ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ವೇದಿಕೆ ಅಧ್ಯಕ್ಷ, ಸದಸ್ಯರ ಮುಂದುವರಿಕೆಗೆ ಆಕ್ಷೇಪ

ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ ಶಿವಮೊಗ್ಗದ ವಕೀಲ ಶೇಷಾದ್ರಿ
Last Updated 4 ಜುಲೈ 2021, 16:58 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 19 ಜಿಲ್ಲೆಗಳಲ್ಲಿ ಅವಧಿ ಪೂರ್ಣಗೊಂಡಿರುವವರನ್ನೇ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಮತ್ತು ಸದಸ್ಯರ ಹುದ್ದೆಗಳಲ್ಲಿ 15 ತಿಂಗಳಿನಿಂದಲೂ ಮುಂದುವರಿಸಿರುವುದನ್ನು ಆಕ್ಷೇಪಿಸಿ ಶಿವಮೊಗ್ಗದ ವಕೀಲ ಎಸ್‌. ಶೇಷಾದ್ರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ.

‘ಗ್ರಾಹಕ ರಕ್ಷಣಾ ಕಾಯ್ದೆ–2020 ಅಥವಾ ಹಳೆಯ ಕಾಯ್ದೆಯಲ್ಲಿ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರು, ಸದಸ್ಯರ ಹುದ್ದೆಗಳನ್ನು ತಾತ್ಕಾಲಿಕ ಆಧಾರದಲ್ಲಿ ಭರ್ತಿ ಮಾಡಲು ಅವಕಾಶವಿಲ್ಲ. ಅನಿವಾರ್ಯ ಕಾರಣಗಳ ಹೊರತಾಗಿ ಅವಧಿ ಪೂರ್ಣಗೊಂಡವರನ್ನು ಹುದ್ದೆಯಲ್ಲಿ ಮುಂದುವರಿಸಲು ಸಾಧ್ಯವಿಲ್ಲ. ಆದರೂ, ನಿವೃತ್ತರಾದವರನ್ನೇ ತಿಂಗಳುಗಳಿಂದ ಈ ಹುದ್ದೆಗಳಲ್ಲಿ ಮುಂದುವರಿಸಲಾಗಿದೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷರಿಗೆ ತಿಂಗಳಿಗೆ ತಲಾ ₹ 1.80 ಲಕ್ಷ ಮತ್ತು ಸದಸ್ಯರಿಗೆ ತಿಂಗಳಿಗೆ ತಲಾ ₹ 1.70 ಲಕ್ಷ ವೇತನ, ಭತ್ಯೆಗಳನ್ನು ಪಾವತಿಸಲಾಗುತ್ತಿದೆ. ನಿವೃತ್ತರಾದವರನ್ನು ಹುದ್ದೆಯಲ್ಲಿ ಮುಂದವರಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಆದೇಶ ಹೊರಡಿಸಲಾಗುತ್ತಿದೆ. 2021ರ ಜೂನ್‌ 30ರಂದು ಮತ್ತೆ ಆದೇಶ ಹೊರಡಿಸಲಾಗಿದೆ. ಆರ್ಥಿಕ ಇಲಾಖೆಯ ಒಪ್ಪಿಗೆ ಇಲ್ಲದೆ ಈ ಎಲ್ಲರಿಗೂ ವೇತನ, ಭತ್ಯೆಗಳನ್ನು ಪಾವತಿಸಲಾಗುತ್ತಿದೆ ಎಂದು ದೂರಿದ್ದಾರೆ.

ನೇಮಕಾತಿ ವಿಳಂಬ: ‘ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷರು, ಸದಸ್ಯರ ನೇಮಕಾತಿಗೆ 15 ತಿಂಗಳಿಂದ ಹಲವು ಬಾರಿ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ತಮಗೆ ಬೇಕಾದ ವ್ಯಕ್ತಿಗಳು ಅರ್ಜಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಕೆಲವೆಡೆ ನೇಮಕಾತಿ ಮುಂದೂಡಲಾಗಿದೆ. ಇನ್ನು ಕೆಲವೆಡೆ ತಮಗೆ ಬೇಕಾದವರನ್ನೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ ಎಂಬ ಕಾರಣಕ್ಕಾಗಿ ನೇಮಕಾತಿ ವಿಳಂಬ ಮಾಡಲಾಗುತ್ತಿದೆ’ ಎಂದು ಶೇಷಾದ್ರಿ ಆರೋಪಿಸಿದ್ದಾರೆ.

ಹಲವು ಮಂದಿ ಅರ್ಹ ವಕೀಲರು ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೂ ಅವಕಾಶ ಕಲ್ಪಿಸಿಲ್ಲ. ಸರ್ಕಾರದ ಧೋರಣೆಯಿಂದಾಗಿ ಅನರ್ಹರು, ಅಪಾತ್ರರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಉನ್ನತ ಹುದ್ದೆಯಲ್ಲಿ ಮುಂದುವರಿಯುವಂತಾಗಿದೆ. ಇದರಿಂದ ನ್ಯಾಯಾಂಗದ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT