ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಚಾರದ ವಿರುದ್ಧ ರಾಜ್ಯದಾದ್ಯಂತ ಅಭಿಯಾನ: ಡಿ.ಕೆ. ಶಿವಕುಮಾರ್

Last Updated 15 ಏಪ್ರಿಲ್ 2022, 9:44 IST
ಅಕ್ಷರ ಗಾತ್ರ

ಬೆಂಗಳೂರು: ‘ಸಚಿವ ಕೆ.ಎಸ್‌. ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪದಲ್ಲಿ ಮೊದಲು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆ. ಶನಿವಾರದಿಂದ (ಏಪ್ರಿಲ್‌ 16) ನಾವು ಜಿಲ್ಲಾ ಮಟ್ಟದಲ್ಲಿ ಒಂಬತ್ತು ತಂಡಗಳಲ್ಲಿ ವಿವಿಧ ಜಿಲ್ಲೆಗಳಿಗೆ ಹೋಗಿ ಶೇ 40 ಲಂಚದ ವಿಚಾರವಾಗಿ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಬಳಿಕ, ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಈ ರಾಜ್ಯವನ್ನು ಭ್ರಷ್ಟಾಚಾರದ ರಾಜಧಾನಿಯಾಗಿ ಮಾಡಿರುವ ಬಗ್ಗೆ ಅರಿವು ಮೂಡಿಸುತ್ತೇವೆ‘ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಮೃತ ಸಂತೋಷ್‌ ಪಾಟೀಲ ಅವರ ಕುಟುಂಬ ಸದಸ್ಯರು ಯಡಿಯೂರಪ್ಪ ಅವರಿಂದ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಮುಖ್ಯಮಂತ್ರಿ ಹಾಗೂ ಯಡಿಯೂರಪ್ಪ ಅವರು ಈ ಪ್ರಕರಣದಲ್ಲಿ ಈಗಾಗಲೇ ತೀರ್ಪು ನೀಡಿದ್ದಾರೆ. ಮೂರು ತಿಂಗಳಲ್ಲಿ ಈಶ್ವರಪ್ಪನವರು ಮತ್ತೆ ಮಂತ್ರಿಯಾಗುತ್ತಾರೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಇವರಿಂದ ನ್ಯಾಯ ಸಿಗುವುದಿಲ್ಲ. ಹೈಕೋರ್ಟ್ ನ್ಯಾಯಮೂರ್ತಿಯ ಮೇಲುಸ್ತುವಾರಿಯಲ್ಲಿ ಸಂತೋಷ್‌ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದರು.

‘ಬಿಜೆಪಿ ಆಡಳಿತ ಬಗ್ಗೆ ಜನ ನೊಂದಿದ್ದಾರೆ. ರಾಜ್ಯದಲ್ಲಿ 2 ಲಕ್ಷ ನೋಂದಾಯಿತ ಗುತ್ತಿಗೆದಾರರಿದ್ದು, ಹಳ್ಳಿಗಳಲ್ಲಿ ನೋಂದಣಿ ಆಗದ ಸಾಕಷ್ಟು ಗುತ್ತಿಗೆದಾರರು ಇದ್ದಾರೆ. ಅವರ ಪರಿಸ್ಥಿತಿಯೂ ಸಂತೋಷ್‌ ಪಾಟೀಲ ಅವರ ರೀತಿಯಲ್ಲೇ ಇದೆ. ಕಳೆದ ವರ್ಷ ಜೂನ್ 7ರಂದು ಕೆಂಪಣ್ಣ ಅವರು ಪ್ರಧಾನಿಗೆ ಪತ್ರ ಬರೆದ ನಂತರ ಏನೆಲ್ಲಾ ಆಗಿದೆ ಎಂದು ಎಲ್ಲರೂ ನೋಡಿದ್ದೀರಿ. ಶೇ 40 ಕಮಿಷನ್ ವಿಚಾರವಾಗಿ ಪ್ರಧಾನಿ ಸ್ವಲ್ಪ ಚಿಂತನೆ ಮಾಡಿದ್ದರೆ ವಿಷಯದ ಗಂಭೀರತೆ ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ’ ಎಂದರು.

‘ಸಂತೋಷ್ ಪಾಟೀಲ ಅವರು ಕೂಡ ಪತ್ರ ಬರೆದಿದ್ದು, ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಸ್ವತಃ ಬಿಜೆಪಿ ಕಾರ್ಯಕರ್ತನಿಗೆ ಯಾವ ರೀತಿ ತೊಂದರೆ ಆಗಿದೆ ಎಂದು ಸರ್ಕಾರದ ಗಮನ ಸೆಳೆದಿದ್ದರು. ಪಂಚಾಯಿತಿ ಅಧ್ಯಕ್ಷರು, ಸಚಿವರು ಕಾಮಗಾರಿ ನಡೆಸಲು ಸೂಚನೆ ಕೊಟ್ಟ ಬಗ್ಗೆ ಅವರ ಪತ್ನಿ ನೋವು ತೋಡಿಕೊಂಡಿದ್ದಾರೆ. ಶೇ 40 ಕಮಿಷನ್ ವಿಚಾರವನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ತನಿಖೆ ಮಾಡಬೇಕು. ಎಫ್‌ಐಆರ್‌ನಲ್ಲಿ ಶೇ 40 ಲಂಚದ ಕಿರುಕುಳ ವಿಚಾರ ಸ್ಪಷ್ಟವಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಕರಣ ಸೇರಿಸಿಲ್ಲ ಏಕೆ? ಯಾಕೆ ಮುಚ್ಚಿಟ್ಟಿದ್ದೀರಿ? ಸಚಿವರು ಯಾವುದೇ ತಪ್ಪು ಮಾಡಿಲ್ಲ ಎಂದು ನ್ಯಾಯಾಧೀಶರಂತೆ ನೀವೇ ಯಾಕೆ ತೀರ್ಪು ನೀಡುತ್ತಿದ್ದೀರಿ‘ ಎಂದು ಮುಖ್ಯಮಂತ್ರಿಯನ್ನು ಅವರು ಪ್ರಶ್ನಿಸಿದರು.

‘ದೇಶದಲ್ಲೇ ಕರ್ನಾಟಕ ಭ್ರಷ್ಟಾಚಾರದ ಮಹಾ ರಾಜಧಾನಿ ಆಗಿದೆ. ನೀವು (ಬಿಜೆಪಿ) ಅಧಿಕಾರದ ಅವಧಿಯಲ್ಲಿ ನೈತಿಕ ಪೊಲೀಸ್‌ಗಿರಿಗೆ ಬೆಂಬಲ ಕೊಟ್ಟಿದ್ದೀರಿ. ನಂತರ ನಡೆದ ಘಟನೆಗಳು, ಯಾರು ಏನೆಲ್ಲ ಹೇಳಿದ್ದಾರೆ ಎಂದು ನೀವೂ ನೋಡಿದ್ದೀರಿ. ಆ ಮೂಲಕ, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳು ಮಾಡುತ್ತಿದ್ದೀರಿ. ಸದನದಲ್ಲಿ ಸಿದ್ದರಾಮಯ್ಯ ಅವರು ಈ ವಿಚಾರವಾಗಿ ಗೊತ್ತುವಳಿ ಸೂಚನೆ ನೀಡಿದಾಗ ಚರ್ಚೆಗೆ ಅವಕಾಶ ಕೊಟ್ಟಿದ್ದರೆ, ಈ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದೆವು. ಆದರೆ, ಸಭಾಧ್ಯಕ್ಷ ಕಾಗೇರಿ ಅವರು ಸರ್ಕಾರದ ಒತ್ತಡದ ಮೇಲೆ ವಿಚಾರವನ್ನು ಪಕ್ಕಕ್ಕೆ ಸರಿಸಿ ಚರ್ಚೆಗೆ ಅವಕಾಶ ನೀಡಲಿಲ್ಲ. ಅದರ ಪರಿಣಾಮ ಇಂದು ಬಿಜೆಪಿ ಕಾರ್ಯಕರ್ತನ ಜೀವ ಬಲಿಯಾಗಿದೆ’ ಎಂದರು.

ಸಿದ್ದರಾಮಯ್ಯ ಮಾತನಾಡಿ, ‘ಈಶ್ವರಪ್ಪ ಅವರ ವಿರುದ್ಧ ಭ್ರಷ್ಟಾಚಾರ ನಿಷೇಧ ಕಾಯ್ದೆಯಡಿ ಕೇಸ್ ಹಾಕಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪೊಲೀಸರು ಅವರ ಮೇಲೆ ಭ್ರಷ್ಟಾಚಾರ ಆರೋಪದಡಿ ಕೇಸ್ ಹಾಕಬೇಕು. ಅವರಿಗೆ ರಕ್ಷಣೆ ಕೊಡುವ ಕೆಲಸ ಆಗಬಾರದು. ಐಪಿಸಿ ಸೆಕ್ಷನ್ 306ರ ಅಡಿ ಹತ್ತು ವರ್ಷ ಜೈಲು ಶಿಕ್ಷೆಯಿದೆ. ಕೂಡಲೇ ಅವರನ್ನು ಬಂಧಿಸಬೇಕು ಎಂದು ಕಾನೂನು ಹೇಳುತ್ತದೆ. ಆದರೆ, ಇನ್ನೂ ಬಂಧಿಸಿಲ್ಲ‘ ಎಂದರು.

‘ಶನಿವಾರದಿಂದ ಐದು ದಿನಗಳ ಕಾಲ ಪಕ್ಷದ ನಾಯಕರನ್ನು ಒಳಗೊಂಡ ಒಂಬತ್ತು ತಂಡಗಳು ರಾಜ್ಯದ ಎಲ್ಲ ಕಡೆ ಹೋಗಿ, ಎಲ್ಲ ವಿಷಯಗಳ ಬಗ್ಗೆ ಆಯಾ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT