ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ಷ್ಮ ಪ್ರಕರಣಗಳಲ್ಲಿ ಎಫ್‌ಐಆರ್‌ ಅಪ್ಲೋಡ್ ವಿಳಂಬ: ಲೋಕಾಯುಕ್ತ ವಾದಕ್ಕೆ ಸಮ್ಮತಿ

Last Updated 1 ಡಿಸೆಂಬರ್ 2022, 18:56 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆಲವು ಸೂಕ್ಷ್ಮ ಪ್ರಕರಣಗಳಲ್ಲಿ ಪ್ರಥಮ ವರ್ತಮಾನ ವರದಿಯನ್ನು (ಎಫ್‌ಐಆರ್) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದರೆ, ಅದರ ಮಾಹಿತಿ ಆರೋಪಿಗೆ ಲಭ್ಯವಾಗುವ ಮತ್ತು ಅದರಿಂದ ಸಾಕ್ಷ್ಯ ನಾಶವಾಗುವ ಸಾಧ್ಯತೆ ಇರುತ್ತದೆ’ ಎಂದು ಲೋಕಾಯುಕ್ತ, ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.

ಈ ಸಂಬಂಧ ವಕೀಲ ಎಸ್‌.ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ಮಾಡಿತು.

ವಿಚಾರಣೆ ವೇಳೆ ಲೋಕಾಯುಕ್ತ ಪರ ವಕೀಲ ವೆಂಕಟೇಶ್ ಎಸ್‌.ಅರಬಟ್ಟಿ ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿ, ‘ಸಮಾಜ ಮತ್ತು ಆರೋಪಿಗಳ ಹಕ್ಕುಗಳ ವಿಚಾರದಲ್ಲಿ ಸಮತೋಲನ ಕಾಯ್ದುಕೊಳ್ಳುವ ದೃಷ್ಟಿಯಿಂದ ಸೂಕ್ಷ್ಮ ಪ್ರಕರಣಗಳಿಗೆ ಸಂಬಂಧಿಸಿದ ಎಫ್‌ಐಆರ್ ಅನ್ನು ವಿಳಂಬವಾಗಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಉಳಿದಂತೆ ಸುಪ್ರಿಂ ಕೋರ್ಟ್ ಆದೇಶದ ಅನುಸಾರಎಫ್‌ಐಆರ್ ದಾಖಲಿಸಿದ 24 ಗಂಟೆಯೊಳಗೆ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗುವುದು’ ಎಂದು ವಿವರಿಸಿದರು.

ಪ್ರಮಾಣಪತ್ರ ದಾಖಲಿಸಿಕೊಂಡ ನ್ಯಾಯಪೀಠ, ‘ಲೋಕಾಯುಕ್ತರು ಕೆಲವೊಂದು ಪ್ರಕರಣಗಳಲ್ಲಿ ಗೋಪ್ಯತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ವಿಲೇವಾರಿ ಮಾಡಿತು.

ಆಕ್ಷೇಪವೇನಿತ್ತು?:‘ಎಫ್‌ಐಆರ್ ದಾಖಲಾದ 24 ಗಂಟೆಗಳಲ್ಲಿ ಅದನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಸಿಬಿಐ ಸೇರಿ ಉಳಿದ ತನಿಖಾ ಸಂಸ್ಥೆಗಳು ಪಾಲಿಸುತ್ತಿವೆ. ಆದರೆ, ಲೋಕಾಯುಕ್ತ ಪೊಲೀಸರು ಪಾಲಿಸುತ್ತಿಲ್ಲ. ಇದರಿಂದ ಕಾನೂನು ಪ್ರಕ್ರಿಯೆಗೆ, ಫಿರ್ಯಾದುದಾರಿಗೆ, ಕಕ್ಷಿದಾರರು ಮತ್ತು ವಕೀಲರಿಗೆ ತೊಂದರೆಯಾಗುತ್ತಿದೆ’ ಎಂಬುದು ಅರ್ಜಿದಾರರು ಅಕ್ಷೇಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT