ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ| ಕ್ರಿಕೆಟ್‌ ಟೂರ್ನಿ ವೇಳೆ ಗಲಾಟೆ: ಇರಿತಕ್ಕೆ ಇಬ್ಬರು ಯುವಕರು ಬಲಿ

Last Updated 18 ಫೆಬ್ರುವರಿ 2023, 4:14 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾ. ಜಿಲ್ಲೆ): ತಾಲ್ಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ಶುಕ್ರವಾರ ನಡೆದ ಕ್ರಿಕೆಟ್‌ ಪಂದ್ಯಾವಳಿ ವೇಳೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಪಿಯುಸಿ ವಿದ್ಯಾರ್ಥಿ ಸೇರಿದಂತೆ ಇಬ್ಬರು ಚಾಕು ಇರಿತಕ್ಕೆ ಬಲಿಯಾಗಿದ್ದಾರೆ.

ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿ ಪ್ರತೀಕ್‌ (17) ಮತ್ತು ಬಿ.ಇ ಪದವೀಧರ ಡಿ.ಎಸ್‌. ಭರತ್‌ಕುಮಾರ್‌ (23) ಚಾಕು ಇರಿತದಿಂದ ಮೃತಪಟ್ಟಿದ್ದಾರೆ. ಈ ಇಬ್ಬರೂ ದೊಡ್ಡಬೆಳವಂಗಲ ಗ್ರಾಮದ ನಿವಾಸಿಗಳು.

ದೊಡ್ಡಬಳ್ಳಾಪುರ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಧೀರಜ್‌ ಮುನಿರಾಜು ಅವರು ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಮೂಲಕ ಶಿವರಾತ್ರಿ ಅಂಗವಾಗಿ ಆಯೋಜಿಸಿದ್ದ ಟೆನಿಸ್‌ ಬಾಲ್ ಕ್ರಿಕೆಟ್‌ ಪಂದ್ಯಾವಳಿ ವೇಳೆ ಈ ದುರ್ಘಟನೆ ನಡೆದಿದೆ. ಹುಲಿಕುಂಟೆ ಗ್ರಾಮದ ವಿನಯ್‌ ಹಾಗೂ ಸ್ನೇಹಿತರು ಈ ಕೃತ್ಯ ಎಸಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿನಯ್ ತಂದೆ ಹುಲಿಕುಂಟೆ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾಗಿದ್ದು, ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.

ಕ್ರಿಕೆಟ್‌ ಪಂದ್ಯಾವಳಿ ನಡೆಯುತ್ತಿದ್ದ ದೊಡ್ಡಬೆಳವಂಗಲ ಗ್ರಾಮದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆಟದ ಮೈದಾನದಲ್ಲಿ ಹುಲಿಕುಂಟೆ ತಂಡದ ಬೆಂಬಲಿಗರು ಕಾರುಗಳನ್ನು ನಿಲ್ಲಿಸಿದ್ದರು. ಮೈದಾನದಲ್ಲಿ ಕಾರು ನಿಲ್ಲಿಸದಂತೆ ಆಟಗಾರರು ಮತ್ತು ಆಯೋಜಕರು ಆಕ್ಷೇಪ ಎತ್ತಿದಾಗ ಗಲಾಟೆ ಆರಂಭವಾಗಿದೆ. ಆಗ ಕೆಲವರು ಕಾರಿನ ಗಾಜುಗಳನ್ನು ಪುಡಿಗಟ್ಟಿದರು. ಘರ್ಷಣೆಯಲ್ಲಿ ತೊಡಗಿದ್ದ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಗ್ರಾಮದ ಬಸ್‌ ನಿಲ್ದಾಣದ ಬಳಿಯ ಬೇಕರಿ ಹತ್ತಿರ ಪಂದ್ಯಾವಳಿಯ ಟೀ– ಶರ್ಟ್‌ ಧರಿಸಿ ನಿಂತಿದ್ದ ಇಬ್ಬರು ಯುವಕರ ಮೇಲೆ, ಕಾರಿನಲ್ಲಿದ್ದ ಗುಂಪಿನ ಯುವಕರು ಡ್ರ್ಯಾಗರ್‌ ಮತ್ತು ಚಾಕುಗಳಿಂದ ದಾಳಿ ನಡೆಸಿದ್ದಾರೆ. ಈ ಇಬ್ಬರ ಗುಪ್ತಾಂಗ ಹಾಗೂ ಹೊಟ್ಟೆಗೆ ಹಲವು ಬಾರಿ ಚಾಕುವಿನಿಂದ ಇರಿದು ಗುಂಪು ಕಾರಿನಲ್ಲಿ ಪರಾರಿಯಾಗಿದೆ. ಮೃತ ಯುವಕರಿಗೂ ಗಲಾಟೆಗೂ ಯಾವುದೇ ಸಂಬಂಧ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಯುವಕರು ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆಯೇ ದೊಡ್ಡಬೆಳವಂಗಲ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿದ್ದರು.

ಕೃತ್ಯ ಎಸಗಿದ ಆರೋಪಿಗಳ ಪತ್ತೆಗಾಗಿ ಸಮೀಪದ ಅಂಗಡಿಗಳ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT