ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕಿ ಮುಖಕ್ಕೆ ಪಂಚ್; ಜೊಮ್ಯಾಟೊ ಬಾಯ್ ಬಂಧನ

ಆಹಾರ ಪೂರೈಕೆ ತಡವಾಗಿದ್ದಕ್ಕೆ ಜಗಳ * ವಿಡಿಯೊದಲ್ಲಿ ಅಳಲು ತೋಡಿಕೊಂಡ ಯುವತಿ
Last Updated 10 ಮಾರ್ಚ್ 2021, 21:35 IST
ಅಕ್ಷರ ಗಾತ್ರ

ಬೆಂಗಳೂರು: ‘ಜೊಮ್ಯಾಟೊ’ ಮೊಬೈಲ್ ಆ್ಯಪ್ ಮೂಲಕ ಕಾಯ್ದಿರಿಸಿದ್ದ ಆಹಾರದ ಪೂರೈಕೆ ತಡವಾಗಿದ್ದಕ್ಕಾಗಿ ಗ್ರಾಹಕಿ ಹಾಗೂ ಡೆಲಿವರಿ ಬಾಯ್‌ ನಡುವೆ ಜಗಳವಾಗಿದ್ದು, ಸಿಟ್ಟಾದ ಡೆಲಿವರಿ ಬಾಯ್ ಗ್ರಾಹಕಿಯ ಮುಖಕ್ಕೆ ಪಂಚ್ ಮಾಡಿದ್ದಾನೆ. ಗ್ರಾಹಕಿ ಮುಖಕ್ಕೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬ್ಯಾಂಡೇಜ್‌ ಹಾಕಿಸಿಕೊಂಡಿದ್ದಾರೆ.

‘ಮಂಗಳವಾರ ರಾತ್ರಿ ಆಹಾರ ನೀಡಲು ಬಂದಿದ್ದ ಡೆಲಿವರಿ ಬಾಯ್ ಕಾಮರಾಜ್ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ’ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಇಂದ್ರಾಣಿ ಎಂಬುವರು ದೂರು ನೀಡಿದ್ದಾರೆ. ಸ್ಥಳೀಯ ನಿವಾಸಿಯೇ ಆಗಿರುವ ಡೆಲಿವರಿ ಬಾಯ್ ಕಾಮರಾಜ್ (28) ಎಂಬಾತನನ್ನು ಬಂಧಿಸಲಾಗಿದೆ’ ಎಂದು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸ್ ಮೂಲಗಳು ಹೇಳಿವೆ.

ಆಗಿದ್ದೇನು?
‘ಪ್ರಸಾದನ ಕಲಾವಿದೆ ಆಗಿರುವ ಇಂದ್ರಾಣಿ, ಜೊಮ್ಯಾಟೊ ಆ್ಯಪ್‌ನಲ್ಲಿ ಮಂಗಳವಾರ ಮಧ್ಯಾಹ್ನ 3.30ಕ್ಕೆ ಊಟ ಆರ್ಡರ್ ಮಾಡಿದ್ದರು. ಗಂಟೆಯಾದರೂ ಆಹಾರ ಬಂದಿದರಲಿಲ್ಲ. ಹೀಗಾಗಿ, ಆರ್ಡರ್ ರದ್ದುಪಡಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರ್ಡರ್ ರದ್ದಾಗಿ ಕೆಲ ನಿಮಿಷಗಳ ನಂತರ ಸ್ಥಳಕ್ಕೆ ಬಂದಿದ್ದ ಕಾಮರಾಜ್, ತನ್ನ ಬಳಿಯ ಆಹಾರ ಕೊಟ್ಟಿದ್ದ. ತಡವಾಗಿದ್ದಕ್ಕೆ ಆರ್ಡರ್ ರದ್ದುಪಡಿಸಿರುವುದಾಗಿ ಹೇಳಿದ್ದ ಮಹಿಳೆ, ವಾಪಸು ಹೋಗುವಂತೆ ಸೂಚಿಸಿದ್ದರು. ಇದೇ ವಿಚಾರವಾಗಿ ಕಾಮರಾಜ್ ಜಗಳ ತೆಗೆದಿದ್ದ. ‘ನಾನು ನಿಮ್ಮ ಮನೆ ಗುಲಾಮನಲ್ಲ‍’ ಎಂದು ಕೂಗಾಡಿ ಯುವತಿ ಮುಖಕ್ಕೆ ಪಂಚ್ ಮಾಡಿ ಪರಾರಿಯಾಗಿದ್ದ. ಯುವತಿಯ ಮೂಗಿನಿಂದ ರಕ್ತ ಸೋರುತ್ತಿತ್ತು. ಅವರೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು, ನಂತರ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಘಟನೆ ಕುರಿತು ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಹರಿಬಿಟ್ಟಿರುವ ಮಹಿಳೆ ಇಂದ್ರಾಣಿ, ತಮ್ಮ ಮೇಲಾಗಿರುವ ಹಲ್ಲೆ ವಿವರಿಸಿ ಅಳಲು ತೋಡಿಕೊಂಡಿದ್ದಾರೆ. ‘ಇಂಥ ಘಟನೆಗಳು ಮರುಕಳಿಸಬಾರದು. ನನ್ನ ಸ್ಥಿತಿ ಬೇರೆ ಯಾರಿಗೂ ಬರಬಾರದು. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ’ ಎಂದೂ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT