ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಡಿಯೂರಪ್ಪ ಸಂಪುಟದ ಖಾತೆ ಹಂಚಿಕೆ ಬೆನ್ನಲ್ಲೆ ಅಸಮಾಧಾನ ಸ್ಪೋಟ?

ಖಾತೆಗಳ ಮರು ಹಂಚಿಕೆ. ಹಿರಿಯ ಸಚಿವರ ಖಾತೆಗಳಲ್ಲಿ ಬದಲಾವಣೆ ಇಲ್ಲ
ಫಾಲೋ ಮಾಡಿ
Comments

ಬೆಂಗಳೂರು: ನೂತನ ಸಚಿವರಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ಬೆಳಿಗ್ಗೆ ಖಾತೆ ಹಂಚಿಕೆ ಮಾಡಿದ್ದಾರೆ. ಆ ಬೆನ್ನಲ್ಲೆ, ಖಾತೆಗಳ ಮರು ಹಂಚಿಕೆ ಸಚಿವರಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ. ಕೆಲವರು ಮುಖ್ಯಮಂತ್ರಿ ಬಳಿ ತಮ್ಮ ಅತೃಪ್ತಿ ಹಂಚಿಕೊಂಡಿದ್ದಾರೆ ಎಂದೂ ಗೊತ್ತಾಗಿದೆ.

ಅದರಲ್ಲೂ ಸಚಿವ ಕೆ. ಗೋಪಾಲಯ್ಯ ಅವರಿಂದ ಆಹಾರ ಖಾತೆ ಮತ್ತು ಜೆ.ಸಿ. ಮಾಧುಸ್ವಾಮಿ ಅವರಿಂದ ಕಾನೂನು ಮತ್ತು ಸಂಸದೀಯ ಖಾತೆ ವಾಪಸು ಪಡೆದಿರುವುದು ಅವರಿಬ್ಬರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಸಿ.ಸಿ. ಪಾಟೀಲ ಬಳಿ ಇದ್ದ ಗಣಿ, ಆನಂದ್‌ ಸಿಂಗ್‌ ಬಳಿ ಇದ್ದ ಅರಣ್ಯ, ಕೆ.ಸಿ. ನಾರಾಯಣ ಗೌಡ ಅವರ ಬಳಿ ಇದ್ದ ಪೌರಾಡಳೀ ಖಾತೆಯನ್ನೂ ಬದಲಿಸಿ, ಅವರಿಗೆ ಬೇರೆ ಖಾತೆ ನೀಡಲಾಗಿದೆ.

ಆದರೆ, ಮೂವರು ಉಪ ಮುಖ್ಯಮಂತ್ರಿಗಳು (ಗೋವಿಂದ ಕಾರಜೋಳ, ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ), ಹಿಡಿಯ ಸಚಿವರಾದ ಜಗದೀಶ ಶೆಟ್ಟರ್‌, ಆರ್‌. ಅಶೋಕ, ಕೆ.ಎಸ್‌. ಈಶ್ವರಪ್ಪ ಮತ್ತು ಬಿ. ಶ್ರೀರಾಮುಲು ಅವರ ಬಳಿ ಇರುವ ಖಾತೆಯನ್ನು ಬದಲಾಯಿಸಲು ಮುಖ್ಯಮಂತ್ರಿ ಹೋಗಿಲ್ಲ. ಅಲ್ಲದೆ, ಬಸವರಾಜ ಬೊಮ್ಮಾಯಿ, ಎಸ್. ಸುರೇಶ್‌ಕುಮಾರ್‌ ಮತ್ತು ವಿ. ಸೋಮಣ್ಣ ಅವರ ಖಾತೆಯಲ್ಲೂ ಬದಲಾವಣೆ ಮಾಡಿಲ್ಲ. ಇಂಧನ ಮತ್ತು ಬೆಂಗಳೂರು ಅಭಿವೃದ್ಧಿ ಖಾತೆಗಳ ಮೇಲೆ ಕೆಲವು ಸಚಿವರು ಕಣ್ಣಿಟ್ಟಿದ್ದರು. ಆದರೆ, ಆ ಎರಡೂ ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಂಡಿರುವ ಮುಖ್ಯಮಂತ್ರಿ, ಸಚಿವರ ಖಾತೆಗಳನ್ನು ಮರು ಹಂಚಿಕೆ ಮಾಡಿದ್ದಾರೆ.

ಸಚಿವರ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ‌, ‘ಅಸಮಾಧಾನ ವಿಚಾರ ಎಲ್ಲವೂ ಮುಖ್ಯಮಂತ್ರಿಯ ಗಮನದಲ್ಲಿದೆ. ಕೆಲವರ ಜೊತೆ ಅವರು ಮಾತನಾಡಿದ್ದಾರೆ. ಇನ್ನೂ ಕೆಲವರ ಜೊತೆ ಮಾತನಾಡಲಿದ್ದಾರೆ. ತುಮಕೂರಿಗೆ ತೆರಳಿರುವ ಅವರು,ಅಲ್ಲಿಂದ ವಾಪಸ್ ಆದ ಬಳಿಕ ಅಸಮಾಧಾನಿತರ ಜೊತೆ ಚರ್ಚಿಸುತ್ತಾರೆ’ ಎಂದರು.

ವಲಸೆ ಬಂದು ಸಚಿವರಾದವರ ಅಸಮಾಧಾನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯಾರ ಮನಸ್ಸಿನಲ್ಲಿ ಏನಿದೆ ಎನ್ನುವುದು ಮುಖ್ಯಮಂತ್ರಿಗೆ ಗೊತ್ತಿದೆ. ಸಂಜೆಯೊಳಗೆ ಎಲ್ಲವೂ ಸರಿಯಾಗಲಿದೆ. ನಾನು ಹೆಚ್ಚುವರಿ ಖಾತೆ ಬಯಸಿರಲಿಲ್ಲ. ಅದು ಹೆಚ್ಚುವರಿ ಖಾತೆ ಎನ್ನುವುದಕ್ಕಿಂತಲೂ ಜವಾಬ್ದಾರಿ ಎಂದು ಭಾವಿಸಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT