ಸೋಮವಾರ, ಆಗಸ್ಟ್ 8, 2022
23 °C

ಆಟೊ ಓಡಿಸುತ್ತಿದ್ದ ವೈದ್ಯನಿಗೆ ಕೊಪ್ಪಳ ಜಿಲ್ಲೆ ಕುಟುಂಬ ಕಲ್ಯಾಣಾಧಿಕಾರಿ ಹುದ್ದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರದಲ್ಲಿ ಆಟೊ ಓಡಿಸುತ್ತಿದ್ದ ವೈದ್ಯ ಡಾ.ರವೀಂದ್ರನಾಥ್ ಎಂ.ಎಚ್. ಅವರನ್ನು ಕೊಪ್ಪಳ ಜಿಲ್ಲೆಯ ಕುಟುಂಬ ಕಲ್ಯಾಣಾಧಿಕಾರಿಯಾಗಿ ಸರ್ಕಾರ ವರ್ಗಾವಣೆ ಮಾಡಿದೆ.

ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ರವೀಂದ್ರನಾಥ್ ಪರ ತೀರ್ಪು ನೀಡಿದ್ದರೂ ಹುದ್ದೆ ತೋರಿಸದ ಕಾರಣಕ್ಕೆ ರವೀಂದ್ರನಾಥ್ ಅವರು ಬೇಸತ್ತು ‘ಐಎಎಸ್ ಅಧಿಕಾರಿಗಳ ದುರಾಡಳಿತದಿಂದ ನೊಂದ ಜೀವ’ ಎಂದು ಆಟೊ ಮೇಲೆ ಬರೆಸಿಕೊಂಡು, ಅದನ್ನು ಚಾಲನೆ ಮಾಡಿಯೇ ಜೀವನ ನಿರ್ವಹಣೆ ಮಾಡುತ್ತಿದ್ದರು. ಈ ಬಗ್ಗೆ ಬಂದ ವರದಿಯಿಂದ ಎಚ್ಚೆತ್ತುಕೊಂಡ ಸರ್ಕಾರ, ಅವರನ್ನು ಕೊಪ್ಪಳಕ್ಕೆ ವರ್ಗಾವಣೆ ಮಾಡಿದೆ. ಡಾ. ರವೀಂದ್ರನಾಥ್‌ ಅವರು ಎರಡು ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಲಸಿಕಾಧಿಕಾರಿ ಆಗಿದ್ದ ವೇಳೆ ಟೆಂಡರ್ ಟೆಕ್ನಿಕಲ್ ಬಿಡ್ ಇವಾಲ್ಯುಯೇಷನ್‌ ಸಂಬಂಧ ದಾಖಲೆ ಇಲ್ಲ ಎಂಬ ಕಾರಣಕ್ಕೆ ಅವರನ್ನು ಅಮಾನತುಗೊಳಿಸಲಾಗಿತ್ತು. ಜಿಲ್ಲಾ ಮಟ್ಟದ ಹುದ್ದೆಯೇ ಬೇಕು ಎಂದು ಎರಡು ಬಾರಿ ಕೆಎಟಿ ಮೊರೆಹೋಗಿದ್ದರು. ತೀರ್ಪು ಇವರ ಪರವಾಗಿ ಬಂದಿದ್ದರೂ ಜಾಗ ತೋರಿಸಿರಲಿಲ್ಲ.

‘ಕೊರೊನಾ ಸಮಯದಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇತ್ತು. ಈಗ ಖುಷಿಯಾಗಿದೆ. ಬದ್ಧತೆಯಿಂದ ಕೆಲಸ ಮಾಡಿ ಒಳ್ಳೆಯ ಹೆಸರು ಗಳಿಸುತ್ತೇನೆ ಎಂಬ ವಿಶ್ವಾಸ  ಇದೆ. ಆಟೊವನ್ನು ಬಡ ರಿಕ್ಷಾ ಚಾಲಕನಿಗೆ ನೀಡುತ್ತೇನೆ. ಖಾಸಗಿ ಫೈನಾನ್ಸ್‌ನಲ್ಲಿ ಆಟೊ ಖರೀದಿಸಿದ್ದೇನೆ. ಈಗಾಗಲೇ ಡೌನ್‌ ಪೇಮೆಂಟ್ ಮಾಡಿದ್ದೇನೆ, ಕಂತು ಕಟ್ಟಿದರೆ ಆಯಿತು. ದುಡಿದ ಹಣದ ಸ್ವಲ್ಪ ಭಾಗವನ್ನು ಸರ್ಕಾರಿ ಶಾಲೆಯ ಬಡಮಕ್ಕಳ ಏಳ್ಗೆಗೆ ಬಳಸುವಂತೆ ಹೇಳುತ್ತೇನೆ’ ಎಂದು ಡಾ. ರವೀಂದ್ರನಾಥ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು