ಬೆಂಗಳೂರು: ಭಾರತದ ಪ್ರಜೆ ಎಂದು ಘೋಷಿಸಿಕೊಂಡು ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಗಿಟ್ಟಿಸಿ ನಂತರ ಅಮೆರಿಕದಲ್ಲಿನ ಹುಟ್ಟೂರಿಗೆ ತೆರಳಿ ಅಲ್ಲಿಯೇ ನೆಲಸಲು ಮುಂದಾಗಿದ್ದ ಮಹಿಳಾ ವೈದ್ಯೆಯೊಬ್ಬರ ನಡೆಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಅಮೆರಿಕಕ್ಕೆ ತೆರಳುವುದಕ್ಕೆ ಎಕ್ಸಿಟ್ ಪರ್ಮಿಟ್ (ನಿರ್ಗಮ ಅನುಮತಿ) ನಿರಾಕರಿಸಿದ್ದ ಕೇಂದ್ರದ ಕ್ರಮವನ್ನು ಪ್ರಶ್ನಿಸಿ ಡಾ. ಭಾನು ಸಿ. ರಾಮಚಂದ್ರನ್ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಅನೈತಿಕ ವಿಧಾನದಲ್ಲಿ ತಮ್ಮ ಗುರಿ ಸಾಧನೆಗೆ ಮುಂದಾಗಿರುವ ಈ ವೈದ್ಯೆಯ ನಡೆ ಖಂಡನಾರ್ಹ’ ಎಂದು ಕಟು ಪದಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.
‘ಕೇಂದ್ರ ಸರ್ಕಾರವು ಅರ್ಜಿದಾರ ವೈದ್ಯೆಯಿಂದ ಅನಿವಾಸಿ ಭಾರತೀಯ (ಎನ್‌ಆರ್‌ಐ) ಅಥವಾ ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ಕೋಟಾದಡಿ ನಿಗದಿಪಡಿಸಲಾಗುವ ಎಂಬಿಬಿಎಸ್ ಪದವಿಯ ಶುಲ್ಕವನ್ನು ಪಡೆದು ವಾಪಸಾಗಲು ಅನುಮತಿ ನೀಡಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಪ್ರಕರಣವೇನು?: ಅರ್ಜಿದಾರರು ಭಾರತೀಯ ದಂಪತಿಯ ಪುತ್ರಿ. 1997ರ ಫೆಬ್ರುವರಿ 5ರಂದು ಅಮೆರಿಕದ ನ್ಯಾಷ್‌ವಿಲ್ಲೆ ನಗರದಲ್ಲಿ ಜನಿಸಿದ್ದರು. ಪೋಷಕರು, ಭಾರತೀಯ ರಾಯಭಾರಿ ಕಚೇರಿಯಲ್ಲಿ ಇವರ ಅಮೆರಿಕ ಪೌರತ್ವ ನೋಂದಾಯಿಸಿದ್ದರು. 6 ವರ್ಷದವರಿದ್ದಾಗ ಪ್ರವಾಸಿ ವೀಸಾ ಪಡೆದು 2003ರ ಜೂನ್ 23ರಂದು ಭಾರತಕ್ಕೆ ಬಂದಿದ್ದರು. ನಂತರ ಕರ್ನಾಟಕದಲ್ಲಿಯೇ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಪೂರೈಸಿದ್ದರು. ಇವರಿಗೆ 2015ರ ಫೆಬ್ರುವರಿ 5ರಂದು 18 ವರ್ಷ ತುಂಬಿತ್ತು.
ಭಾರತೀಯ ನಿವಾಸಿ ಎಂದು ಘೋಷಿಸಿಕೊಂಡು ವೈದ್ಯಕೀಯ ಪದವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದ ಭಾನು, 2015ರ ಮಾರ್ಚ್ 30ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆದಿದ್ದರು. ಸಿಇಟಿಯಲ್ಲಿ 571ನೇ ರ‌್ಯಾಂಕ್ ಗಳಿಸಿ ಮಂಡ್ಯದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸರ್ಕಾರಿ ಕೋಟಾದಲ್ಲಿ 2020ರಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದರು. ನಂತರ ಭಾರತೀಯ ವಲಸೆ ಬ್ಯೂರೊಗೆ ಅರ್ಜಿ ಸಲ್ಲಿಸಿ, ಅಮೆರಿಕದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ನಡೆಸಲು ಎಕ್ಸಿಟ್ ಪರ್ಮಿಟ್ (ನಿರ್ಗಮನಕ್ಕೆ ಅನುಮತಿ) ನೀಡುವಂತೆ ಕೋರಿದ್ದರು.
ಕೇಂದ್ರದ ಆಕ್ಷೇಪ:‘ಅರ್ಜಿದಾರರು ಪ್ರವಾಸಿ ವೀಸಾ ಆಧಾರದಲ್ಲಿ ಭಾರತಕ್ಕೆ ಬಂದಿದ್ದು, ಅಮೆರಿಕ ಪಾರ್ಸ್‌ಪೋರ್ಟ್ ಅವಧಿ 2004ರಲ್ಲೇ ಕೊನೆಗೊಂಡಿದೆ. ಇದು ವಿದೇಶಿಯರ ಕಾಯ್ದೆ-1946ಕ್ಕೆ ವಿರುದ್ಧವಾಗಿದೆ. ಇವರನ್ನು 2021ರಲ್ಲೇ ಅಮೆರಿಕ ಪ್ರಜೆ ಎಂದು ಘೋಷಿಸಿ, ಪಾಸ್‌ಪೋರ್ಟ್ ನೀಡಲಾಗಿದೆ. ಇವರು ತಮ್ಮನ್ನು ಭಾರತೀಯ ಪ್ರಜೆ ಎಂದು ಹೇಳಿಕೊಳ್ಳಲು ಅವಕಾಶವಿಲ್ಲ. ಹೀಗಾಗಿ, ಈ ಅರ್ಜಿ ವಜಾಗೊಳಿಸಬೇಕು ಹಾಗೂ ಸೂಕ್ತ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಬೇಕು’ ಎಂದು ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ್ದ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಚ್.ಶಾಂತಿಭೂಷಣ್ ಕೋರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.