ ಅರಣ್ಯ ಇಲಾಖೆ ಅದಕ್ಕೆ ತಕರಾರು ಎತ್ತುತ್ತಿತ್ತು. ಇದರಿಂದ ಫಲಾನುಭವಿಗಳು ತೊಂದರೆಗೆ ಸಿಲುಕಿದ್ದರು. ಇಂದಿನ ಸಭೆಯಲ್ಲಿ ಅರಣ್ಯ ಸಚಿವ ಆನಂದಸಿಂಗ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT