ವೈದ್ಯರ ವರ್ಗಾವಣೆ ಹಿಂಪಡೆದ ಆದೇಶಕ್ಕೆ ತಡೆ: ನೋಟಿಸ್

ಬೆಂಗಳೂರು: ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಇಬ್ಬರು ಪ್ರಾಧ್ಯಾಪಕರನ್ನು 2019ರಲ್ಲಿ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗೆ ಕಾಯಂ ಆಗಿ ವರ್ಗಾವಣೆ ಮಾಡಲಾಗಿದ್ದ ಆದೇಶವನ್ನು ಏಕಾಏಕಿ ಹಿಂಪಡೆದಿರುವುದನ್ನು ಪ್ರಶ್ನಿಸಲಾದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ಅಂಗರಚನಾ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಪಾರ್ಥಸಾರಥಿ ಮತ್ತು ಶರೀರ ಕ್ರಿಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಶ್ರೀನಿವಾಸ ನಾಯ್ಡು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಡಿ.ಆರ್.ರವಿಶಂಕರ್, ‘ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಅರ್ಜಿದಾರರ ವರ್ಗಾವಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂಬ ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಯ ಆದೇಶ ಕಾನೂನು ಬಾಹಿರವಾಗಿದೆ. ಆದ್ದರಿಂದ, ಕೂಡಲೇ ಈ ಆದೇಶವನ್ನು ರದ್ದುಪಡಿಸಬೇಕು‘ ಎಂದು ಕೋರಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಅರ್ಜಿದಾರರನ್ನು ಈಗಿರುವ ಸ್ಥಾನದಿಂದ ಪಲ್ಲಟಗೊಳಿಸಬಾರದು‘ ಎಂದು ಮಧ್ಯಂತರ ಆದೇಶ ನೀಡಿ, ಪ್ರತಿವಾದಿಗಳಾದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಮತ್ತು ನಿರ್ದೇಶಕರು ಹಾಗೂ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಮತ್ತು ನಿರ್ದೇಶಕರಿಗೂ ನೋಟಿಸ್ ಜಾರಿಗೊಳಿಸಿತು. ವಿಚಾರಣೆಯನ್ನು ಇದೇ 25ಕ್ಕೆ ಮುಂದೂಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.